ಬೆಂಗಳೂರು: ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ನಂತರ, ಉಪಮುಖ್ಯಮಂತ್ರಿ ಸ್ಥಾನವಿದ್ದರೆ ಅದರ ನಂತರದ ಪವರ್‌ಫುಲ್ ಸ್ಥಾನ ಎನ್ನಲಾಗುವ ಗೃಹಸಚಿವ ಖಾತೆ ಈಗ ಯಾರಿಗೂ ಬೇಡವಾಗಿದೆ. ಇತ್ತೀಚಿನ ಸರ್ಕಾರಗಳಲ್ಲಿ ಗೃಹಖಾತೆ ಕುರಿತು ಇಂತಹ ಧೋರಣೆ ಚಿಗುರೊಡೆದಿದ್ದು, ಈ ಸರ್ಕಾರದಲ್ಲೂ ಮುಂದುವರಿದಿದೆ.
ಗೃಹಖಾತೆ ನಿಮಗೆ ಒಪ್ಪಿಗೆ ಇದೆಯಾ ಎನ್ನುವ ಪ್ರಶ್ನೆಗೆ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ನಮಗೆ ಒಪ್ಪಿಗೆ ಇರೋದು ಬೇರೆ ವಿಚಾರ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಿಭಾಯಿಸಬೇಕು. ಪಕ್ಷ ಯಾವ ಜವಾಬ್ದಾರಿ ಕೊಡುತ್ತೋ ಅದನ್ನ ಮಾಡಬೇಕು. ನನಗೆ ಬೇರೆ ಖಾತೆ ಸಿಗೋ ನಿರೀಕ್ಷೆ ಇತ್ತು. ನಾನು ಎರಡು ಬಾರಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಗೃಹ ಖಾತೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಗೃಹ ಖಾತೆ ಬಹಳ ಮುಖ್ಯವಾದದ್ದು ಎಂದು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ತೊಂದ್ರೆ ಇಲ್ಲ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಈ ಹಿಂದೆ ಅಂಡರ್‌ವರ್ಲ್ಡ್, ರೌಡಿಗಳ ಉಪಟಳ, ಆಗಿಂದಾಗ್ಗೆ ಕೋಮುಗಲಭೆಗಳ ಹೆಚ್ಚಾಗಿದ್ದಾಗ ಅದೆಲ್ಲದನ್ನೂ ನಿಭಾಯಿಸುವ ಹೊಣೆ ಗೃಹಸಚಿವರಿಗೇ ಬರುತ್ತಿತ್ತು. ಈ ಎಲ್ಲ ಸಂದರ್ಭಗಳಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳುವವರಾಗಿರಬೇಕಿತ್ತು. ಅದಕ್ಕಾಗಿ ಪವರ್‌ಫುಲ್ ಸಚಿವರನ್ನೇ ಈ ಖಾತೆಗೆ ನೇಮಿಸಲಾಗುತ್ತಿತ್ತು. ಹಾಗಾಗಿ ಇದು ಸರ್ಕಾರದ ನಂಬರ್ 2 ಸ್ಥಾನ ಎನ್ನುವ ಮಾತಿತ್ತು.
ಗೃಹ ಇಲಾಖೆಯ ಅಧೀನದಲ್ಲೇ ಗುಪ್ತಚರ ಇಲಾಖೆಯೂ ಬರುತ್ತದೆ. ಆದರೆ ಮುಖ್ಯಮಂತ್ರಿಗಳಾದವರೇ ಗೃಹ ಇಲಾಖೆಯಿಂದ ಗುಪ್ತಚರ ವಿಭಾಗವನ್ನು ಪ್ರತ್ಯೇಕಿಸಿ ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಖಾತೆ ನಂತರ ಮೂರನೇ ಸ್ಥಾನದಲ್ಲಿರುವ ಗೃಹ ಸಚಿವಾಲಯದಲ್ಲೇ ಗುಪ್ತಚರ ಇಲಾಖೆಯನ್ನೂ ಇರಿಸಲಾಗುತ್ತದೆ. ಆದರೆ ರಾಜ್ಯಗಳಲ್ಲಿ ಸಿಎಂ ತಮ್ಮ ಸುಪರ್ದಿಗೆ ಪಡೆದಯುತ್ತಿದ್ದಾರೆ. ಇದೆಲ್ಲದರ ಜತೆಗೆ ಕಳೆದ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ಹಗರಣ ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಉನ್ನತ ಅಧಿಕಾರಿಗಳೇ ಶಾಮೀಲಾಗಿರುವುದು ಕಂಡುಬಂದಿತ್ತು. ಈ ವಿವಾದವು ಗೃಹಖಾತೆ ಹೊಣೆ ಹೊತ್ತವರಿಗೆ ದಿನಬೆಳಗಾದರೆ ಈ ವಿಷಯವಾಗಿ ಪ್ರಶ್ನೆಗಳಿಗೆ ಉತ್ತರ ನೀಡುವುದೂ ಕಿರಿಕಿರಿ ವಿಚಾರ. ಕಾನೂನು ಸುವ್ಯವಸ್ಥೆ ವಿಚಾರಗಳಲ್ಲಿ ಪ್ರತಿಕ್ರಿಯೆ ನೀಡುವಾಗ ಹಿಂದಿನ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಅನೇಕ ಬಾರಿ ಪೇಚಿಗೆ ಸಿಲುಕಿದ್ದರು.
ಅನುದಾನ ಹಾಗೂ ಹೂಡಿಕೆ ವಿಚಾರದಲ್ಲೂ ಗೃಹ ಇಲಾಖೆ ಹಿಂದೆ ಬೀಳುತ್ತಿದೆ. ಇತ್ತೀಚಿನ ದಶಕದಲ್ಲಿ ಐಟಿಬಿಟಿ, ಬೃಃತ್ ಕೈಗಾರಿಕಾ ಇಲಾಖೆ ಅಗಾಧವಾಗಿ ಬೆಳೆದಿವೆ. ಕೇಂದ್ರ ಸರ್ಕಾರದ ನರೇಗಾ, ನಲ್ ಸೇ ಜಲ್ ಮುಂತಾದ ಯೋಜನೆಗಳ ಅನುದಾನದ ಕಾರಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗಾತ್ರ ಹಿಗ್ಗಿದೆ. ಬೃಹತ್ ನೀರಾವರಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ. ಮೊತ್ತದ ಯೋಜನೆಗಳು ನಡೆಯುತ್ತಿರುತ್ತವೆ. ಆದರೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ವೇತನಕ್ಕೇ ಬಹಳಷ್ಟು ವೆಚ್ಚವಾಗುತ್ತದೆ. ಬೃಹತ್ ಯೋಜನೆಗಳನ್ನು ಹಾಕಿಕೊಳ್ಳುವ ಅವಕಾಶಗಳೂ ಕಡಿಮೆಯಾಗುತ್ತಿವೆ. ಇದೆಲ್ಲದರಿಂದಾಗಿ ಗೃಹ ಇಲಾಖೆಗೆ ಈ ಹಿಂದೆ ಇದ್ದ ಪೈಪೋಟಿ ಈಗ ಇಲ್ಲವಾಗಿದೆ.
ಇದನ್ನೂ ಓದಿ: DK Shivakumar: ಸೂಟು-ಬೂಟು ತೊಟ್ಟು ಶಾಲೆಗೆ ಹೋದ ಡಿಸಿಎಂ ಡಿ ಕೆ ಶಿವಕುಮಾರ್