ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳು ಈಗಾಗಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ರಾಜಕೀಯ ಕದನಕ್ಕೆ ಸಾಕ್ಷಿ ಆಗಿರುವುದು ಹಳೆಯ ವಿಚಾರ. ಆದರೆ ರಾಜ್ಯ ಸರ್ಕಾರದ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎನ್ನುವುದು ರಾಜ್ಯಪಾಲರ ಅಂಗಳವನ್ನೂ ತಲುಪಿದ್ದು, ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನುದೇಶಿಸಿ(Assembly Session) ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಬಿಪಿಎಲ್ ಕಾರ್ಡ್‌ದಾರರಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೊಷಿಸಿತ್ತು. ಕೇಂದ್ರ ಸರ್ಕಾರ ಈಗಾಗಲೆ ನೀಡುತ್ತಿರುವ 5 ಕೆ.ಜಿ.ಗೆ ಮತ್ತೆ 5 ಕೆ.ಜಿ. ಸೇರಿಸಿ ಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಈ ಬಗ್ಗೆ ಭಾರತೀಯ ಆಹಾರ ನಿಗಮದ(ಎಫ್‌ಸಿಐ) ಜತೆಗೂ ಮಾತುಕತೆ ನಡೆದಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಬಾರದು ಎಂದು ಕೇಂದ್ರ ಸರ್ಕಾರ ಎಫ್‌ಸಿಐಗೆ ಆದೇಶಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸಹೋದ್ಯೋಗಿಗಳು ಸತತ ದಾಳಿ ನಡೆಸುತ್ತಲೇ ಇದ್ದಾರೆ.
ವಿಧಾನಮಂಡಲದ ಅಧಿವೇಶನವು ಸೋಮವಾರ ಆರಂಭವಾಗಿದೆ. ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅವರು ಭಾಷಣ ಮಾಡಿದ್ದಾರೆ. ಈ ಭಾಷಣದಲ್ಲಿ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರವು ವಿವಿಧ ಸ್ಥಿತಿಗತಿಗಳನ್ನು ವಿವರಿಸಿದೆ.
ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳ ಕುರಿತು ಪ್ರಸ್ತಾಪ ಮಾಡಲಾಗಿದೆ. ಸರ್ವಜ್ಞನ ವಚನವನ್ನು ಉಲ್ಲೇಖಿಸಿರುವ ರಾಜ್ಯಪಾಲರು, ಅನ್ನವನು ನೀಡುವುದು ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ಎಂದಿದ್ದಾರೆ. ನನ್ನ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಸಾಧಿಸಹೊರಟಿರುವುದು ಇದನ್ನೆ. ಅದರ ಅನುಷ್ಠಾನವನ್ನು ಶ್ರದ್ಧೆ ಮತ್ತೆ ನೈಜವಾದ ಕಾಳಜಿಯಿಂದ ಪ್ರಾರಂಭಿಸುತ್ತಿದ್ದೇವೆ ಎಂದಿದ್ದಾರೆ.
10 ಕೆ.ಜಿ. ಅಕ್ಕಿಯನ್ನು ನೀಡುವುದರ ಮೂಲಕ ಹಸಿವು ಮುಕ್ತ ನಾಡನ್ನು ಕಟ್ಟಲು ನಾವು ಬದ್ಧರಾಗಿದ್ದೇವೆ. ತಕ್ಷಣದಿಂದಲೇ ಈ ಯೋಜನೆಯನ್ನು ಪ್ರಾರಂಭಿಸುತ್ತಿರುವುದರಿಂದ ಅಗತ್ಯವಿರುವ ಹೆಚ್ಚುವರಿ ಅಕ್ಕಿ ದೊರೆಯುವವರೆಗೆ ಪ್ರತಿ ತಿಂಗಳು, ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಬದಲಾಗಿ 34 ರೂ.ನಂತೆ ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡುತ್ತೇವೆ. ಅದಕ್ಕಾಗಿ ಯಾವುದೇ ತ್ಯಾಗ ಮಾಡಿಯಾದರೂ ಸರಿ ನನ್ನ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನ ಮಾಡುತ್ತದೆ ಎಂದಿದ್ದಾರೆ.
ಮತ್ತೆ ಮಾತು ಮುಂದುವರಿಸಿರುವ ರಾಜ್ಯಪಾಲರು, “ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ” ಎಂದು ಉಲ್ಲೇಖಿಸಿದ್ದಾರೆ. ಕೇಂದ್ರ ಸರ್ಕಾರವು ಹೆಚ್ಚುವರಿ ಅಕ್ಕಿಯನ್ನು ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ನೇರವಾಗಿ ಎಲ್ಲಿಯೂ ಹೆಸರಿಸಿಲ್ಲ. ಆದರೆ ಹಸಿವು ಹಾಗೂ ಬಡವರ ಕುರಿತು ಈ ಮಾತುಗಳನ್ನು ಕೇಂದ್ರ ಸರ್ಕಾರವನ್ನು ಕುರಿತೇ ಆಡಿರುವುದು ಎಂದು ವಿಶ್ಲೇಷಿಸಲಾಗುತ್ತಿದೆ.
