ರಮೇಶ ದೊಡ್ಡಪುರ, ಬೆಂಗಳೂರು
ಇತ್ತೀಚೆಗಷ್ಟೆ ಎಸ್‌ಸಿಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಆ ಸಮುದಾಯಗಳ ವಿಶ್ವಾಸ ಗೆಲ್ಲಲು ಮುಂದಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಮತ್ತೊಂದು ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿದೆ. ಎಸ್‌ಸಿ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ವರ್ಗೀಕರಣ ಮಾಡುವ ನ್ಯಾ. ಸದಾಶಿವ ಆಯೋಗದ ವರದಿಯ ಅನುಷ್ಠಾನದ ಕುರಿತು ನಿರ್ಧಾರ ಹೊರಬೀಳಲಿದೆ.
2011ರ ಜನಗಣತಿ ಪ್ರಕಾರ ರಾಜ್ಯದ ಶೇ.24ರಷ್ಟಿರುವ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಇಲ್ಲಿವರೆಗೆ ಕ್ರಮವಾಗಿ ಶೇ.15 ಹಾಗೂ ಶೇ.3 ಮೀಸಲಾತಿ ಇತ್ತು. ಆದರೆ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಮೀಸಲಾತಿ ಹೆಚ್ಚಿಸಲು ಅನೇಕ ವರ್ಷಗಳಿಂದ ಒತ್ತಾಯ ಕೇಳಿಬಂದಿತ್ತು. ಅಕ್ಟೋಬರ್‌ನಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಂಡಿರುವ ಬೊಮ್ಮಾಯಿ ಸರ್ಕಾರ, ಮೀಸಲಾತಿಯನ್ನು ಕ್ರಮವಾಗಿ ಶೇ.17 ಹಾಗೂ ಶೇ.7ಕ್ಕೆ ಹೆಚ್ಚಳ ಮಾಡುವ ಸುಗ್ರೀವಾಜ್ಞೆ ಹೊರಡಿಸಿದೆ.
ಬೆಳಗಾವಿಯಲ್ಲಿ ಡಿ.19ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರವನ್ನು ಸದನದಲ್ಲಿ ಮಂಡಿಸಿ ಕಾಯ್ದೆಯನ್ನಾಗಿ ಮಾಡಲಾಗುತ್ತದೆ. ಅದರೊಂದಿಗೆ, ಈಗ ರಾಜ್ಯಪಾಲರ ಅಂಕಿತದಲ್ಲಿ ಜಾರಿಯಲ್ಲಿರುವ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಪ್ರಸ್ತಾವನೆಗೆ ಸದನದ ಒಪ್ಪಿಗೆ ದೊರೆತಂತಾಗುತ್ತದೆ.
ಸದಾಶಿವ ಆಯೋಗ ವರದಿ ಜಾರಿ
ರಾಜ್ಯದಲ್ಲಿ ಅನೇಕ ವರ್ಷಗಳಿಂದ ಕೇಳಿಬರುತ್ತಿರುವ ಮತ್ತೊಂದು ಪ್ರಮುಖ ಬೇಡಿಕೆಯೆಂದರೆ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎನ್ನುವುದು. ಒಳಮೀಸಲಾತಿಯನ್ನು ಕಲ್ಪಿಸುವ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲು ನ್ಯಾ. ಎ.ಜೆ. ಸದಾಶಿವ ಆಯೋಗವನ್ನು 2005ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಿತು. ವಿವಿಧ ಕಾರಣಕ್ಕೆ ಕಾರ್ಯ ವಿಳಂಬವಾಗಿತ್ತು. 2008ರಲ್ಲಿ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಆಯೋಗಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿತು. ಸುದೀರ್ಘ ಅಧ್ಯಯನದ ನಂತರ ೨೦೧೨ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಲಾಯಿತು.ಈ ವಿಚಾರದಲ್ಲಿ ಪ್ರಕ್ರಿಯೆಯನ್ನು ಆರಂಭಿಸಲಾಯಿತಾದರೂ ನಂತರ ಬಿಜೆಪಿ ಸರ್ಕಾರ ಪತನವಾಗಿದ್ದು, ಚುನಾವಣೆಗಳ ನಡುವೆ ಸದಾಶಿವ ಆಯೋಗದ ವಿಚಾರ ಕಳೆದುಹೋಯಿತು.
