ಬೆಂಗಳೂರು: ಸೌದಿ ಅರೇಬಿಯಾದ ದೊರೆ (King of Saudi Arabia) ಮತ್ತು ಇಸ್ಲಾಂ (Islam religion) ಕುರಿತು ಆಕ್ಷೇಪಾರ್ಹ ಪೋಸ್ಟ್ (Derogatory Post) ಹಾಕಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್ ಕುಮಾರ್ (Shylesh Kumar from Mangalore) ಅವರ ಪ್ರಕರಣವನ್ನು ಕೇಂದ್ರ ಸರ್ಕಾರವು (Cental Government) ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ರಾಜ್ಯ ಹೈಕೋರ್ಟ್ (Karnataka High court) ಅಭಿಪ್ರಾಯಪಟ್ಟಿದೆ. ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ (Justice Krishna S dixit) ಅವರ ನೇತೃತ್ವದ ಏಕಸದಸ್ಯ ಪೀಠವು ಈ ರೀತಿ ಅಭಿಪ್ರಾಯಪಟ್ಟಿದೆ.
ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಶೈಲೇಶ್ ಅವರು 2020ರ ಫೆಬ್ರವರಿ 23 ರಿಂದ ಅಲ್ಲಿ ಬಂಧನದಲ್ಲಿದ್ದಾರೆ. 2020ರಿಂದ ವೃತ್ತಿ ಸಂಬಂಧ ತೊಂದರೆ ಅನುಭವಿಸಿದ್ದ ಶೈಲೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಸೌದಿ ದೊರೆ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪದಲ್ಲಿ ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
2020ರಲ್ಲಿ ವೃತ್ತಿ ಬದುಕು ಸಂಕಷ್ಟದಲ್ಲಿದ್ದಾಗ ಶೈಲೇಶ್ ಅವರು ಫೇಸ್‌ಬುಕ್‌ನಲ್ಲಿ ತಮ್ಮ ದೇಶದ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದರು. ಆದರೆ, ಇದು ಅಲ್ಲಿನ ಕೆಲವರನ್ನು ಕೆರಳಿಸಿತ್ತು. ಅನಾಮಿಕನೊಬ್ಬ ಕರೆ ಮಾಡಿ ಫೇಸ್‌ಬುಕ್ ಖಾತೆ ಅಳಿಸುವಂತೆ ಬೆದರಿಕೆ ಹಾಕಿದ್ದ. ಈ ಉಸಾಬರಿ ಬೇಡ ಎಂದು ಅವರು ಫೇಸ್‌ಬುಕ್ ಖಾತೆ ಅಳಿಸಿದ್ದರು. ಇದಾದ ಬಳಿಕ ಶೈಲೇಶ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಅದರಲ್ಲಿ ಇಸ್ಲಾಂಗೆ ವಿರುದ್ಧವಾಗಿ ಮತ್ತು ಸೌದಿ ದೊರೆಗೆ ಅವಹೇಳನ ಮಾಡುವ ಪೋಸ್ಟ್‌ಗಳನ್ನು ಯಾರೋ ಹಾಕಿದ್ದರು. ಇದನ್ನು ಗಮನಿಸಿದ ಪೊಲೀಸರು ಶೈಲೇಶ್‌ಗೆ ಠಾಣೆಗೆ ಬರುವಂತೆ ಸೂಚಿಸಿದ್ದರು. ನಿಜ ವಿಷಯವನ್ನು ತಿಳಿಸಲು ಠಾಣೆಗೆ ಹೋದ ಶೈಲೇಶ್ ಅವರನ್ನು ಬಂಧಿಸಿ ಇಡಲಾಗಿದೆ.
ಈ ವಿಚಾರದಲ್ಲಿ ಹಿಂದೆಯೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಹೈಕೋರ್ಟ್ ಕೇಂದ್ರ ಸರ್ಕಾರ ಶೈಲೇಶ್ ಬಿಡುಗಡೆಗೆ ಪ್ರಯತ್ನಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಕೇಂದ್ರ ಮೌನವಾಗಿತ್ತು. ಈ ವಿಚಾರಣೆಯ ಸಂದರ್ಭ ನ್ಯಾಯಮೂರ್ತಿಗಳು ಅದನ್ನು ಉಲ್ಲೇಖಿಸಿದ್ದಾರೆ.
