Site icon Vistara News

Karnataka Govt: ʼಸಂಬಳಕ್ಕೆ ಕಾಸಿಲ್ಲ, ಗುಣಮಟ್ಟ ಸಾಲಲ್ಲ…ʼ, ನಿವೃತ್ತರಿಗೆ ಸೇವೆಯಿಂದ ಗೇಟ್‌ಪಾಸ್‌ ನೀಡಿದ ಸರ್ಕಾರ

vidhana soudha Bangalore

ಬೆಂಗಳೂರು: ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂಬ ಕಾರಣ ನೀಡಿ, ಸರ್ಕಾರ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ನೌಕರರನ್ನು (Retired Employees) ಕೆಲಸ ಬಿಡಿಸಿ ಮನೆಗೆ ಕಳಿಸಲು ರಾಜ್ಯ ಸರ್ಕಾರ (Karnataka Govt) ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಎಲ್ಲ ಇಲಾಖೆಗಳಿಗೆ ಈ ಸಂಬಂಧ ಟಿಪ್ಪಣಿ ಹೊರಡಿಸಿದ್ದು, ತಕ್ಷಣದ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ನಿವೃತ್ತರು ʼಸಮಾಲೋಚಕ’ ಸೇರಿದಂತೆ ವಿವಿಧ ಹುದ್ದೆಗಳಲ್ಲಿದ್ದು, ಇವರನ್ನು ಉದ್ಯೋಗದಿಂದ ಕೈಬಿಡಲು ನಿರ್ಧರಿಸಲಾಗಿದೆ.

ಸಿಎಂ ಟಿಪ್ಪಣಿಯಲ್ಲೇನಿದೆ?

“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಿತ ಹಲವು ಇಲಾಖೆ- ಸಚಿವಾಲಯಗಳಲ್ಲಿ ಅನಗತ್ಯವಾಗಿ ಹುದ್ದೆಗಳನ್ನು ಸೃಷ್ಟಿಸಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಸಮಾಲೋಚಕ, ವಿಶೇಷ ಸಂಪನ್ಮೂಲ ವ್ಯಕ್ತಿಗಳೆಂದು ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ನಿವೃತ್ತ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುವುದಲ್ಲದೆ, ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿದೆ. ಆದ್ದರಿಂದ, ಸದರಿ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ, ನೌಕರರನ್ನು ನಿಯೋಜಿಸಲು ಸೂಚಿಸಲಾಗಿದೆ.”

“ಹಾಗೆಯೇ, ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೂಚನೆ ಆಧರಿಸಿ ಅಗತ್ಯ ಕ್ರಮ ಕೈಗೊಂಡು ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ” ಸಿಎಎಸ್ ನಿರ್ದೇಶನ ನೀಡಿದ್ದಾರೆ.

ನಿವೃತ್ತ ಅಧಿಕಾರಿಗಳನ್ನು ಹೀಗೆ ನೇಮಕ ಮಾಡಿಕೊಳ್ಳುವುದನ್ನು ವಿರೋಧಿಸಿ ಸಚಿವಾಲಯ ನೌಕರರ ಸಂಘವೂ ಹೋರಾಟ ಮಾಡಿತ್ತು. ಸಂಘದ ಹಿಂದಿನ ಅಧ್ಯಕ್ಷ ಪಿ. ಗುರುಸ್ವಾಮಿ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ಹಾಗೂ ಇತರ ಮುಖಂಡರು ಸಾಕಷ್ಟು ಬಾರಿ ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: DK Shivakumar: ವೃದ್ಧೆಗೆ ಪಿಂಚಣಿ ಕೊಡಲು ಲಂಚ ಕೇಳಿದ ಅಧಿಕಾರಿ ಸಸ್ಪೆಂಡ್‌ಗೆ ಡಿಕೆಶಿ ಸೂಚನೆ

Exit mobile version