ನ್ಯಾ. ಎ.ಜೆ. ಸದಾಶಿವ ಆಯೋಗದಲ್ಲಿ ಸಂಪೂರ್ಣವಾಗಿ ಏನಿದೆ ಎನ್ನುವುದು ಅಧಿಕೃತವಾಗಿ ಹೊರಬಂದಿಲ್ಲ. ಏಕೆಂದರೆ ಆಯೋಗದ ವರದಿಯನ್ನು ಇನ್ನೂ ಸದನದಲ್ಲಿ ಮಂಡನೆಯನ್ನೇ ಮಾಡಿಲ್ಲ. ಸದನದಲ್ಲಿ ಮಂಡನೆ ಮಾಡಿದ ನಂತರವಷ್ಟೆ ಅದು ಸಾರ್ವಜನಿಕ ದಾಖಲೆಯಾಗಲಿದೆ. ಈ ನಡುವೆ ಬಿಜೆಪಿ ಸರ್ಕಾರವು, ಆಯೋಗದ ವರದಿಯನ್ನು ಪರಾಮರ್ಶೆ ನಡೆಸಿ ಸರ್ಕಾರಕ್ಕೆ ಅದರ ಸಾಧಕ ಬಾಧಕಗಳನ್ನು ತಿಳಿಸುವಂತೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದೆ.
ಶೇ.17ಕ್ಕೆ ಹಂಚಿಕೆಯಾಗಬೇಕು
ನ್ಯಾ. ಸದಾಶಿವ ಆಯೋಗದಲ್ಲಿ, ಎಸ್‌ಸಿ ಸಮುದಾಯಕ್ಕೆ ದೊರಕಿರುವ ಶೇ.15 ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಉಪಪಂಗಡಗಳಿಗೆ ಹಂಚಿಕೆ ಮಾಡಬೇಕು ಎಂದು ಹೇಳಿದೆ ಎನ್ನಲಾಗಿದೆ. ಆದರೆ ಇದೀಗ ಸರ್ಕಾರ ಎಸ್‌ಸಿ ಮೀಸಲು ಪ್ರಮಾಣವನ್ನು ಶೇ.17ಕ್ಕೆ ಏರಿಕೆ ಮಾಡಿದೆ. ಹಾಗಾಗಿ ಒಳಮೀಸಲಾತಿಯನ್ನೂ ಶೇ.17ಕ್ಕೆ ಹೊಂದಿಸಬೇಕಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸರ್ಕಾರದ ಮೂಲಗಳು, ಮೊದಲಿಗೆ ಸುಗ್ರೀವಾಜ್ಞೆಯನ್ನು ಸದನದಲ್ಲಿ ಕಾಯ್ದೆಯಾಗಿ ಪರಿವರ್ತನೆ ಮಾಡಿಕೊಳ್ಳಲಾಗುತ್ತದೆ. ಇದನ್ನು ಸಂಪುಟ ಉಪಸಮಿತಿಗೆ ತಿಳಿಸಿ, ಅದಕ್ಕೆ ಹೊಂದಿಸುವಂತೆ ಹೇಳಲಾಗುತ್ತದೆ. ಸಂಪುಟ ಉಪಸಮಿತಿಯು ಪರಾಮರ್ಶೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಅದಕ್ಕೆ ಕಾನೂನು ಆಯೋಗ ಅಥವಾ ಇನ್ನಾವುದೇ ಅಧಿಕೃತ ಮಾನ್ಯತೆಯಿರುವ ಸಂಸ್ಥೆಯಿಂದ ಪರಿಶೀಲನೆಗೊಳಪಡಿಸಲಾಗುತ್ತದೆ. ಆನಂತರದಲ್ಲಿ, ಒಳಮೀಸಲಾತಿಯನ್ನು ವರ್ಗೀಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎನ್ನಲಾಗಿದೆ.
ಜನವರಿ ಮೊದಲ ವಾರದಲ್ಲಿ ನಿರ್ಧಾರ
ಬಿಜೆಪಿಯು ಈ ಹಿಂದಿನಿಂದಲೂ ಒಳಮೀಸಲಾತಿ ಪರವಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಮುಖವಾಗಿ ಬಲಗೈ ಸಮುದಾಯದ ನಾಯಕರ ಪ್ರಾಬಲ್ಯ ಇರುವುದರಿಂದಾಗಿ, ಬಹಿರಂಗವಾಗಿ ವಿರೋಧಿಸದೇ ಇದ್ದರೂ ಬೆಂಬಲ ನೀಡಲು ಮುಂದಾಗಿರಲಿಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೂರ್ಣ ಐದು ವರ್ಷ ಅಧಿಕಾರದಲ್ಲಿದ್ದರೂ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಲು ಮುಂದಾಗಲಿಲ್ಲ. ಆದರೆ ನಂತರದ ವರ್ಷಗಳಲ್ಲಿ, ದಲಿತ ಎಡಗೈ ಸಮುದಾಯವು ಸಿಟ್ಟಾಗಿ ಕಾಂಗ್ರೆಸ್‌ನ ಅನೇಕ ನಾಯಕರನ್ನು ಸೋಲಿಸಿದ ನಂತರದಲ್ಲಿ ಇದೀಗ ಅಲ್ಲಿಯೂ ಸಹಮತ ಮೂಡಿದೆ ಎನ್ನಲಾಗಿದೆ.
