Site icon Vistara News

Karnataka HC: ನ್ಯಾಯಮೂರ್ತಿಗಳು ಕೂಡ ಮನುಷ್ಯರೇ; ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಅಪರಾಧವಲ್ಲ ಆದೇಶ ಹಿಂಪಡೆದ ಹೈಕೋರ್ಟ್

Karnataka HC

Karnataka HC

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಅನ್‌ಲೈನ್‌ನಲ್ಲಿ ಮಕ್ಕಳ ಆಶ್ಲೀಲ ದೃಶ್ಯಗಳನ್ನು (Child Pornography) ನೋಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ರ ‘ಬಿ’ ಅನ್ವಯ ಅಪರಾಧವಲ್ಲವೆಂದು ಜುಲೈ 10ರಂದು ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ (Karnataka HC) ಹಿಂಪಡೆದಿದೆ.

“ನ್ಯಾಯಮೂರ್ತಿಗಳು ಕೂಡ ಮನುಷ್ಯರೇ. ಹೀಗಾಗಿ ಸಹಜವಾಗಿ ಕೆಲವೊಮ್ಮೆ ತಪ್ಪುಗಳಾಗುತ್ತವೆ. ನಾವು ದೋಷರಹಿತರಲ್ಲ. ಆದ್ದರಿಂದ ಈ ನ್ಯಾಯಾಲಯ ನೀಡಿದ ಆದೇಶದಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದ ನಂತರ ಆ ತಪ್ಪನ್ನು ಮುಂದುವರಿಸುವುದಿಲ್ಲ” ಎಂದು ಆದೇಶದಲ್ಲಿ ಹೇಳಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ “ಈ ನ್ಯಾಯಾಲಯವು ಸೆಕ್ಷನ್ 67 ಬಿ (ಬಿ) ಅನ್ನು ಗಮನಿಸದೆ ಆದೇಶವನ್ನು ಹೊರಡಿಸಿದೆ, ಇದು ತಪ್ಪು” ಎಂದು ತಿಳಿಸಿದೆ. ಹೀಗಾಗಿ ಹಿಂದಿನ ಆದೇಶ ವಾಪಸ್‌ ಪಡೆದು ಅರ್ಜಿದಾರನ ವಿರುದ್ಧ ತನಿಖೆ ಮುಂದುವರಿಸಲು ಸೂಚಿಸಿದೆ.

ಸರ್ಕಾರಿ ವಕೀಲರು ಸಲ್ಲಿಸಿದ್ದ ಆದೇಶ ಮರುಪರಿಶೀಲನೆ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು “ಮೊದಲು ಕೇವಲ ಐಟಿ ಕಾಯಿದೆಯ ಸೆಕ್ಷನ್‌ 67ರ ಬಿ (ಎ) ಅಡಿ ಆದೇಶ ಹೊರಡಿಸಲಾಗಿತ್ತು. ಆದರೆ ಸೆಕ್ಷನ್‌ 67 (ಬಿ) (ಬಿ)ಯಲ್ಲಿ ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವ ಮತ್ತು ತೋರಿಸುವ ದೃಶ್ಯಗಳನ್ನು ಡಿಜಿಟಲ್‌ ರೂಪದಲ್ಲಿ ಹೊಂದುವುದು, ಸಂಗ್ರಹ ಮಾಡುವುದು, ಬ್ರೌಸ್‌ ಮಾಡುವುದು ಮತ್ತು ಪ್ರದರ್ಶಿಸುವುದು ಮತ್ತು ವಿತರಣೆ ಮಾಡುವುದು ಅಪರಾಧವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಸೆಕ್ಷನ್‌ 67 (ಬಿ) (ಬಿ) ಅನ್ವಯವಾಗುತ್ತದೆ” ಎಂದು ಆದೇಶಿಸಿದೆ.

ಏನಿದು ಪ್ರಕರಣ?

2022ರ ಮಾರ್ಚ್‌ 23ರ ಅಪರಾಹ್ನ 3.30ರಿಂದ 4.40ರ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎನ್‌.ಇನಾಯತ್‌ ಉಲ್ಲಾ ಮೊಬೈಲ್‌ನಲ್ಲಿ ಮಕ್ಕಳ ಆಶ್ಲೀಲ ದೃಶ್ಯಗಳನ್ನು (ಚೈಲ್ಡ್‌ ಪೋರ್ನೋಗ್ರಫಿ) ನೋಡುತ್ತಿದ್ದ ಎಂದು 2022ರ ಮೇ 3ರಂದು ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದು ಐಟಿ ಕಾಯಿದೆ 67ರ ಸೆಕ್ಷನ್‌ ‘ಬಿ’ ಪ್ರಕಾರ ಅಪರಾಧವೆಂದು ಆರೋಪಿಸಲಾಗಿತ್ತು. ಹೀಗಾಗಿ ಇನಾಯತ್‌ ಉಲ್ಲಾ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ.

ಇನಾಯತ್‌ ಉಲ್ಲಾ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ”ಅರ್ಜಿದಾರರ ವಿರುದ್ಧ ಆನ್‌ಲೈನ್‌ನಲ್ಲಿ ಮಕ್ಕಳ ಆಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರೆಂಬ ಆರೋಪವಿದೆ. ಆಶ್ಲೀಲ ದೃಶ್ಯಗಳನ್ನು ನೋಡುವುದು ಪ್ರಸಾರ ಮಾಡುವುದು ಅಥವಾ ಬೇರೆಯವರಿಗೆ ಕಳುಹಿಸಿದಂತಾಗುವುದಿಲ್ಲ. ಹಾಗಾಗಿ ಅದು ಐಟಿ ಕಾಯಿದೆ ಸೆಕ್ಷನ್‌ 67ರ ‘ಬಿ’ ವ್ಯಾಪ್ತಿಗೆ ಒಳಪಡುವುದಿಲ್ಲ, ಅಪರಾಧವೂ ಅಲ್ಲ” ಎಂದು ಹೇಳಿತ್ತು.

ಇದನ್ನೂ ಓದಿ: Nithyananda Swamy: ನಿತ್ಯಾನಂದನ ಆಶ್ರಮದಲ್ಲಿ ಭಕ್ತ ಒತ್ತೆಯಾಳು! ಕರ್ನಾಟಕ ಹೈಕೋರ್ಟ್‌ ನೋಟಿಸ್

”ಅರ್ಜಿದಾರರು ಬಹುಶಃ ಅಶ್ಲೀಲ ದೃಶ್ಯಗಳನ್ನು ನೋಡುವ ಚಟಕ್ಕೆ ದಾಸರಾಗಿರಬಹುದು. ಹಾಗಾಗಿ ಅದನ್ನು ನೋಡಿದ್ದಾರೆನಿಸುತ್ತದೆ. ಅದು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳೂ ಇಲ್ಲ. ಅದಕ್ಕೆ ಸಾಕ್ಷ್ಯವೂ ಇಲ್ಲ. ಒಂದು ವೇಳೆ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣ ಮುಂದುವರಿಸಿ ಅದು ಕಾನೂನಿನ ದುರ್ಬಳಕೆ ಆಗಲಿದೆ” ಎಂದು ಪ್ರಕರಣ ರದ್ದುಗೊಳಿಸಿತ್ತು. ಬಳಿಕ ಸರ್ಕಾರದ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ ಹೊಸದಾಗಿ ಆದೇಶ ಹೊರಡಿಸಿ ತನ್ನ ತಪ್ಪನ್ನು ತಿದ್ದಿಕೊಂಡಿದೆ.

Exit mobile version