Site icon Vistara News

Karnataka Govt: ಬಿಜೆಪಿ ಯೋಜನೆಗಳ ವಿರುದ್ಧ ತನಿಖಾಸ್ತ್ರ ಪ್ರಯೋಗ: ಪರಿಶೀಲನೆ, ತಡೆಗೆ ಮುಂದಾದ ಕಾಂಗ್ರೆಸ್‌ ಸರ್ಕಾರ

DK Shivakumar and Basavaraj Bommai

#image_title

ಬೆಂಗಳೂರು: ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿತು, 40% ಕಮಿಷನ್‌ ಪಡೆಯುತ್ತಿತ್ತು ಎಂದು ಆರೋಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಇದೀಗ ಹಿಂದಿನ ಸರ್ಕಾರದ ಯೋಜನೆಗಳ ಕುರಿತು ತನಿಖೆ ನಡೆಸಲು ಮುಂದಾಗಲಾಗಿದೆ.

ಲೋಕಸಭೆ ಚುನಾವಣೆಗೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹೊಸ ಸರ್ಕಾರದ ಯೋಜನೆಗಳಿಗೆ ಹಣ ಹೊಂದಿಸಬೇಕಿರುವುದರಿಂದಲೂ ಹಳೆಯ ಯೋಜನೆಗಳಿಗೆ ಕೊಕ್ಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈಗಾಗಲೆ ನೀರಾವರಿ ಇಲಾಖೆ ಸೇರಿ ವಿವಿಧ ನಿಗಮ ಮಂಡಳಿಗಳಿಂದ ಅನುಷ್ಠಾನವಾಗುತ್ತಿದ್ದ ಹೊಸ ಯೋಜನೆಗಳನ್ನು ಸ್ಥಗಿತಗೊಳಿಸಲು ಹಾಗೂ ಹಣಕಾಸು ಪಾವತಿಯನ್ನು ತಡೆಹಿಡಿಯಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದೀಗ ವಿವಿಧ ಇಲಾಖೆಗಳ ಸಚಿವರೂ ಅದೇ ಮಾರ್ಗ ಅನುಸರಿಸುತ್ತಿದ್ದಾರೆ.

ಡಿ.ಕೆ. ಶಿವಕುಮಾರ್‌: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನೇಮಕವಾದ ದಿನವೇ ಬಿಬಿಎಂಪಿ ಅಧಿಕಾರಿಗಳ ಸಭೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ನಡೆಸಿದರು. ಕಳೆದ ಮೂರು ವರ್ಷಗಳಿಂದ ಬೆಂಗಳೂರಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಆ ಕೆಲಸ ಆಗಿದೆ, ಅದಕ್ಕೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು.

ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗಾರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು. ಯಾವ, ಯಾವ ಕಾಮಗಾರಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡಬೇಕು.

ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ. ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ. ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ.

ಕಣ್ಣಲ್ಲಿ ಕಂಡಿದ್ದು ಮಾತ್ರವೇ ನಂಬಿಕೆಗೆ ಅರ್ಹ. ಹೀಗಾಗಿ ಕಣ್ಣಲ್ಲಿ ನೋಡಿ ನಂಬೋಣ. ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ ಗಳು ಇರುವುದರ ಔಚಿತ್ಯವಾದರೂ ಏನು? ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದಿನೇಶ್‌ ಗುಂಡೂರಾವ್‌: ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್‌, ಇಲಾಖೆಯಲ್ಲಿ ಸವಾಲು ಇರುವುದು ಖಂಡಿತ. ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರಿಗೆ ಸಮಾಧಾನ ಆಗುವ ರೀತಿಯಲ್ಲಿ ಕೆಲಸ ಮಾಡ್ತೇನೆ. ಹಿಂದಿನ ಸರ್ಕಾರದ ಯೋಜನೆಗಳ ಅಕ್ರಮದ ಬಗ್ಗೆ ನಾವೇ ಆರೋಪ ಮಾಡಿದ್ದೆವು. ಅದೆಲ್ಲವನ್ನೂ ಪರಿಶೀಲನೆ ಮಾಡ್ತೇವೆ. ಯಾರ ಮೇಲೋ ಸೇಡು ತೀರಿಸಿಕೊಳ್ಳುವುದಕ್ಕಾಗಿಯಲ್ಲ. ಆದರೆ ವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ತನಿಖೆ ಮಾಡುವ ಬಗ್ಗೆಯೂ ಗಮನ ಹರಿಸುತ್ತೇವೆ.

