Site icon Vistara News

DA Hike: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್; ತುಟ್ಟಿಭತ್ಯೆ ಶೇ. 3.75 ಹೆಚ್ಚಳ

vidhana soudha at bangalore

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ಸಿಕ್ಕಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ಶೇ 3.75 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.

ಯುಜಿಸಿ, ಎಐಸಿಟಿಇ, ಐಸಿಎಆರ್‌ ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿ (ಶೇ 46ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 1109 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.

ಲಭ್ಯವಿರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಪಾವತಿ ಮಾಡಲು ಹಾಗೂ ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಅಕ್ಟೋಬರ್‌ ತಿಂಗಳ ವೇತನ ಬಟವಾಡೆಗೂ ಮೊದಲು ಪಾವತಿ ಮಾಡದಂತೆ ಆದೇಶದಲ್ಲಿ ಸೂಚಿಸಲಾಗಿದೆ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು ಸಹ ಈ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಯುಜಿಸಿ/ಎಐಸಿಟಿಇ/ಐಸಿಎಆರ್‌ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಸಹ ಈ ಅದೇಶ ಅನ್ವಯವಾಗುತ್ತದೆ.

ಕಳೆದ ಬಾರಿ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ದರಗಳನ್ನು ಜನವರಿ 1 ರಿಂದ ಪೂರ್ವಾನ್ವಯವಾಗಿ ಮೂಲ ವೇತನದ ಶೇಕಡ 31 ರಿಂದ ಶೇಕಡ 35 ಕ್ಕೆ ಪರಿಷ್ಕರಿಸಲಾಗಿತ್ತು. ಇದೀಗ ಜುಲೈ 1 ರಿಂದ ಜಾರಿಗೆ ಬರುವಂತೆ ಶೇ 3.75 ರಷ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.

ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್‌ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈನಲ್ಲಿ ಇದು ನಡೆಯುತ್ತದೆ. ಇತ್ತೀಚಿನ ಗ್ರಾಹಕ ದರ ಸೂಚ್ಯಂಕ (consumer price index) ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ.

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಅಭಿನಂದನೆ ಸಲ್ಲಿಸಿದ್ದಾರೆ.


ನಗದು ರೂಪದಲ್ಲಿ ತುಟ್ಟಿಭತ್ಯೆ ಬಿಡುಗಡೆ ಮಾಡಲು ಮನವಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಇದನ್ನೂ ಓದಿ | Police Insurance : ಹುತಾತ್ಮ ಪೊಲೀಸ್‌ ಸಿಬ್ಬಂದಿ ಗುಂಪು ವಿಮಾ ಮೊತ್ತ ಇನ್ನು 50 ಲಕ್ಷ ರೂ.: ಸಿಎಂ ಸಿದ್ದರಾಮಯ್ಯ

ಇತ್ತೀಚೆಗೆ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 4ರಷ್ಟು ತುಟ್ಟಿ ಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಆದ್ದರಿಂದ ತಾವುಗಳು ದಯಮಾಡಿ ಕೇಂದ್ರ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಶೇ. 4ರಷ್ಟು ತುಟ್ಟಿ ಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಲು ಆದೇಶ ಹೊರಡಿಸಲು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಪಡಾಕ್ಷರಿ ಮನವಿ ಮಾಡಿದ್ದಾರೆ.

Exit mobile version