Site icon Vistara News

Dengue Scare: ಸರ್ಕಾರದಿಂದಲೇ ಉಚಿತವಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಲಿ; ಆರ್.‌ ಅಶೋಕ್‌ ಆಗ್ರಹ

Dengue Scare

Karnataka Government Should Conduct Free Dengue Test: Says Opposition Leader R Ashok

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಿಂದ ಈವರೆಗೂ ಡೆಂಗ್ಯೂನಿಂದ (Dengue Cases) 6 ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ, “ರಾಜ್ಯ ಸರ್ಕಾರವೇ ಜನರಿಗೆ ಉಚಿತವಾಗಿ ಡೆಂಗ್ಯೂ ಪರೀಕ್ಷೆ (Dengue Scare) ಮಾಡಿಸಬೇಕು” ಎಂಬುದಾಗಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಆಗ್ರಹಿಸಿದ್ದಾರೆ.

ಆರ್‌.ಅಶೋಕ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಡೆಂಗ್ಯೂ ರೋಗಿಗಳನ್ನು ಭೇಟಿ ಮಾಡಿ, ಸೌಲಭ್ಯ ಪರಿಶೀಲಿಸಿದ ಬಳಿಕ ಮಾತನಾಡಿದರು. “ಡೆಂಗ್ಯೂ ರೋಗ ಹೀಗೆ ಹರಡುವಾಗ ಸರ್ಕಾರ ಪ್ರತಿ ತಾಲೂಕಿನಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಿ ಔಷಧಿ ಪೂರೈಸುವ, ರೋಗ ನಿಯಂತ್ರಿಸುವ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಸರ್ಕಾರ ಮಾಡಿಲ್ಲ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಡೆಂಗ್ಯೂಗೆ ಒಳಗಾಗಿದ್ದಾರೆ. ಇವರಿಗೆ ಪರೀಕ್ಷೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ತೈಲ ದರ ಏರಿಕೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸರ್ಕಾರ ಹಾಕಿರುವಾಗ ಜನರಿಗೆ ಉಚಿತ ಪರೀಕ್ಷೆ ಮಾಡಿಸಲು ಸಾಧ್ಯವಿಲ್ಲವೇ? ಉಚಿತ ಪರೀಕ್ಷೆ ಮಾಡಿದರೆ ಸುಮಾರು 10 ಕೋಟಿ ರೂ. ಖರ್ಚಾಗಬಹುದು. ಅಷ್ಟು ಹಣವನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲವೇ? ಅದಕ್ಕೂ ತೆರಿಗೆ ಹಾಕಬೇಕೆ? ಕೆಲ ಆರೋಗ್ಯ ಕೇಂದ್ರಗಳು 1,000 ರೂ.ವರೆಗೂ ಪರೀಕ್ಷಾ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ವೆಚ್ಚವನ್ನು ಭರಿಸಬೇಕು” ಎಂದು ಆಗ್ರಹಿಸಿದರು.

“ರಾಜ್ಯದಲ್ಲಿ ಡೆಂಗ್ಯೂ ರೋಗ ವೇಗವಾಗಿ ಹರಡುತ್ತಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಜನರು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲಿ ಜನರು ಭಯಕ್ಕೊಳಗಾದರೂ ಸರ್ಕಾರಕ್ಕೆ ಇದರ ಭಯ ಬಂದಿಲ್ಲ. 100 ಮಾದರಿ ಪರೀಕ್ಷೆ ಮಾಡಿದರೆ 13-14 ರಲ್ಲಿ ಡೆಂಗ್ಯೂ ಲಕ್ಷಣ ಕಂಡುಬರುತ್ತಿದೆ. ಬೇರೆ ರೋಗಗಳಿರುವ ವ್ಯಕ್ತಿಗಳಿಗೆ ಡೆಂಗ್ಯೂ ಬಂದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲೆಡೆ ಕಸದ ರಾಶಿ ಇದೆ, ಮಳೆಯಿಂದಾಗಿ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ಆದರೂ ಸರ್ಕಾರ ಏನೂ ಕ್ರಮ ವಹಿಸಿಲ್ಲ ಎಂದು ದೂರಿದರು.

