Site icon Vistara News

Dare devil Mustafa: ಡೇರ್‌ಡೆವಿಲ್‌ಗೆ ತೆರಿಗೆ ವಿನಾಯಿತಿ ನೀಡಿದ ಸಿಎಂ ಸಿದ್ದರಾಮಯ್ಯ: ಗೋಹತ್ಯೆ ನಿಷೇಧ ವಾಪಸ್‌ ಯಾಕೆ ಎಂದ ನೆಟ್ಟಿಗರು!

Daredevil musthafa

#image_title

ಬೆಂಗಳೂರು: ಕನ್ನಡದ ಪ್ರಮುಖ ಕತೆಗಾರರು, ಪರಿಸರ ಲೇಖಕರಲ್ಲಿ ಒಬ್ಬರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯ ಆಧರಿತ ಸಿನಿಮಾ ಡೇರ್‌ಡೆವಿಲ್‌ ಮುಸ್ತಫಾಗೆ ತೆರಿಗೆ ವಿನಾಯಿತಿಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.

“ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ “ಡೇರ್ ಡೆವಿಲ್ ಮುಸ್ತಫಾ” ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸುಗಳು. ಇಂಥದ್ದೊಂದು ಕಾರ್ಯಕ್ಕೆ ಕೈಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಿನಿಮಾ ತಂಡ ನಾಲ್ಕು ದಿನದ ಹಿಂದೆ ಮನವಿ ಮಾಡಿತ್ತು. ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಚಿತ್ರತಂಡದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದರು. ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಅವರು ತಂಡದಲ್ಲಿದ್ದರು.

ಉತ್ತಮ ರೆಸ್ಪಾನ್ಸ್‌:
ಡೇರ್‌ ಡೆವಿಲ್‌ ಮುಸ್ತಫಾ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿರುವ ಸಿದ್ದರಾಮಯ್ಯ ಅವರ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಿರಸ್ಕಾರದ ಸಂತೆಯಲ್ಲಿ ಪ್ರೀತಿಯ ಅಂಗಡಿಗೆ ಸ್ವಾಗತ, ಡಾಲಿ ಧನಂಜಯ ರವರು ಒಳ್ಳೆಯ ಸದಭಿರುಚಿ ಚಿತ್ರಕ್ಕೆ ಕೊಟ್ಟ ಸಹಕಾರಕ್ಕೆ ಧನ್ಯವಾದಗಳು…… ಹೀಗೆಯೇ ಮುಂದುವರೆಯಲಿ, ಒಳ್ಳೆಯ ಕನ್ನಡ ಚಿತ್ರಗಳು ನಿರಂತರವಾಗಿ ಬರುತ್ತಿರಲಿ ಎನ್ನುವಂತಹ ನೂರಾರು ಕಮೆಂಟ್‌ಗಳು ಬಂದಿವೆ.

ಈ ನಡುವೆ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದಾಗಿ ಗುರುವಾರವಷ್ಟೆ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಸ್ವಾತಂತ್ರ್ಯ ಹೋರಾಟಗಾರರದ್ದೂ ಸೇರಿ ಬಿಜೆಪಿ ಅವಧಿಯಲ್ಲಿ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಹಿಂಪಡೆಯುವುದಾಗಿಯೂ ಸರ್ಕಾರ ನಿರ್ಧಾರ ಮಾಡಿತ್ತು. ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದಾಗಿಯೂ ಈ ಹಿಂದೆ ಸರ್ಕಾರ ತಿಳಿಸಿತ್ತು.

ಇದೆಲ್ಲವನ್ನೂ ಗಮನದಲ್ಲರಿಸಿಕೊಂಡ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು, ಸೌಹಾರ್ದತೆಗೆ ಯಾವ ಭಂಗವೂ ಬಂದಿಲ್ಲಾ… ನೀವ್ಗಳಿದನ್ನು ಪದೇಪದೆ ಹೇಳಿ ಇಲ್ಲವೆಂಬ ಭಾವ ಮೂಡಿಸದಿದ್ರೆ ಸಾಕು ಎಂದು ಒಬ್ಬರು ಹೇಳಿದರೆ, ಕರ್ನಾಟಕದ ಜನ ಎಲ್ಲಾರು ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ ನೀವೆ ಬೇರ್ಪಡಿಸುವಿರಿ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ವಾಪಸ್‌ ಎಂಬ ಸುದ್ದಿಯ ಸ್ಕ್ರೀನ್‌ ಶಾಟ್‌ ಹಾಕಿ, ಇದ್ಯಾವ ಸೌಹಾರ್ದತೆ ಎಂದಿದ್ದಾರೆ. ಗ್ಯಾರಂಟಿ ಗೆ ದುಡ್ಡಿಲ್ಲ ಇಲ್ಲಿ, ಅಂಥದ್ದಾರಲ್ಲಿ ಟ್ಯಾಕ್ಸ್ ಪ್ರೀ ಮಾಡ್ತೀರಲ್ಲ ಇದರಿಂದ ಬಡವರ ಹೊಟ್ಟೆ ತುಂಬುತ್ತಾ ಹೇಳಿ ಎಂಬ ಮಾತುಗಳೂ ಕೇಳಿಬಂದಿವೆ. ಒಟ್ಟಾರೆಯಾಗಿ, ಡೇರ್‌ ಡೆವಿಲ್‌ ಮುಸ್ತಫಾ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಬಹುಮಟ್ಟಿಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ ಅನೇಕರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Daredevil Mustafa: ʻಡೇರ್‌ಡೆವಿಲ್ ಮುಸ್ತಫಾʼ ಸಿನಿಮಾ ವೀಕ್ಷಣೆಗೆ ಕೇವಲ ಒಂದು ರೂಪಾಯಿ: ಡಾಲಿ ಪೋಸ್ಟ್‌ ವೈರಲ್‌!

Exit mobile version