ಈ ಹಿಂದಿನಿಂದಲೂ ಒಳಮೀಸಲಾತಿ ಪರವಾಗಿರುವ ಬಿಜೆಪಿ, ಇದೀಗ ಕೇಂದ್ರಕ್ಕೆ ಶಿಫಾರಸು ಮಾಡಲು ಉತ್ಸುಕತೆ ಹೊಂದಿದೆ. ಡಿಸೆಂಬರ್‌ನಲ್ಲಿ ವಿಧಾನಮಂಡಲದ ಅಧಿವೇಶನದಲ್ಲೆ ವರದಿಯನ್ನು ಮಂಡಿಸಿ, ಉಳಿದ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಎರಡು ಪಂಚಪೀಠ ತೀರ್ಮಾನಗಳು
ಒಳಮೀಸಲಾತಿಯನ್ನು ಕಲ್ಪಿಸುವ ಕುರಿತು ಸುಪ್ರೀಂಕೋರ್ಟ್‌ನ ಎರಡು ತೀರ್ಪುಗಳು ಜಿಜ್ಞಾಸೆಗೆ ಕಾರಣವಾಗಿವೆ. ಆಂಧ್ರಪ್ರದೇಶದಲ್ಲಿ 1997ರಲ್ಲಿ ನ್ಯಾ. ರಾಮಚಂದ್ರ ರಾಜು ನೇತೃತ್ವದ ಆಯೋಗದ ಆಧಾರದಲ್ಲಿ ಒಳಮೀಸಲಾತಿಯನ್ನು ನೀಡಲಾಯಿತು. ಇದನ್ನು ಪ್ರಶ್ನಿಸಿ ದಲಿತ ಮಾಲ ಮಹಾನಾಡು ಆಂದೋಲನದ ಇ.ವಿ. ಚಿನ್ನಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಈ ಕುರಿತು ವಾದವಿವಾದಗಳನ್ನು ಆಳಿಸಿದ ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಪಂಚಸದಸ್ಯ ಪೀಠ, ಸಂವಿಧಾನದ ಅನುಚ್ಛೇದ 341ರ ಅನ್ವಯ ಎಸ್‌ಸಿ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು 2004ರಲ್ಲಿ ತೀರ್ಪು ನೀಡಿತು.
ಈ ತೀರ್ಪಿನಿಂದಾಗಿ, ಈ ಹಿಂದೆಯೇ ಒಳಮೀಸಲಾತಿ ಜಾರಿ ಮಾಡಿದ್ದ ಪಂಜಾಬ್ ಹಾಗೂ ಹರ್ಯಾಣದಲ್ಲಿ ಸಂಚಲನ ಆರಂಭವಾಯಿತು. ಈ ಎರಡೂ ಸರ್ಕಾರಗಳು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದವು. ಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಅರುಣ್ ಮಿಶ್ರಾ ಅವರ ನೇತೃತ್ವದ ಪಂಚಸದಸ್ಯ ಪೀಠ, ಒಳಮೀಸಲಾತಿಯನ್ನು ನೀಡುವ ರಾಜ್ಯಗಳ ಅಧಿಕಾರವನ್ನು ಎತ್ತಿಹಿಡಿಯಿತು. ಸಂವಿಧಾನದ 341 ಎನ್ನುವುದು ಹೊಸ ಜಾತಿ ಹಾಗೂ ಸಮುದಾಯಗಳನ್ನು ಎಸ್‌ಸಿ ಪಟ್ಟಿಗೆ ಸೇರಿಸುವ ಅಥವಾ ಅಧಿಕಾರವನ್ನು ಕೇವಲ ಸಂಸತ್ತಿಗೆ ನೀಡಿದೆ. ಆದರೆ ಅದರ ವ್ಯಾಪ್ತಿಯಲ್ಲಿ ಮೀಸಲಾತಿಯನ್ನು ಪುನರ್ವರ್ಗೀಕರಣ ಮಾಡುವುದರಿಂದ ಸಂವಿಧಾನದ 341ನೇ ಪರಿಚ್ಛೇದದ ಆಶಯಕ್ಕೆ ವಿರುದ್ಧವಾಗುವುದಿಲ್ಲ ಎಂದಿತು.
