Site icon Vistara News

DK Shivakumar : ಡಿಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿ ಮಾಡಿದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಹೈಕೋರ್ಟ್‌ ತಡೆ

DK Shivakumar

ಬೆಂಗಳೂರು: ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ (Bangalore development minister) ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಬರೆದ ಟಿಪ್ಪಣಿ/ಶಿಫಾರಸು ಆಧರಿಸಿ ಮಾಡಲಾದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ (BBMP officers transfer and deputation) ರಾಜ್ಯ ಹೈಕೋರ್ಟ್‌ (Karnataka High court) ತಡೆ ನೀಡಿದೆ. ಡಿಸಿಎಂ ಅವರು 2023ರ ಆಗಸ್ಟ್‌ 10ರಂದು ಬರೆದಿರುವ ಟಿಪ್ಪಣಿ ಆಧರಿಸಿ ಈ ವರ್ಗಾವಣೆ ಮಾಡಲಾಗಿತ್ತು.

ಹೆಬ್ಬಾಳ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಕಿ ಅನೀಸ್ ಫಾತಿಮಾ ಸೇರಿದಂತೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ-ಕಿರಿಯ ಆರೋಗ್ಯ ಪರಿವೀಕ್ಷಕರು, ಎಸ್‌ಡಿಎ, ಎಫ್‌ಡಿಎ, ಸಹಾಯಕ ಇಂಜಿನಿಯರ್ ಹುದ್ದೆಯ 17 ಅಧಿಕಾರಿಗಳು ತಮ್ಮ ವರ್ಗಾವಣೆಗೆ ತಡೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಈ ತಡೆಯಾಜ್ಞೆ ನೀಡಲಾಗಿದೆ. ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರ ಏಕಸದಸ್ಯ ಪೀಠದ ಮುಂದೆ ದಾವೆಯ ವಿಚಾರಣೆ ನಡೆದಿದೆ.

ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ಪೀಠವು ಉಪಮುಖ್ಯಮಂತ್ರಿಗಳ ಟಿಪ್ಪಣಿ ಆಧರಿಸಿ ಯಾವುದೇ ವರ್ಗಾವಣೆ ಅಥವಾ ನಿಯೋಜನೆ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ್ದಲ್ಲದೆ, ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ. ಇದರ ಜತೆಗೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ ಅರ್ಜಿದಾರರ ಪರ ವಕೀಲ ವಿ ಶ್ರೀನಿವಾಸ್ ವಾದ ಮಂಡಿಸಿದರು.

ಡಿ.ಕೆ. ಶಿವಕುಮಾರ್‌ ಟಿಪ್ಪಣಿಯಲ್ಲಿ ಏನಿತ್ತು?

  1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಲಯ ಹಾಗೂ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದರ್ಜೆಯ ಅಧಿಕಾರಿಗಳನ್ನು ಕೆಲವರಿಗೆ ಅವರಿದ್ದ ಜಾಗ ಮತ್ತು ಹುದ್ದೆಯಲ್ಲಿ ಮುಂದುವರಿಸಿ.
  2. ಕೆಲವರನ್ನು ಒಂದು ವಲಯ-ವಿಭಾಗದಿಂದ ಮತ್ತೊಂದು ಕಡೆ ವರ್ಗಾವಣೆಗೊಳಿಸಿ, ಕೆಲವರಿಗೆ ನಿಯೋಜನೆ ಕೊಡಿ
  3. ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳನ್ನು ಬಿಬಿಎಂಪಿಗೆ ವರ್ಗಾವಣೆ ಮಾಡಿ.

ಇದನ್ನೂ ಓದಿ :

ಟಿಪ್ಪಣಿ ಬರೆಯಲು ಸಚಿವರಿಗೆ ಹಕ್ಕಿಲ್ಲವೇ?: ಅರ್ಜಿದಾರರ ವಾದ ಏನಿತ್ತು?

  1. ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಟಿಪ್ಪಣಿ ಹೊರಡಿಸಿರುವುದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಆಡಳಿತಾತ್ಮಕ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ.
  2. ಇದೊಂದು ರಾಜಕೀಯ ಒತ್ತಡದ ಕ್ರಮ. ಅಲ್ಲದೇ, ಇದು ವೃಂದ ಮತ್ತು ನೇಮಕಾತಿಗಳಿಗೆ ವಿರುದ್ಧವಾಗಿದೆ.
  3. ಡಿಸಿಎಂ ಅವರ ಆಗಸ್ಟ್‌ 10ರ ಟಿಪ್ಪಣಿಗೆ ಈಗಾಗಲೇ ಇನ್ನೊಂದು ಅರ್ಜಿ ಸಂಬಂಧ ಬೇರೊಂದು ಪೀಠ ತಡೆ ನೀಡಿದೆ. ಹೀಗಿದ್ದರೂ, ಒಂದೇ ದಿನಾಂಕದಂದು ಎರಡು ಟಿಪ್ಪಣಿಗಳನ್ನು ಹೊರಡಿಸಲಾಗಿದೆ.
  4. ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಆಗಸ್ಟ್‌ 10ರಂದು ಹೊರಡಿಸಿರುವ ಟಿಪ್ಪಣಿ ರದ್ದುಪಡಿಸಬೇಕು ಎನ್ನುವುದು ಅರ್ಜಿದಾರರ ವಾದವಾಗಿತ್ತು.

ಇದನ್ನೂ ಓದಿ : BBMP Fire Accident: ಬಿಬಿಎಂಪಿ ಕಚೇರಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಸೂಪರಿಂಟೆಂಡೆಂಟ್ ಎಂಜಿನಿಯರ್ ಸಾವು

Exit mobile version