ಬೆಂಗಳೂರು: ಅವನಿಗೆ ಪತ್ನಿಯ ಮೇಲೆ ವಿಪರೀತ ಸಂಶಯ. ಮಗು ತನಗೇ ಹುಟ್ಟಿದ್ದು ಹೌದೇ ಅಲ್ಲವೇ ಎಂದು ತಿಳಿಯಲು ಆತ ಡಿಎನ್‌ಎ ಪರೀಕ್ಷೆ ಮಾಡಿಸಿದ. ಪರೀಕ್ಷೆಯಲ್ಲಿ ಅದು ಅವನದೇ ಮಗು ಎಂದು ಸಾಬೀತಾಯಿತು. ಈಗ ಅವನಿಗೆ ಇನ್ನೊಂದು ಸಂಶಯ ಶುರುವಾಗಿದೆ. ಡಿಎನ್‌ಎ ಪರೀಕ್ಷೆ (DNA Test) ಸರಿ ಇದೆಯೇ ಇಲ್ಲವೇ?! ಮತ್ತೊಮ್ಮೆ ಮಾಡಿಸಿದರೆ ಹೇಗೆ?
ಇಂಥ ಸಂಶಯ ಪಿಶಾಚಿ ಮನುಷ್ಯನಿಗೆ ರಾಜ್ಯ ಹೈಕೋರ್ಟ್ ತಪರಾಕಿ ನೀಡಿದೆ ಮತ್ತು ಎರಡನೇ ಬಾರಿ ಡಿಎನ್‌ಎ ಪರೀಕ್ಷೆ (ವಂಶವಾಹಿ ಪರೀಕ್ಷೆ) ನಡೆಸಲು ಅವಕಾಶ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.
ಮೊದಲ ಡಿಎನ್‌ಎ ಪರೀಕ್ಷೆ ನಡೆದಿರುವುದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್). ಆದರೆ, ಇದರಲ್ಲಿ ಏನೋ ಲೋಪ ಆಗಿದೆ. ಹಾಗಾಗಿ, ಎರಡನೇ ಬಾರಿ ಪರೀಕ್ಷೆಗಾಗಿ ಡಿಎನ್‌ಎ ಮಾದರಿಯನ್ನು ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ಕಳುಹಿಸಲು ಅವಕಾಶ ಕೋರಿ ಬೆಂಗಳೂರಿನ ಈ ವ್ಯಕ್ತಿ ಅರ್ಜಿ ಸಲ್ಲಿಸಿದ್ದ. ಅದನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಯಾಕೆ ಎರಡನೇ ಬಾರಿ ಅವಕಾಶವಿಲ್ಲ?-ಪೀಠ ನೀಡಿದ ಕಾರಣಗಳು
೧. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನುರಿತ ತಜ್ಞರಿಂದ ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಿ, ವರದಿಯನ್ನು ನಿರ್ದೇಶಕರು ಅನುಮೋದಿಸಿರುತ್ತಾರೆ.
೨. ಸರ್ಕಾರಿ ಆಸ್ಪತ್ರೆ ಅಥವಾ ಪ್ರಯೋಗಾಲಯದಿಂದ ಬರುವ ವರದಿಗಳ ಫಲಿತಾಂಶವನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ.
೩. ಫಲಿತಾಂಶ ಅರ್ಜಿದಾರರ ವಿರುದ್ಧವಿದೆ ಎಂಬ ಕಾರಣಕ್ಕೆ ಅವರ ಆರೋಪಗಳನ್ನು ಪರಿಗಣಿಸಲು ಅವಕಾಶವಿಲ್ಲ.
