Site icon Vistara News

Odisha Train Accident: ಕನ್ನಡಿಗರ ರಕ್ಷಣೆಗೆ 2013ರಲ್ಲಿದ್ದ ಸಚಿವರನ್ನೇ ನಿಯೋಜಿಸಿದ ಸಿದ್ದರಾಮಯ್ಯ: ಅಪಘಾತ ಸ್ಥಳಕ್ಕೆ ಹೊರಟ ಕರ್ನಾಟಕದ ತಂಡ

Train accident representational image

#image_title

ಬೆಂಗಳೂರು: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ.

ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದರು. ಅವರಿಂದ ಪ್ರಾಥಮಿಕ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.

ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ.

2013ರಲ್ಲಿ ಉತ್ತರಾಖಂಡದಲ್ಲಿ ಭೂ ಕುಸಿತ ಆದಾಗ ಕರ್ನಾಟಕ ಸರ್ಕಾರದ ವತಿಯಿಂದ ಅಂದು ಸಚಿವರಾಗಿದ್ದ ಸಂತೋಷ್‌ ಲಾಡ್‌ ತಂಡ ತೆರಳಿತ್ತು. ಅಂದು ಸಹ ಕಾರ್ಮಿಕ ಸಚಿವರಾಗಿದ್ದ ಸಂತೋಷ್‌ ಲಾಡ್‌, ಕನ್ನಡಿಗರನ್ನು ಯಶಸ್ವಿಯಾಗಿ ಕರೆತಂದಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮತ್ತೆ ಸಂತೋಷ್‌ ಲಾಡ್‌ ಅವರಿಗೆ ಸಿದ್ದರಾಮಯ್ಯ ಹೊಣೆ ನೀಡಿದ್ದಾರೆ.

ಈ ಕುರಿತು ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಸಂತೋಷ್‌ ಲಾಡ್‌, ಒಡಿಶಾ ದುರಂತ ಆಗಬಾರದಿತ್ತು. ನನ್ನ ಜತೆ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿ ಮನೋಜ್ ಟೀಮ್ ಬರ್ತಿದೆ. ಸಿಎಂ ಕರೆ ಮಾಡಿ ತೆರಳುವಂತೆ ಸೂಚಿಸಿದ್ರು. ಕೂಡಲೇ ಹೊರಡುತ್ತಿದ್ದೇನೆ. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದೇನೆ. ರಾಜ್ಯದವರು ಯಾರೂ ಮೃತಪಟ್ಟಿಲ್ಲ. ಸುಮಾರು 260 ಜನರಿಗೆ ಗಾಯ ಆಗಿದೆ. ಕರ್ನಾಟಕದವರ ಬಗ್ಗೆ ಮಾಹಿತಿ ಇಲ್ಲ. ಅಲ್ಲಿಗೆ ಹೋದ ಮೇಲೆ ಎಲ್ಲ ಮಾಹಿತಿ ಸಿಗುತ್ತೆ ನಮ್ಮವರು ಇದ್ರೆ ರಕ್ಷಣೆ ಮಾಡಿಕೊಂಡು ಕರೆದುಕೊಂಡು ಬರುತ್ತೇವೆ ಎಂದರು.

ರಾಜ್ಯ ತುರ್ತು ನಿರ್ವಹಣಾ ಕೇಂದ್ರ (SEOC)ದಲ್ಲಿ ನಾಗರಿಕರ ಅನುಕೂಲಕ್ಕಾಗಿ ಸಹಾಯವಾಣಿ ಸಂಖ್ಯೆ 1070, 080-22253707, 080-22340676 ತೆರೆಯಲಾಗಿದೆ. 9845739999 ಈ ನಂಬರ್‌ಗೆ ಕರೆ ಮಾಡಿ ನಿಮಗೆ ಮಾಹಿತಿ ಕೊಡುತ್ತೇವೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬಲ್ಸೋರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಆಹಾರ ಸಚಿವ ಧರ್ಮೇಂದ್ರ ಪ್ರಧಾನ್, ಗಾಯಾಳುಗಳಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಇದನ್ನೂ ಓದಿ: Odisha Train Accident : ರಾತ್ರಿಯಿಡೀ ಕ್ಯೂ ನಿಂತು ರಕ್ತ ದಾನ ಮಾಡಿ ಮಾನವೀಯತೆ ಮೆರೆದ ಜನ

Exit mobile version