ಭ್ರಷ್ಟಾಚಾರ ಹಾಸುಹೊಕ್ಕಾಗಿದೆ
ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವು ಸಾಂಸ್ಥಿಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಇದನ್ನು ತೊಡೆದು ಹಾಕುವುದು ದೊಡ್ಡ ಸವಾಲು. ಈ ಸವಾಲು ಎದುರಿಸಲು ಭ್ರಷ್ಟಾಚಾರವನ್ನು ಮೂಲೋಚ್ಚಾಟನೆ ಮಾಡಲು ನಿಮ್ಮೆಲ್ಲ ಸಹಕಾರ ಕೋರುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಆಡಳಿತಾತ್ಮಕ ಶಾಸನಾತ್ಮಕ ಕ್ರಮಗಳು ಸರ್ಕಾರ ತೆಗೆದುಕೊಳ್ಳಲಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ.
ಪರಿಶಿಷ್ಟ ಜಾತಿ, ಪಂಗಡದ ಜನರ ಭೂಮಿಗಳ ರಕ್ಷಣೆಗೆ ಸಂಬಂಧಿಸಿದಂತೆ ಪಿ.ಟಿ.ಸಿ.ಎಲ್ ಕಾಯ್ದೆಗೆ ಅಗತ್ಯ ಇರುವ ತಿದ್ದುಪಡಿ ತರಲಾಗುವುದು. ದಮನಿತ ಸಮುದಾಯಗಳ ಯುವಜನರಿಗೆ ಸಶಕ್ತವಾದ ಕೌಶಲ್ಯಭರಿತ ತರಬೇತಿಗಳನ್ನು ನೀಡಿ ಉದ್ಯೋಗಗಳನ್ನು ಪಡೆದು ಸ್ವಾವಲಂಬಿಗಳಾಗುವಂತೆ ಮಾಡಲು ನನ್ನ ಸರ್ಕಾರವು ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.
2014ರಲ್ಲಿ ಜಾರಿಯಾದ ಕೃಷಿಭಾಗ್ಯ ಯೋಜನೆಯಿಂದ ರಾಜ್ಯದ ಮಳೆಯಾಶ್ರಿತ ಪುದೇಶಗಳಲ್ಲಿನ ರೈತರು ಕೃಷಿಹೊಂಡ, ಪಾಲಿ ಹೌಸ್ ಮತ್ತು ಶೇಡ್ ನೆಟ್ ಮುಂತಾದ ವ್ಯವಸ್ಥೆ ಬಳಸಿ ಮಾಡಿದ ಕೃಷಿಯಿಂದ ರೈತರು ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಈ ಕುರಿತು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ವರದಿ ನೀಡಿದೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ರೈತಾಪಿ ಜನರ ಬದುಕನ್ನು ಸುಧಾರಿಸಲಾಗುವುದು.
ಇದನ್ನೂ ಓದಿ: Assembly Session Karnataka: ಇಂದಿನಿಂದ ಜಂಟಿ ಅಧಿವೇಶನ, ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕನ ಕುರ್ಚಿ ಖಾಲಿ
ನನ್ನ ಸರ್ಕಾರವು ಈ ಯೋಜನೆಯನ್ನು ಬಲಪಡಿಸುತ್ತದೆ ಮತ್ತು ವಿಸ್ತರಿಸುತ್ತದೆ. ನಮ್ಮ ರಾಜ್ಯವು ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ, ಪುದೇಶವನ್ನು ಹೊಂದಿದೆ. ನೀರಾವರಿಗೂ ಅಭಿವೃದ್ಧಿಗೂ ನೇರವಾದ ಸಂಬಂಧವಿದೆ. ಆದ್ದರಿಂದ ಮುಂದಿನ 5 ವರ್ಷಗಳಲ್ಲಿ ನಮ್ಮ ರಾಜ್ಯವು ಬಹಳ ಕಾಲದಿಂದ ಬಾಕಿ ಉಳಿಸಿಕೊಂಡಿರುವ ಎಲ್ಲ ನೀರಾವರಿ ಯೋಜನೆಗಳನ್ನು ತಾರ್ಕಿಕ ಅಂತ್ಯ ಮುಟ್ಟಿಸಲು ನನ್ನ ಸರ್ಕಾರವು ಬದ್ಧವಾಗಿದೆ ಎಂದಿದ್ದಾರೆ.
2013 ರಿಂದ 2018 ರವರೆಗೆ ಅಧಿಕಾರ ನಡೆಸಿದ ಸರ್ಕಾರ ಜಾರಿಗೆ ತಂದಿದ್ದ ಪಶುಭಾಗ್ಯ ಯೋಜನೆಯಡಿ ಹಸು ಮತ್ತು ಎಮ್ಮೆಗಳನ್ನು ಪಡೆದ ಫಲಾನುಭವಿಗಳಲ್ಲಿ ಕುಟುಂಬದ ಆದಾಯವು ಹೆಚ್ಚಾಗಿರುವುದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿಯಿಂದ ಕಂಡುಬಂದಿದೆ. ಈ ಯೋಜನೆಯನ್ನು ಇನ್ನಷ್ಟು ಸಶಕ್ತಗೊಳಿಸಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
30 ನಿಮಿಷದ ಭಾಷಣ
ಒಟ್ಟು 24 ನಿಮಿಷವಿದ್ದ ಲಿಖಿತ ಭಾಷಣವನ್ನು 30 ನಿಮಿಷದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಓದಿದರು. ಸರ್ಕಾರಗಳ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬದ್ಧ ಎನ್ನುವುದರ ಜತೆಗೆ 40 ದಿನಗಳ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡುವುದೇ ನಮ್ಮ ಗುರಿ ಎಂದರು.