ಬೆಂಗಳೂರು: ಗೋಹತ್ಯೆ (Cow slaughter) ಮಾಡುವವರ ಕೈಗಳನ್ನು ಕತ್ತರಿಸಬೇಕು ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಶ್ರೀರಾಮ ಸೇನೆ (Sreerama sene) ಸಂಚಾಲಕ ಪ್ರಮೋದ್ ಮುತಾಲಿಕ್ (Pramod Muthalik) ಅವರಿಗೆ ರಾಜ್ಯ ಹೈಕೋರ್ಟ್ (Karnataka High court) ಬಿಗ್ ರಿಲೀಫ್ ನೀಡಿದೆ. ಪ್ರಚೋದನಾಕಾರಿ ಭಾಷಣ (Inflamatory speach) ಮಾಡಿದರೆಂಬ ಆರೋಪದ ಮೇಲೆ ಪೊಲೀಸರು ಸಲ್ಲಿಸಿದ್ದ ಪ್ರಥಮ ಮಾಹಿತಿ ವರದಿ (First information Report)ಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
ಪ್ರಮೋದ್ ಮುತಾಲಿಕ್ ಅವರು 2017ರಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಸಾರ್ವಜನಿಕ ಭಾಷಣದಲ್ಲಿ ಈ ಮಾತು ಹೇಳಿದ್ದರು. ಈ ಬಗ್ಗೆ ಹಲವು ಬಾರಿ ವಿಚಾರಣೆ ನಡೆದು ಅಂತಿಮವಾಗಿ ಹೈಕೋರ್ಟ್‌ನ ಕಲಬುರ್ಗಿ ಪೀಠವು ಮಂಗಳವಾರ ವಜಾ ಮಾಡಿದೆ.
ಅಂದು ನಡೆದಿದ್ದೇನು?
ಪ್ರಮೋದ್ ಮುತಾಲಿಕ್ ಅವರು 2017ರ ಫೆಬ್ರವರಿ 25ರಂದು ಬಬಲೇಶ್ವರದಲ್ಲಿ ನಡೆದ ಶ್ರೀರಾಮ ಸೇನೆ ಕಚೇರಿ ಉದ್ಘಾಟನೆ ಹಾಗೂ ಶಿವಾಜಿ ಮಹಾರಾಜ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಮಾತನಾಡುತ್ತಾ ಗೋವನ್ನು ಹಿಂದೂಗಳು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಅನ್ಯ ಕೋಮಿನವರು ಗೋವನ್ನು ಕೊಂದು ತಿನ್ನುತ್ತಾರೆ. ಹೀಗಾಗಿ ಗೋಹತ್ಯೆ ಮಾಡುವವರ ಕೈಗಳನ್ನು ಕತ್ತರಿಸಬೇಕೆಂದು ಮುತಾಲಿಕ್ ಹೇಳಿದ್ದರು. ಇದು ಆಗ ಭಾರಿ ಸುದ್ದಿಯಾಗಿತ್ತು.
ಮುತಾಲಿಕ್ ಅವರು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಎರಡು ಕೋಮುಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುತಾಲಿಕ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಮೋದ್ ಮುತಾಲಿಕ್ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿದ್ದರು.
ಪ್ರಮೋದ್ ಮುತಾಲಿಕ್ ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಥಮ ಮಾಹಿತಿ ವರದಿಯನ್ನೇ ವಜಾಗೊಳಿಸಿದೆ. ಪ್ರಮೋದ್ ಮುತಾಲಿಕ್ ಅವರ ಪರವಾಗಿ ವಕೀಲರಾದ ಕಡಲೂರು ಸತ್ಯನಾರಾಯಣಾಚಾರ್ಯ ವಾದಿಸಿದ್ದರೆ, ಸರ್ಕಾರದ ಪರವಾಗಿ ಹೈಕೋರ್ಟ್ ಪ್ಲೀಡರ್ ಗುರುರಾಜ್ ವಿ. ಹಸ್ಲೀಕರ್ ಪ್ರತಿನಿಧಿಸಿದ್ದರು.
ಪ್ರಕರಣ ರದ್ದತಿಗೆ ಕಾರಣವಾದ ಅಂಶಗಳೇನು? ಹೈಕೋರ್ಟ್ ಹೇಳಿದ್ದೇನು?
1. ಆರೋಪ ಪಟ್ಟಿಯನ್ನು ಪರಿಶೀಲಿಸಿದರೆ, ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸುವ ಅಂಶಗಳಿಲ್ಲ.
2. ಪೊಲೀಸ್ ಸಿಬ್ಬಂದಿಯ ಹೇಳಿಕೆಗಳನ್ನು ಹೊರತುಪಡಿಸಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಲ್ಲ.
3. ಅರ್ಜಿದಾರರು ಮಾಡಿದ್ದ ಪ್ರಚೋದನಕಾರಿ ಭಾಷಣದ ವಿಡಿಯೊ ಚಿತ್ರೀಕರಿಸಿದ್ದರೆನ್ನಲಾದ ವ್ಯಕ್ತಿಯ ಹೇಳಿಕೆ ದಾಖಲಿಸಲಾಗಿದೆಯಾದರೂ, ವೀಡಿಯೊ ವಶಪಡಿಸಿಕೊಂಡಿಲ್ಲ.
4. ಪ್ರಚೋದನಕಾರಿ ಭಾಷಣದ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಎರಡು ಕೋಮುಗಳ ನಡುವೆ ಶತ್ರುತ್ವ ಬಿತ್ತಿದ ಆರೋಪದ ಮೇಲೆ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು.
5. ಒಂದೊಮ್ಮೆ, ಪೂರ್ವಾನುಮತಿ ಇಲ್ಲದಿದ್ದರೆ ಆ ಪ್ರಕರಣಗಳನ್ನು ಯಾವುದೇ ನ್ಯಾಯಾಲಯಗಳು ವಿಚಾರಣೆಗೆ ಅಂಗೀಕರಿಸಬಾರದು.
6. ಈ ಪ್ರಕರಣದಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದಿದ್ದರೂ ಅರ್ಜಿದಾರರ ವಿರುದ್ಧದ ದೂರನ್ನು ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಪರಿಗಣಿಸಿದ್ದು, ಇದು ಕಾನೂನಿನ ಪ್ರಕಾರ ಊರ್ಜಿತವಾಗುವುದಿಲ್ಲ.