“ಕೇಂದ್ರ ಸರ್ಕಾರಕ್ಕೆ ಹಾಕಿರುವ ಮೂರು ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ. ನ್ಯಾಯಾಲಯದ ಆದೇಶ ಪಾಲಿಸದಿರುವುದಕ್ಕೆ ನ್ಯಾಯಾಲಯವು ಆಕ್ರೋಶ ದಾಖಲಿಸುತ್ತಿದೆ. ಭಾರತದ ಪ್ರಜೆ ವಿದೇಶದಲ್ಲಿ ಯಾತನೆ ಅನುಭವಿಸುತ್ತಿರುವಾಗ ಸರ್ಕಾರಿ ಸಂಸ್ಥೆಗಳು ಗಂಭೀರ ಪ್ರಯತ್ನದ ಮೂಲಕ ಅವರಿಗೆ ನ್ಯಾಯ ದೊರಕಿಸಲು ಯತ್ನಿಸಬೇಕು. ಇದಕ್ಕಿಂತ ಹೆಚ್ಚನ್ನು ಉಲ್ಲೇಖಿಸುವ ಅಗತ್ಯವಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
“ಕೆಲವು ದುಷ್ಕರ್ಮಿಗಳು ನಡೆಸಿರುವ ಪಿತೂರಿಯಿಂದ ಭಾರತದ ಪ್ರಜೆಯು ವಿದೇಶದಲ್ಲಿ ದೇಶದ್ರೋಹ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಅದನ್ನು ಖಾತರಿಪಡಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಂಭೀರತೆಯನ್ನು ತೋರಿಸಬೇಕು. ಇಷ್ಟು ಮಾತ್ರ ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ. ಇನ್ನೂ ಹಲವು ವಿಚಾರಗಳು ಹೇಳುತ್ತಿಲ್ಲ. ಇದು ತುಂಬಾ ಬೇಸರ ಉಂಟು ಮಾಡಿದೆ” ಎಂದು ಮೌಖಿಕವಾಗಿ ನ್ಯಾಯಾಲಯ ಹೇಳಿತು.
ಕೇಂದ್ರ ಸರ್ಕಾರದ ವಕೀಲ ಮಧುಕರ್ ದೇಶಪಾಂಡೆ ಅವರು “ಭಾರತದ ರಾಯಭಾರ ಕಚೇರಿಯು ಸೌದಿ ಅರೇಬಿಯಾದಲ್ಲಿ ಸಂಬಂಧಿತ ನ್ಯಾಯಾಲಯದಿಂದ ತೀರ್ಪಿನ ಪ್ರತಿ ಕೋರಿದೆ. ಅದನ್ನು ತುರ್ತಾಗಿ ಪಡೆಯುವ ಪ್ರಯತ್ನ ಮಾಡಲಾಗಿದೆ. ಇದರ ಆಧಾರದಲ್ಲಿ ಸೌದಿ ಅರೇಬಿಯಾದ ದೊರೆಗೆ ಕ್ಷಮಾದಾನ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.
ಭಾರತದ ರಾಯಭಾರ ಕಚೇರಿಯ ಅಧಿಕಾರಿ ಮೋಯಿನ್ ಖಾನ್ ಅವರು ನ್ಯಾಯಾಲಯದ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಸರಿಯಾದ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು ಶಿಕ್ಷೆಯ ಆದೇಶ ಮಾತ್ರವಲ್ಲ ಅದನ್ನು ಖಾತರಿಪಡಿಸಿರುವ ಆದೇಶವನ್ನು ಪಡೆಯಬೇಕು ಎಂದು ಸರಿಯಾಗಿ ಹೇಳಿದ್ದಾರೆ. ಭಾರತ ಸರ್ಕಾರವು ಶೈಲೇಶ್ ಕುಮಾರ್ ಅವರಿಗೆ ವಿಧಿಸಿರುವ ಶಿಕ್ಷೆಯ ಆದೇಶ ಮತ್ತು ಅದನ್ನು ಖಾತರಿಪಡಿಸಿರುವ ಆದೇಶಗಳನ್ನು ಆದಷ್ಟು ಬೇಗ ಪಡೆಯಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಇದನ್ನೂ ಓದಿ: High court : ಪತ್ನಿ, ಮಕ್ಕಳ ಪಾಲನೆ ಗಂಡನ ಧರ್ಮ ; ಜೀವನಾಂಶ ಕೊಡಲೊಪ್ಪದವನಿಗೆ ಕುರಾನ್ ಪಾಠ ಮಾಡಿದ ನ್ಯಾ. ದೀಕ್ಷಿತ್
ತನಿಖಾಧಿಕಾರಿಯ ನಡೆಗೆ ಆಕ್ಷೇಪ
ರಾಜ್ಯದಲ್ಲಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಎಲ್ಲಿ? ಅಂದಿನಿಂದ ಇಲ್ಲಿಯವರೆಗೆ ಏನು ಮಾಡಲಾಗಿದೆ? ಭಾರತದ ಪ್ರಜೆ ವಿದೇಶದಲ್ಲಿ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ನಿಮ್ಮ ಅಧಿಕಾರಿಗಳು ಎಷ್ಟು ಗಂಭೀರವಾಗಿ ಪ್ರಯತ್ನಿಸಿದ್ದಾರೆ? ತನಿಖಾಧಿಕಾರಿಯನ್ನು ವಶಕ್ಕೆ ಪಡೆಯುವುದೂ ಸೇರಿದಂತೆ ಕಠಿಣ ಆದೇಶ ಮಾಡಬೇಕಾಗುತ್ತದೆ ಎಂದು ಪೀಠವು ಕಟುವಾಗಿ ನುಡಿಯಿತು. ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಲಾಗಿದ್ದು, ಅಂದು ತನಿಖಾಧಿಕಾರಿಯು ಎಲ್ಲ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.