Site icon Vistara News

Karnataka Govt: ಹೊಸ ಸರ್ಕಾರ ಬಂದ ಕೂಡಲೇ ಮೊದಲ ಕೆಲಸ ಇದು!

police commissioner

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಈ ವಾರವೇ ಅಧಿಕಾರ ಚುಕ್ಕಾಣಿ (Karnataka Govt) ಹಿಡಿಯಲಿದ್ದು, ಮೊದಲ ಮೇಜರ್‌ ಸರ್ಜರಿ ಪೊಲೀಸ್ ಇಲಾಖೆಯಲ್ಲಿಯೇ (police department) ನಡೆಯಲಿದೆ. ಎರಡು ಮೂರು ವರ್ಷದಿಂದ ಇಲ್ಲಿ ತಳವೂರಿರುವ ಹಿರಿಯ ಕಿರಿಯ ಅಧಿಕಾರಿಗಳು ಎತ್ತಂಗಡಿಯಾಗಲಿದ್ದಾರೆ.

ಪಕ್ಷಗಳನ್ನು ನೆಚ್ಚಿಕೊಂಡು ಪೋಸ್ಟಿಂಗ್ ಮಾಡಿಸಿಕೊಂಡಿದ್ದ ಪೊಲೀಸ್‌ (karnataka police) ಅಧಿಕಾರಿಗಳಿಗೆ ನಗರದಿಂದ ಗೇಟ್‌ಪಾಸ್, ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳ ಜೊತೆಗೆ ಕೆಳ ಹಂತದ ಅಧಿಕಾರಿಗಳಿಗೂ ಟ್ರಾನ್ಸ್‌ಫರ್ ಬಿಸಿ ಕಾಡಲಿದೆ.

ಕಳೆದ ಐದು ವರ್ಷದ ಆಗುಹೋಗುಗಳನ್ನು ಕಾಂಗ್ರೆಸ್ ಗಮನದಲ್ಲಿಟ್ಟುಕೊಂಡಿದೆ. ಎಷ್ಟೋ ಬಾರಿ ಕೆಲ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನು ಎದುರು ಹಾಕಿಕೊಂಡಿದ್ದರು. ಪ್ರತಿಭಟನೆ ವೇಳೆ ಕೂಡ ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ನಾಯಕರು ಅಸಮಧಾನಗೊಂಡಿದ್ದರು. ʼʼನೀನು ಯಾವ ಪಕ್ಷಕ್ಕೆ ಕೆಲಸ ಮಾಡ್ತೀಯ ಎಂದು ಗೊತ್ತಿದೆʼʼ ಎಂದು ಕಾಂಗ್ರೆಸ್ ನಾಯಕರು ಒಬ್ಬ ಹಿರಿಯ ಅಧಿಕಾರಿಗೆ ಹೇಳಿದ್ದರು. ಸದ್ಯ ಆ ಅಧಿಕಾರಿ ಕೂಡ ಉನ್ನತ ಹುದ್ದೆಯಲ್ಲಿದ್ದಾರೆ.

ಹೀಗಾಗಿ ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಜಂಟಿ ಪೊಲೀಸ್ ಆಯುಕ್ತ, ನಗರ ಪೊಲೀಸ್ ಆಯುಕ್ತ ಹೀಗೆ ಹಲವರ ಬದಲಾವಣೆಯಾಗಲಿದೆ. ಆಯಾ ವಿಭಾಗದ ಶಾಸಕ ಸಚಿವರಿಂದ ʼರೆಕಮಂಡ್’ ಮಾಡಿಸಿ ಬಂದ ಅಧಿಕಾರಿಗಳು ಕೂಡ ನಗರದಲ್ಲಿದ್ದಾರೆ. ʼಜಾತಿ ಆಧಾರಿತ’ವಾಗಿ ಕೂಡ ಕೆಲ ಅಧಿಕಾರಿಗಳು ಪೋಸ್ಟಿಂಗ್ ಮಾಡಿಸಿಕೊಂಡಿದ್ದಾರೆ.

ಬೆಂಗಳೂರು‌ ನಗರದಲ್ಲಿಯೇ ಮುಖ್ಯವಾಗಿ ಸರ್ಜರಿ ನಡೆಯಲಿದ್ದು, ಮುಂದಿನ ನಗರ ಪೊಲೀಸ್ ಆಯುಕ್ತ (Police commissioner) ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಸದ್ಯ ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನೂ ಎತ್ತಂಗಡಿ ಮಾಡುವ ಬಗ್ಗೆ ಗುಸುಗುಸು ಇದೆ. ಈ ಹಿನ್ನೆಲೆಯಲ್ಲಿ ಕಮಿಷನರ್ ರೇಸ್‌ನಲ್ಲಿರುವವರ ಲಾಬಿ ಮುಂದುವರಿದಿದೆ.

ಸೀನಿಯಾರಿಟಿ ಪ್ರಕಾರ ದಯಾನಂದ್ ಅವರು ನಗರ ಪೊಲೀಸ್ ಆಯುಕ್ತರಾಗಬೇಕು. ಪ್ರತಾಪ್ ರೆಡ್ಡಿ ನೇಮಕವಾಗುವ ಮುನ್ನವೇ ದಯಾನಂದ್ ಹೆಸರು ಕೇಳಿ ಬಂದಿತ್ತು. ಆದರೆ ಪ್ರತಾಪ್ ರೆಡ್ಡಿ ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದರು. ಸದ್ಯ ದಯಾನಂದ್ ಅವರ ಬದಲು ಮತ್ತೊಬ್ಬರಿಗೆ ನಗರ ಪೊಲೀಸ್ ಆಯುಕ್ತರ ಹುದ್ದೆ ದೊರೆಯಲಿದೆ. ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾಗಿರುವ ಸಲೀಂ ಅವರ ಹೆಸರು ಕಮಿಷನರ್‌ ಸ್ಥಾನಕ್ಕೆ ಕೇಳಿಬರುತ್ತಿದೆ.

ಇದನ್ನೂ ಓದಿ: Karnataka CM: ಮಾತುಕತೆ ದಿಲ್ಲಿಗೆ ಶಿಫ್ಟ್;‌ ಸಿದ್ದರಾಮಯ್ಯ- ಡಿಕೆಶಿ ಶಾಸಕಬಲ ಎಷ್ಟು?

Exit mobile version