ಬೆಂಗಳೂರು: ಈ ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿರುವ ಮತಾಂತರ ನಿಷೇಧ ಕಾನೂನು ಹಾಗೂ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಈ ಅಧಿವೇಶನದಲ್ಲೇ (Assembly Session) ರಾಜ್ಯ ಸರ್ಕಾರ ಹಿಂಪಡೆಯುವುದು ಬಹುತೇಕ ಖಚಿತವಾಗಿದೆ.
ಈ ಕುರಿತು ಮಂಗಳವಾರ ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ (ಬಿಎಸಿ) ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಬಹಿಷ್ಕರಿಸಿದ್ದ ಸಭೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್, ಟಿ.ಬಿ. ಜಯಂದ್ರ, ಸತೀಶ್ ಜಾರಕಿಹೊಳಿ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತಿ ಇದ್ದರು.
ಈ ಬಾರಿಯ ಅಧಿವೇಶನದಲ್ಲಿ ಸದನದಲ್ಲಿ ಮಂಡಿಸುವ ವಿಧೇಯಕಗಳ ಬಗ್ಗೆ ಚರ್ಚೆ ನಡೆದಿದೆ. ಒಟ್ಟು ಏಳು ವಿಧೇಯಕಗಳ ಕುರಿತು ತೀರ್ಮಾನ ಮಾಡಲಾಗಿದೆ.
1) ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕ ಮಂಡನೆ
2) ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ
3) ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ನಿರಸನಗೊಳಿಸುವ) ವಿಧೇಯಕ
4) ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ
5) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ
6) ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ
7) ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ
ಇದನ್ನೂ ಓದಿ: Farm Bills: ಮೋದಿ ಸರ್ಕಾರದ 3 ಕೃಷಿ ಕಾಯ್ದೆ ವಾಪಸ್: ಇವುಗಳಿಂದ ದಲ್ಲಾಳಿಗಳಿಗೇ ಲಾಭ ಎಂದ ರಾಜ್ಯ ಸರ್ಕಾರ
ಮತಾಂತರ ನಿಷೇಧ ಕಾನೂನನ್ನು ಬಿಜೆಪಿ ಅವಧಿಯಲ್ಲಿ ಜಾರಿ ಮಾಡಲಾಗಿತ್ತು. ಈ ಕಾನೂನನ್ನು ಕಾಂಗ್ರೆಸ್ ವಿರೋಧಿಸುತ್ತ ಬಂದಿದೆ. ಅದೇ ರೀತಿ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿತ್ತು. ಈ ಕಾಯ್ದೆ ತಿದ್ದುಪಡಿಗೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರವು ಸಮ್ಮತಿ ಸೂಚಿಸಿ ಸದನದಲ್ಲಿ ಕಾಯ್ದೆ ರೂಪಿಸಿತ್ತು. ನವದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಮೂರೂ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಆದರೆ ಕರ್ನಾಟಕದಲ್ಲಿ ಹಿಂಪಡೆಯುವುದಿಲ್ಲ ಎಂದು ಬಿಜೆಪಿ ತಿಳಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಕೃಷಿ ಕಾಐದೆ ತಿದ್ದುಪಡಿಗಳನ್ನು ಹಿಂಪಡೆಯಲು ಸಿದ್ಧತೆ ನಡೆಸಿದೆ.
ಜುಲೈ 21ರವರೆಗೆ ಅಧಿವೇಶನ
ವಿಧಾನ ಮಂಡಲದ ಅಧಿವೇಶನವನ್ನು 21ನೇ ಜುಲೈ 2023ರವರೆಗೆ ಮುಂದುವರಿಸಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಿಳಿಸಿದರು. ವಿಧಾನಸಭೆಯ ಕಲಾಪದ ಮಧ್ಯೆ ಮಾತನಾಡಿದ ಯು.ಟಿ. ಖಾದರ್, ಜುಲೈ 5 ರಂದು ಈಗಾಗಲೆ ಸ್ವೀಕರಿಸಿದ ವಿಧೇಯಕಗಳ ಮಂಡನೆ ಮಂಡಿಸುವುದು, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ, ಜುಲೈ 6ರಂದು ಬೆಳಿಗ್ಗೆ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಲಿದ್ದಾರೆ. ಜುಲೈ 7ರಂದು ಮುಖ್ಯಮಂತ್ರಿಗಳು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಜುಲೈ 10ರಿಂದ 19ರವೆಗೆ ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಜುಲೈ 20ರಂದು ಹಣಕಾಸು ವಿಧೇಯಕಗಳ ಅಂಗೀಕಾರವಿರಲಿದೆ ಎಂದು ತಿಳಿಸಿದರು.