ಇದೀಗ ಎರಡೂ ವ್ಯತಿರಿಕ್ತ ತೀರ್ಪುಗಳನ್ನೂ ಪಂಚ ಸದಸ್ಯ ಪೀಠವೇ ನೀಡಿರುವುದರಿಂದ ಯಾವುದನ್ನು ಪಾಲನೆ ಮಾಡಬೇಕು ಎಂಬ ಕುರಿತು ಜಿಜ್ಞಾಸೆ ಇದೆ. ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವೇ ಈ ಕುರಿತು ಸ್ಪಷ್ಟನೆ ನೀಡಬಲ್ಲದು. ಆದರೆ ಒಳಮೀಸಲಾತಿಯನ್ನು ಕಲ್ಪಿಸಲು ಮುಂದಾಗಿರುವ ಬಿಜೆಪಿ, ಈ ಚುನಾವಣೆಯಲ್ಲಿ ಅದರ ಫಲವನ್ನು ಪಡೆಯಲು ಎಲ್ಲ ಕಸರತ್ತನ್ನೂ ನಡೆಸಲಿದೆ. ಈಗಾಗಲೆ ಎಸ್‌ಸಿಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ದಲಿತ ಮತಗಳು ಬಿಜೆಪಿಗೆ ವಾಲದಂತೆ ತಡೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಲಿದೆ. ಒಳಮೀಸಲಾತಿ ಕುರಿತು ಕೇಂದ್ರಕ್ಕೆ ಶಿಫಾರಸಾದರೆ ಅದು ಬಿಜೆಪಿಯ ಮತ್ತೊಂದು ರಾಜಕೀಯ ಅಸ್ತ್ರವಾಗಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಬಿಜೆಪಿ ಸುದ್ದಿಗೋಷ್ಠಿ
ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಕುರಿತು ಹೋರಾಟ ನಡೆಸುತ್ತಿದ್ದವರನ್ನು ಅವಮಾನಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಿಗೆ ಬಿಜೆಪಿ ಸುದ್ದಿಗೋಷ್ಠಿ ನಡೆಸಿತು. ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ,
ಹರಿಹರದಿಂದ ಜನ ಬಂದು ಪ್ರತಿಭಟನೆ ಮಾಡುತ್ತಿದ್ದರು. ಸಿಎಂ ಬೆಂಗಳೂರಿನಲ್ಲಿ ಇಲ್ಲದಿದ್ದರಿಂದ ಸಚಿವ ಸೋಮಣ್ಣ ಮನವಿ ಪಡೆಯಲು ಹೋಗಿದ್ದಾರೆ. ಇದನ್ನು ಅಲ್ಲಿದ್ದವರು ವಿರೋಧ ಮಾಡಿದ್ದಾರೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಭಾಸ್ಕರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿಕೊಂಡು ಇದನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ದಾರಿ ತಪ್ಪಿಸಲು ಬಂದವರು ಮಾತ್ರ ರಸ್ತೆ ತಡೆ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ, ಆಗ ಕಾಲು ತುಳಿತ ಆಗಿದೆ. ಸಮಸ್ಯೆ ಆದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.
ತಮ್ಮ ಪಕ್ಷ ಬಂದರೆ ಒಳಮೀಸಲಾತಿ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಸಿದ್ದರಾಮಯ್ಯ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ. ಖರ್ಗೆ, ಪರಮೇಶ್ವರ್, ಮಹದೇವಪ್ಪ ಇದಕ್ಕೆ ವಿರೋಧ ಮಾಡ್ತಿದ್ದಾರೆ ಎಂದು ಹೇಳುತ್ತಾರೆ. ಹುಬ್ಬಳ್ಳಿ ಸಮಾವೇಶದಲ್ಲಿ ಒಳ ಮೀಸಲಾತಿ ಬಗ್ಗೆ ಭಾಷಣ ಮಾಡಿದರು. ಆದರೆ ಮೀಸಲಾತಿ ನೀಡುವ ಕುರಿತು ಭರವಸೆ ನೀಡಲಿಲ್ಲ.
ಒಳ ಮೀಸಲಾತಿಗೆ ಕೆಲ ಸಮುದಾಯಗಳ ವಿರೋಧ ಇದೆ. ಈಗಾಗಲೇ ರಾಜ್ಯದಲ್ಲಿ ಬೋವಿ ನಿಗಮ, ಬಂಜಾರ ನಿಗಮ ಮಾಡಿದ್ದೇವೆ. ಮೀಸಲಾತಿ ಹಂಚಿಕೆ ಮಾಡಿಕೊಳ್ಳುವುದು ಮಾತ್ರ ಬಾಕಿಯಿದೆ. ಅದನ್ನು ಮಾಡಬೇಕು. ಶೀಘ್ರದಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ | ಸದಾಶಿವ ಆಯೋಗ ಕುರಿತು ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ: ದಲಿತರಿಗೆ ವಂಚಿಸಿದ್ದು ನೀವೇ ಎಂದ ಬಿಜೆಪಿ