“ಅತಿ ಸಣ್ಣ ವಯಸ್ಸಿನ ಮಕ್ಕಳಿಗೂ ಡೆಂಗ್ಯೂ ರೋಗ ಬರುತ್ತಿದೆ. ಅಧಿಕಾರಿಗಳು ಕೊಠಡಿ ಬಿಟ್ಟು ಹೊರಗೆ ಬರುತ್ತಿಲ್ಲ. ಸರ್ಕಾರ ಡೆಂಗ್ಯೂ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರೆ ಮಾತ್ರ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಬೆಂಗಳೂರು ಸೇರಿದಂತೆ ಅನೇಕ ಕಡೆ ಕಸದ ರಾಶಿ ಬಿದ್ದಿದೆ. ಅದನ್ನು ಸ್ವಚ್ಛ ಮಾಡಲು ಸರ್ಕಾರ ಗಮನಹರಿಸಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರನ್ನು ಬಳಸಿಕೊಂಡು ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು. ಪ್ರತಿ ಆಸ್ಪತ್ರೆಯಲ್ಲಿ ಡೆಂಗ್ಯೂಗೆ ಒಂದು ವಾರ್ಡ್‌ ಮೀಸಲಿಡಬೇಕು” ಎಂದು ಒತ್ತಾಯಿಸಿದರು.

ಆತಂಕ ನಿವಾರಿಸಿ

“ಜನರಲ್ಲಿ ಡೆಂಗ್ಯೂ ಬಗ್ಗೆ ಉಂಟಾಗಿರುವ ಆತಂಕವನ್ನು ನಿವಾರಿಸಲು ಸರ್ಕಾರ ಜಾಗೃತಿ ಮೂಡಿಸಬೇಕು. ಉದ್ಯಾನ, ಸಾರ್ವಜನಿಕ ಸ್ಥಳ, ನೀರು ನಿಲ್ಲುವ ಸ್ಥಳ ಸೇರಿದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಸಬೇಕು. ಆರೋಗ್ಯ ಸಚಿವರು ಎಲ್ಲ ಜಿಲ್ಲೆಗಳಿಗೆ ಹೋಗಿ ಜನರನ್ನು ಭೇಟಿ ಮಾಡಬೇಕು. ಕಾಂಗ್ರೆಸ್‌ನ ಎಲ್ಲ ಸಚಿವರು, ಶಾಸಕರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಬೇಕು” ಎಂದು ಸಲಹೆ ನೀಡಿದರು.

“ಇದರ ಜತೆಗೆ ಝೀಕಾ, ಕಾಲರಾ ಕೂಡ ಕಂಡುಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲೇ ಜನರು ಕಲುಷಿತ ನೀರು ಕುಡಿದು ಸತ್ತಿದ್ದಾರೆ. ಈ ಮೂರು ರೋಗಗಳಿಂದ ಜನರನ್ನು ಕಾಪಾಡಲು ಸರ್ಕಾರ ಹೆಚ್ಚು ಗಮನಹರಿಸಬೇಕು. ಬಿಬಿಎಂಪಿ ಆಯುಕ್ತರಿಗೇ ಸೊಳ್ಳೆ ಕಚ್ಚಿ ಡೆಂಗ್ಯೂ ಬಂದಿರುವುದಾಗ ಬಿಬಿಎಂಪಿ ಬೇರೆಯವರನ್ನು ಕಾಪಾಡಲು ಸಾಧ್ಯವಿಲ್ಲ ಎಂಬ ಆತಂಕ ಜನರಲ್ಲಿ ಮೂಡಿದೆ. ಸಭೆ ಮಾಡುವುದರಿಂದ ಏನೂ ಆಗುವುದಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಕೆಲಸ ಮಾಡಬೇಕು. ನಗರದಲ್ಲಿ ಬಿದ್ದಿರುವ ರಾಶಿ ಕಸವನ್ನು ವಿಲೇವಾರಿ ಮಾಡಲು ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕು. ಹೆಚ್ಚು ಹಣ ನೀಡಬೇಕು” ಎಂದರು.

ಇದನ್ನೂ ಓದಿ: Dengue Scare: ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಡೆಂಗ್ಯೂ; ನೂರಾರು ಮಂದಿ ಆಸ್ಪತ್ರೆಗೆ ದಾಖಲು

Exit mobile version