Site icon Vistara News

Karnataka High court : ಫ್ಲೆಕ್ಸ್‌ ಹಾಕಿದವರನ್ನು ಬಿಟ್ಟು ತಯಾರಿಸಿದವರ ಮೇಲೆ ಕ್ರಮ; ಬಿಬಿಎಂಪಿ ನಿಲುವಿಗೆ ಹೈಕೋರ್ಟ್‌ ಆಕ್ಷೇಪ

High court BBMP

#image_title

ಬೆಂಗಳೂರು: ರಾಜಧಾನಿಯಲ್ಲಿ ಕಾನೂನುಬಾಹಿರವಾಗಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಲು ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರೆ ಫ್ಲೆಕ್ಸ್‌ ತಯಾರಕರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅನ್ನುತ್ತೀರಲ್ಲಾ? ಇದ್ಯಾವ ನ್ಯಾಯ ಎಂದು ಕರ್ನಾಟಕ ಹೈಕೋರ್ಟ್‌‌ (Karnataka High court) ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಎನ್‌ ಕೆ ರಮೇಶ್‌ ಅವರು ಫ್ಲೆಕ್ಸ್‌ ಮತ್ತು ಬ್ಯಾನರ್‌ ಉತ್ಪಾದಕರ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದ್ದು ಪೀಠದ ಸಿಟ್ಟಿಗೆ ಕಾರಣವಾಯಿತು.

2023ರ ಜನವರಿಯಿಂದ 9,570 ಕಾನೂನುಬಾಹಿರ ಫ್ಲೆಕ್ಸ್‌/ಬ್ಯಾನರ್‌ಗಳನ್ನು ಪತ್ತೆ ಹಚ್ಚಲಾಗಿದೆ. ಈ ಸಂಬಂಧ 53 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಫ್ಲೆಕ್ಸ್‌/ಬ್ಯಾನರ್‌ ಉತ್ಪಾದಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ರಮೇಶ್‌ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿತು.

“ತಮ್ಮನ್ನು ತಾವು ವೈಭವೀಕರಿಸಿಕೊಂಡು ಫ್ಲೆಕ್ಸ್‌/ಬ್ಯಾನರ್‌ ಹಾಕುವವರ ವಿರುದ್ಧ ನೀವು ಕ್ರಮಕೈಗೊಳ್ಳುತ್ತಿಲ್ಲ. ಬದಲಿಗೆ ಅವುಗಳನ್ನು ಉತ್ಪಾದಿಸುವವರ ಮೇಲೆ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದು ಅತಾರ್ಕಿಕ ಮತ್ತು ಅಸಮರ್ಥನೀಯʼʼ ಎಂದು ಹೈಕೋರ್ಟ್‌ ಮೌಖಿಕವಾಗಿ ಹೇಳಿತು.

ಹೈಕೋರ್ಟ್‌ ಹೇಳಿದ್ದೇನು?

-ಚುನಾವಣೆ, ರಾಜಕೀಯ ಸಮಾವೇಶ ಮತ್ತು ಹಬ್ಬದ ಸಂದರ್ಭಗಳಲ್ಲಿ ಕಾನೂನುಬಾಹಿರ ಹೋರ್ಡಿಂಗ್‌ ಹಾಕುವುದು ವ್ಯಾಪಕವಾಗಿದೆ. ಇವುಗಳನ್ನು ನಿರ್ಬಂಧಿಸಲು ಜವಾಬ್ದಾರಿ ಅಧಿಕಾರಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ. ಆದರೆ, ಕೆಲವೇ ಫ್ಲೆಕ್ಸ್‌/ಬ್ಯಾನರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದು ಯಾವ ನ್ಯಾಯ?

-ಬಿಬಿಎಂಪಿಯ ಪ್ರತಿ ವಲಯದಲ್ಲಿ 488 ರಿಂದ 2,521 ಅಕ್ರಮ ಫ್ಲೆಕ್ಸ್‌/ಬ್ಯಾನರ್‌ಗಳು ಪತ್ತೆಯಾಗಿವೆ. ಆದರೆ, ಹಲವು ಕಡೆ ಒಂದಂಕಿ ಅಥವಾ ಎರಡಂಕಿಯ ಎಫ್‌ಐಆರ್‌ ಮಾತ್ರ ದಾಖಲಾಗಿವೆ. ಒಟ್ಟು 9,570 ಅಕ್ರಮ ಫ್ಲೆಕ್ಸ್‌/ಬ್ಯಾನರ್‌ ಇತ್ಯಾದಿ ಪತ್ತೆಯಾಗಿದ್ದು, 80 ದೂರು ನೀಡಿದ್ದು, 53 ಎಫ್‌ಐಆರ್‌ ದಾಖಲಿಸಲಾಗಿದೆ. ಬೆಂಗಳೂರು ಪಶ್ಚಿಮ ವಲಯದಲ್ಲಿ 2,521 ಫ್ಲೆಕ್ಸ್‌/ಬ್ಯಾನರ್‌ ಪತ್ತೆಯಾಗಿದ್ದು, 5 ದೂರು ಮತ್ತು 6 ಎಫ್‌ಐಆರ್‌ ದಾಖಲಿಸಲಾಗಿದೆ.

-ಫ್ಲೆಕ್ಸ್‌/ಬ್ಯಾನರ್‌ ಮಾಹಿತಿ ನೀಡಲು ಸಾರ್ವಜನಿಕರನ್ನು ಭಾಗಿದಾರರನ್ನಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ನೋಟಿಸ್‌, ಅಧಿಕಾರಿಗಳ ಫೋನ್‌ ನಂಬರ್‌ ಸಮೇತ ಮಾಹಿತಿ ನೀಡಿರುವುದು ಸ್ವಾಗತಾರ್ಹ ಕ್ರಮ. ಆದರೆ, ಅಧಿಕಾರಿಗಳು ದೂರು ಮತ್ತು ಎಫ್‌ಐಆರ್‌ ದಾಖಲಿಸಲು ಏತಕ್ಕಾಗಿ ಹಿಂಜರಿಯುತ್ತಿದ್ದಾರೆ?

-ಅಕ್ರಮ ಬ್ಯಾನರ್‌/ಫ್ಲೆಕ್ಸ್‌ ತೆರವು ಮಾಡಲು ಜನರ ಹಣವನ್ನು ಬಿಬಿಎಂಪಿ ಬಳಕೆ ಮಾಡಬಾರದು ಎಂದೂ ಪೀಠ ಹೇಳಿದೆ. ಅಲ್ಲದೇ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಅಕ್ರಮ ಫ್ಲೆಕ್ಸ್‌/ಬ್ಯಾನರ್‌ ಮಾಹಿತಿಯನ್ನು ರಾಜ್ಯ ಸರ್ಕಾರವು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು.

ಇದನ್ನೂ ಓದಿ : Medical seat : ಅಮೆರಿಕದಲ್ಲಿ ಹುಟ್ಟಿದರೂ ಭಾರತೀಯೆ ಎಂದು ಸುಳ್ಳುಹೇಳಿ ಸರ್ಕಾರಿ ಕೋಟಾದಲ್ಲಿ ಡಾಕ್ಟರ್‌ ಪದವಿ ಪಡೆದ ಯುವತಿ!

Exit mobile version