Site icon Vistara News

ಸಂಪುಟ ಸಭೆ ನಿರ್ಧಾರ: 13 ತಿಂಗಳ ಹಿಂದಷ್ಟೆ ಜಾರಿಯಾಗಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್‌: ಸಿಡಿದೆದ್ದ ಬಿಜೆಪಿ

#image_title

ಬೆಂಗಳೂರು: ಅನಧಿಕೃತವಾಗಿ ಹಾಗೂ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಗಟ್ಟುವ ಸಲುವಾಗಿ 2022ರ ಮೇನಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಿಂಪಡೆಯಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

ಬಿಜೆಪಿ ಅನೇಕ ವರ್ಷಗಳಿಂದಲೂ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ನಾಗರಿಕರು ತಮ್ಮ ಇಚ್ಛೆಗೆ ಅನುಗುಣವಾಗಿ ಮತಾಂತರವಾಗಲು ಅವಕಾಶ ಇದ್ದರೂ, ಬಲವಂತವಾಗಿ ಹಾಗೂ ಆಮಿಷವನ್ನೊಡ್ಡಿ ಮತಾಂತರ ಮಾಡಲಾಗುತ್ತಿದೆ ಎನ್ನುವುದು ಅನೇಕ ವರ್ಷಗಳಿಂದಲೂ ಚರ್ಚಿತ ವಿಷಯ. ವಿಶೇಷವಾಗಿ ಕ್ರಿಶ್ಚಿಯನ್‌ ಮಿಷನರಿಗಳ ಕುರಿತು ಬಿಜೆಪಿ ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದೆ. ಇದನ್ನು ತಡೆಯಲು 2022ರಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಮೊದಲಿಗೆ 2022ರ ಮೇನಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದ ಕಾಯ್ದೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರತಿಪಕ್ಷದ ವಿರೋಧದ ನಡುವೆಯೇ ಪಾಸ್‌ ಮಾಡಲಾಗಿತ್ತು.

ಇದೀಗ ಸಿದ್ದರಾಮಯ್ಯ ಸರ್ಕಾರ ಕಾಯ್ದೆಯನ್ನು ಹಿಂಪಡೆಯಲು ನಿರ್ಧಾರ ಮಾಡಿರುವುದಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿ, ಸಮಾಜದಲ್ಲಿ ಶಾಂತಿ ನೆಲೆಸೋದು ಕಾಂಗ್ರೆಸ್‌ಗೆ ಬೇಕಿಲ್ಲ. ಸಮಾಜದಲ್ಲಿ ಅಶಾಂತಿ, ಗಲಭೆ, ಗೊಂದಲ ಇರಬೇಕು ಅಂತ ಕಾಂಗ್ರೆಸ್ ಬಯಸಿದೆ. ನಾವು ಕಾನೂನು ಪ್ರಕಾರವೇ ಮತಾಂತರ ತಡೆ ಮಸೂದೆ ತಂದಿದ್ದೆವು. ಕಾಯ್ದೆಯಲ್ಲಿ ಲೋಪ ಏನೂ ಇರಲಿಲ್ಲ. ಈಗ ಮತಾಂತರ ತಡೆ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸಂಪುಟದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ಘೋಷಿಸಿದ ಗ್ಯಾರಂಟಿಗಳನ್ನ ಜನರಿಗೆ ತಲುಪಿಸಲು ಆಗಿಲ್ಲ. ಆಗಲೇ ಹಿಂದೂ ಸಮಾಜದ ಮೇಲೆ ದ್ವೇಷ ಆರಂಭವಾಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾನೂನನ್ನ ವಜಾ ಮಾಡಿದ್ದೀರಿ. ಈ ಮೂಲಕ ತಮ್ಮ ಹಿಂದೂ ದ್ವೇಷವನ್ನ ಜಾಹೀರು ಮಾಡಿದ್ದೀರಿ. ಇಷ್ಟು ಆತುರತೆ ಏನಿತ್ತು..? ಹೈಕಮಾಂಡ್ ಒತ್ತಡವೇ..? ಸಿದ್ದರಾಮಯ್ಯನವರೇ..? ಎಂದಿದ್ದಾರೆ. ಎಂದು ಟ್ವೀಟ್

ಮಾಜಿ ಸಚಿವ ವಿ. ಸುನಿಲ್‌ಕುಮಾರ್‌ ಟ್ವೀಟ್‌ ಮಾಡಿ, ಕನ್ನಡಿಗರು ಸುಮ್ಮನೆ ಕುಳಿತರೆ ಬೆಂಗಳೂರಿನಲ್ಲಿ ” ಲೂಲು ಮಾಲ್” ಕಟ್ಟಿದವರ ಇತಿಹಾಸವನ್ನೂ‌ ಮುಂದಿನ ಪೀಳಿಗೆಯ ಜನಕ್ಕೆ ಕಾಂಗ್ರೆಸಿಗರು ಹೇಳಿಕೊಡಬಹುದು. ಮಂಗಳೂರು ಕುಕ್ಕರ್ ಸ್ಪೋಟದ ಆರೋಪಿಗೂ ದೇಶಭಕ್ತರ ಪಠ್ಯದ ಸಾಲಿನಲ್ಲಿ ಅವಕಾಶ ನೀಡಬಹುದು. ವಿದ್ಯಾರ್ಥಿಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದ ಈ‌ ನೀತಿಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂಧರ ನಿಷೇಧ ಕಾಯಿದೆ ವಾಪಾಸ್ ತೆಗದುಕೊಳ್ಳುತ್ತದೆ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಈಗ ಅದನ್ನು ನಿಜ‌ ಮಾಡುತ್ತಿದೆ. ಸಮವಸ್ತ್ರ ಸಂಹಿತೆಯನ್ನು ಬದಿಗಿಟ್ಟಿದೆ. ಇಡಿ ರಾಜ್ಯಕ್ಕೆ ಹಿಜಾಬ್ ತೊಡಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.

Exit mobile version