ಬೆಂಗಳೂರು: ರಾಜ್ಯ ಬಜೆಟ್‌ನ ಬಹುಪಾಲು ಹಣವನ್ನು (Karnataka Budget) ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲಿಟ್ಟಿರುವ ಸಿದ್ದರಾಮಯ್ಯ (Siddaramaiah) ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಬೇಡಿ ಎಂದು ಶಾಸಕರು, ಸಚಿವರಿಗೆ ಸೂಚಿಸಿದೆ. ಆದರೆ, ಅಭಿವೃದ್ಧಿಗೆ ಹಣವಿಲ್ಲದ ‘ಗ್ಯಾರಂಟಿ’ ಸರ್ಕಾರದಲ್ಲಿ ಸಚಿವರಿಗೆ ಸಿಗುತ್ತಿರುವ ಐಷಾರಾಮಿ ಸೌಲಭ್ಯಗಳಿಗೇನೂ ಕೊರತೆಯಿಲ್ಲ. ರಾಜ್ಯದ ಎಲ್ಲ ಸಚಿವರಿಗೆ (Karnataka Ministers) ಐಷಾರಾಮಿ ಇನೋವಾ ಕಾರು ಖರೀದಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ 34 ಸಚಿವರ ಕೊಠಡಿಗಳಿಗೆ ಸುಣ್ಣ-ಬಣ್ಣ, ಪೀಠೋಪಕರಣಗಳ ಖರೀದಿಗೆ 7.20 ಕೋಟಿ ರೂ. ಖರ್ಚು ಮಾಡಿದೆ.
ಹೌದು, ವಿಧಾನಸೌಧದಲ್ಲಿರುವ ಸಚಿವರ ಕೊಠಡಿಗಳಿಗೆ ಸುಣ್ಣ-ಬಣ್ಣ ಬಳಿಯಲು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಖರೀದಿಸಿದ ಪೀಠೋಪಕರಣಗಳ ಬದಲು ಹೊಸ ಪೀಠೋಪಕರಣಗಳ ಖರೀದಿ, ವಾಸ್ತು ಪ್ರಕಾರ ಸಚಿವರ ಕೊಠಡಿಗಳ ನವೀಕರಣ ಸೇರಿ ಹಲವು ಕಾರಣಗಳಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು 7.20 ಕೋಟಿ ರೂ. ವ್ಯಯಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಬರ, ಸಚಿವರಿಗೆ ಐಷಾರಾಮಿ ಸೌಲಭ್ಯ
ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯ ಕೊರತೆಯಾಗಿದೆ. ನೂರಾರು ತಾಲೂಕುಗಳಲ್ಲಿ ಸರಿಯಾಗಿ ಬೆಳೆ ಬೆಳೆಯದೆ ರೈತರು ಕಂಗಾಲಾಗಿದ್ದಾರೆ. ಇನ್ನು ಗ್ಯಾರಂಟಿ ಯೋಜನೆಗಳಿಗಾಗಿ ಹೆಚ್ಚಿನ ಹಣ ವಿನಿಯೋಗಿಸಿದ ಕಾರಣ ಒಂದು ವರ್ಷ ಅಭಿವೃದ್ಧಿ ಯೋಜನೆಗಳಿಗಾಗಿ ಹಣ ಕೇಳಬೇಡಿ ಎಂದು ಶಾಸಕರು, ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಸಚಿವರ ಕೊಠಡಿಗಳ ಸಿಂಗಾರಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ʼ
ಇದನ್ನೂ ಓದಿ: Power Point with HPK : ಈ ರಾಜ್ಯ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ; ಕೆ.ಎಸ್. ಈಶ್ವರಪ್ಪ
ಕೆಲ ದಿನಗಳ ಹಿಂದಷ್ಟೇ ರಾಜ್ಯದ ಎಲ್ಲ ಸಚಿವರಿಗೆ ಐಷಾರಾಮಿ ಸೌಲಭ್ಯಗಳಿರುವ ಇನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಸುಮಾರು 10 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರ ಕುರಿತು ಕೂಡ ಸಾರ್ವಜನಿಕರಿಂದ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಬರ, ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದ ಹೊತ್ತಿನಲ್ಲಿ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವ ಬದಲು ಹೆಚ್ಚಿನ ಹಣ ಪೋಲು ಮಾಡುತ್ತಿರುವುದು ಆಕ್ರೋಶಕ್ಕೂ ಗುರಿಯಾಗಿದೆ.