ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಸರ್ಕಾರಿ ವಕೀಲರ ನೇಮಕಾತಿ ಕುರಿತು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಸಹಾಯಕ ಸರ್ಕಾರಿ ಅಭಿಯೋಜಕರು Cum ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಪರೀಕ್ಷೆಯನ್ನು ಇಲಾಖಾ ತನಿಖೆ ನಡೆಸಿ 10 ದಿನದಲ್ಲಿ ವರದಿ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
2022ರ ಜುಲೈ 23 ಹಾಗೂ 24ರಂದು APP Cum AGP ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವ್ಯಾಪಕವಾದ ದೂರುಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ಕೂಡಲೆ ನಿರ್ದಾಕ್ಷಿಣ್ಯವಾದ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿವರಗಳೊಂದಿಗೆ 10 ದಿನಗಳೊಳಗೆ ವರದಿ ಸಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಒಂದೊಂದಾಗಿ ಬಿಜೆಪಿ ಕಾಲದ ನೇಮಕಾತಿಗಳನ್ನು ಹೊರಗೆ ತೆಗೆಯಲು ಕಾಂಗ್ರೆಸ್ ಮುಂದಾಗಿದೆ. ಪಿಎಸ್‌ಐ ನೇಮಕಾತಿ ಹಗರಣ ಈಗಾಗಲೆ ತನಿಖೆಯಲ್ಲಿರುವುದರಿಂದ ಬಿಜೆಪಿ ಅವಧಿಯ ಮತ್ತಷ್ಟು ಹಗರಣಗಳು ತನಿಖೆಗೆ ಒಳಪಟ್ಟರೆ ಪ್ರತಿಪಕ್ಷವನ್ನು ಕಟ್ಟಹಾಕಲು ಸರ್ಕಾರಕ್ಕೆ ಅನೇಕ ಅಸ್ತ್ರಗಳು ಸಿಕ್ಕಂತಾಗುತ್ತವೆ.