೪. ಒಂದು ವೇಳೆ ಅರ್ಜಿದಾರರ ಮನವಿ ಮಾನ್ಯ ಮಾಡಿ, 2ನೇ ಬಾರಿ ಡಿಎನ್‌ಎ ಪರೀಕ್ಷೆಗೆ ಅನುಮತಿಸಿದರೆ, ಅರ್ಜಿದಾರರು ತಮ್ಮ ಪರವಾಗಿ ಫಲಿತಾಂಶ ಬರುವರೆಗೂ ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಉತ್ತೇಜಿಸಿದಂತಾಗುತ್ತದೆ. ಆದ್ದರಿಂದ, ಎರಡನೇ ಬಾರಿಗೆ ಡಿಎನ್‌ಎ ಪರೀಕ್ಷೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
೫. ಹೇಗಾದರೂ ಮಾಡಿ ಹೆಂಡತಿಯ ನಡತೆ ಕೆಟ್ಟದು ಎಂದು ಬಿಂಬಿಸಿ, ಪತ್ನಿ ಹಾಗೂ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣಚಿಕೊಳ್ಳುವ ಏಕೈಕ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ.
ಏನಿದು ಸಂಶಯ ಪಿಶಾಚಿ ಗಂಡನ ಮೂಲ ಕಥೆ?
ಬೆಂಗಳೂರಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ ನಿವಾಸಿಯ ಮದುವೆ 2010ರ ಮೇ ತಿಂಗಳಲ್ಲಿ ನಡೆದಿತ್ತು. ಅವರ ಪತ್ನಿ 2011ರ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪತಿ ಮೊದಲಿನಿಂದಲೂ ಪತ್ನಿಯ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ ಕಾರಣಕ್ಕೆ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದರಿಂದ, ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು.
ಆ ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ, 2019ರಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಪತಿ, ಪತ್ನಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಮಗುವಿನ ನಿಜವಾದ ತಂದೆ ಯಾರೆಂದು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಬೇಕೆಂದು ಕೋರಿದ್ದರು. ಪತ್ನಿಯ ಒಪ್ಪಿಗೆಯ ಮೇರೆಗೆ ಮಧ್ಯಂತರ ಅರ್ಜಿಯನ್ನು 2021ರಲ್ಲಿ ಮಾನ್ಯ ಮಾಡಿದ್ದ ನ್ಯಾಯಾಲಯವು ಮಗುವಿನ ಡಿಎನ್‌ಎ ಪರೀಕ್ಷೆಗೆ ಅನುಮತಿಸಿತ್ತು. ದಂಪತಿಯ ರಕ್ತದ ಮಾದಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಆತನೇ ಮಗುವಿನ ತಂದೆ ಎಂದು ಸಾಬೀತಾಗಿತ್ತು.
ಆದರೆ, ಈ ವರದಿಗೆ ಅರ್ಜಿದಾರರು ಆಕ್ಷೇಪಿಸಿ, ನ್ಯಾಯಾಲಯದ ನಿರ್ದೇಶನದಂತೆ ಎಫ್‌ಎಸ್‌ಎಲ್‌ನ ನಿರ್ದೇಶಕರು ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಬೇಕಾಗಿತ್ತು. ಆದರೆ, ಅವರ ಅಧೀನ ವೈದ್ಯರು ಪರೀಕ್ಷೆ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕು ಎನ್ನುವುದು ಅರ್ಜಿದಾರ ವಾದಿಸಿದ್ದರು. ಕೌಟುಂಬಿಕ ನ್ಯಾಯಾಲಯ ಇದನ್ನು ಒಪ್ಪಿರಲಿಲ್ಲ. ಆಗ ಹೈಕೋರ್ಟ್ ಮೊರೆ ಹೊಕ್ಕಿದ್ದರು.
ಇದನ್ನೂ ಓದಿ | Adoption act | ಗರ್ಭದಲ್ಲಿರುವಾಗಲೇ ಮಗು ದತ್ತು ಕೊಡುವಂತಿಲ್ಲ, ಇಸ್ಲಾಂನಲ್ಲಿ ದತ್ತು ಸ್ವೀಕಾರಕ್ಕೆ ಮಾನ್ಯತೆ ಇಲ್ಲ!