ಎಲ್ಲೆಲ್ಲಿ ಲೋಪಗಳಾಗುತ್ತವೆ ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಚಾಮರಾಜನಗರದ ವಿಚಾರ ಕೂಡ ಅದರಲ್ಲೊಂದು. ನಾಳೆ ಎಲ್ಲವನ್ನೂ ಇಲಾಖೆಯ ರಿವ್ಯೂ ಮಾಡ್ತೇನೆ. ರಿವ್ಯೂ ಬಳಿಕ ಸುಧಾರಣೆಯ ಬಗ್ಗೆ ಮಾಹಿತಿ ನೀಡ್ತೇನೆ ಎಂದಿದ್ದಾರೆ.

ಪ್ರಿಯಾಂಕ್‌ ಖರ್ಗೆ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ರಚಿಸಲಾಗಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಎಂದರೆ ಕಳ್ಳಕಾಕರ ಅಭಿವೃದ್ಧಿ ನಿಗಮ ಎಂಬಂತಾಗಿದೆ ಎಂದಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಶೀಘ್ರದಲ್ಲೇ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಈ ಕುರಿತು ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಈ ಮಾತನ್ನು ನಾನು ಮೂರು ವರ್ಷದಿಂದ ಹೇಳುತ್ತಿದ್ದೇನೆ. ಈ ಹಿಂದೆ ಸದನದಲ್ಲಿ ಪ್ರಸ್ತಾಪ ಸಹ ಮಾಡಿದ್ದೇನೆ. ಮಾನವ ಸಂಪನ್ಮೂಲ ಎಂದು ಒಂದು ಸಂಘಟನೆಗೆ 500 ಕೋಟಿ ರೂ. ಕೊಟ್ಟಿದ್ದರು. ನಿಯಮ ಮೀರಿ ಹಣ ಕೊಟ್ಟಿದ್ದರು.

ಕೆರೆ ಒತ್ತುವರಿ ಮಾಡಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಆಗಿದೆ. ನಾನು ಈಗಾಗಲೇ ವೈಯಕ್ತಿಕವಾಗಿ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ಸಮಗ್ರವಾಗಿ ತನಿಖೆ ನಡೆಸುವಂತೆ ಪತ್ರ ಬರೆದಿದ್ದೇನೆ, ಭೇಟಿಯಾಗಿ ಮಾತಾಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಏನೇನು ಆಗಿದೆ ಎಂದು ತನಿಖೆ ಆಗಬೇಕು ಎಂದು ಕೇಳಿದ್ದೇನೆ.

ಸಿಎಂ ಅವರು ಎರಡು ದಿನಗಳಲ್ಲಿ ಇಲಾಖಾ ತನಿಖೆಗೆ ಬರೆಯುತ್ತಾರೆ. ಸಮಗ್ರ ತನಿಖೆ ಮಾಡ್ತೇವೆ. ಎಲ್ಲಾ ಇಲಾಖೆಗಳಲ್ಲೂ ಈ ರೀತಿ ಆಗಿದೆ‌. ನಿಯಮ ಉಲ್ಲಂಘನೆ ಮಾಡಿ ಕರೆದಿರುವ ಟೆಂಡರ್ ರದ್ದು ಮಾಡಲು ಈಗಾಗಲೆ ಆದೇಶ ಆಗಿದೆ.

ಈಶ್ವರ ಖಂಡ್ರೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಎಲ್ಲ ಮಾಹಿತಿಯನ್ನ ಪಡೆಯುತ್ತೇನೆ. ಹಿಂದಿನ ಸರ್ಕಾರ ಆನೆ ಕಾರ್ಯಾಚರಣೆಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ಆರೋಪ ಇದೆ. ಇದರಿಂದ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಜನರ ಜೀವ ಉಳಿಸಲು ಮಾನವ ಮತ್ತು ವನ್ಯ ಮೃಗಗಳ ಸಂಘರ್ಷ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ.

ನಮ್ಮ ಇಲಾಖೆಯಲ್ಲಿ ಈ ಹಿಂದಿನ ಸರ್ಕಾರ ಏನೇ ಅಕ್ರಮ ನಡೆಸಿದ್ದರೂ ಅದರ ಬಗ್ಗೆ ತನಿಖೆಯನ್ನು ನಡೆಸುತ್ತೇವೆ. ಮುಂದೆ ಅಕ್ರಮ ಆಗದ ರೀತಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Congress Guarantee: ಮಗುವಿಗೆ ಬಟ್ಟೆ ಹೊಲಿಸೋಕೆ ಸೈಜ್‌ ಹುಡುಕುತ್ತಾ ಇದ್ದೀವಿ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್!‌

Exit mobile version