Site icon Vistara News

ಕರ್ನಾಟಕದ ‘ಅಕ್ರಮ’ ಅದಿರು ಗಣಿಗಳಿಗೆ ಹೊಸ ಲೀಸ್! ಒಪ್ಪಿಗೆ ನೀಡಿದ ಕೇಂದ್ರ ಅರಣ್ಯ ಸಲಹಾ ಸಮಿತಿ

mines

ನವದೆಹಲಿ: ಹರಾಜು ಮೂಲಕ ‘ಸಿ’ ಕೆಟಗರಿಯ ಅದಿರು ಗಣಿಗಳನ್ನು (C category iron ore mines) ಹೊಸ ಲೀಸ್‌ಗೆ (New Lessees) ವರ್ಗಾಯಿಸಲು ಕೇಂದ್ರ ಪರಿಸರ ಸಚಿವಾಲಯದ ಅಡಿಯಲ್ಲಿರುವ ಶಾಸನಬದ್ಧ ಸಂಸ್ಥೆಯಾದ ಅರಣ್ಯ ಸಲಹಾ ಸಮಿತಿ (FAC) ಹಸಿರು ನಿಶಾನೆ ತೋರಿದೆ. ವಾಸ್ತವದಲ್ಲಿ ಕೇಂದ್ರ ಪರಿಸರ ಸಚಿವಾಲಯವು(union environment ministry), ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಒಪ್ಪಿಗೆಯನ್ನು ನಿರಾಕರಿಸಿತ್ತು. ಈಗ ಎಫ್ಎಸಿ ಸಚಿವಾಲಯದ ನಿಲುವಿಗೆ ವಿರುದ್ಧವಾದ ನಿರ್ಧಾರವನ್ನು ಕೈಗೊಂಡಿದ್ದು, ಯೋಜನೆಗಳಿಗೆ ಅರಣ್ಯ ಇಲಾಖೆಯ ಭೂಮಿಯ ಬಳಿಕೆಗೆ ಓಕೆ ಎಂದಿದೆ(Karnataka Mines).

‘ಸಿ’ ವರ್ಗದ ಗಣಿಗಳೆಂದರೆ 2000ರಲ್ಲಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಗಣಿಗಳಾಗಿವೆ. ಇದೇ ಕಾರಣಕ್ಕಾಗಿ 2013ರಲ್ಲಿ ಸುಪ್ರೀಂ ಕೋರ್ಟ್ ಸಿ ಕೆಟಗರಿಯ 51 ಗಣಿ ಗುತ್ತಿಗೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.

2015ರ ಆದೇಶದಲ್ಲಿ ಸುಪ್ರೀಂ ಕೋರ್ಟ್, ಸಿ ಕೆಟಗರಿಯ ಗಣಿಗಳನ್ನು ಹರಾಜು ಹಾಕುವ ಮೂಲಕ ಮರು ಹಂಚಿಕೆಗೆ ಸೂಚಿಸಿತ್ತು. ಕರ್ನಾಟಕ ಸರ್ಕಾರ ಕೂಡ ಈ ವರ್ಷದ ಆಗಸ್ಟ್ 30 ರಂದು ಬರೆದ ಪತ್ರದಲ್ಲಿ ಯಶಸ್ವಿ ಬಿಡ್‌ದಾರರ ಪರವಾಗಿ ಅರಣ್ಯ ತೆರವು ವರ್ಗಾವಣೆಯನ್ನು ಪರಿಗಣಿಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಈ ಮನವಿಗೆ ಕೇಂದ್ರ ಸರ್ಕಾರದ ಅರಣ್ಯ ಸಲಹಾ ಸಮಿತಿ ಸಕಾರಾತ್ಮಕವಾಗಿ ಸ್ಪಂದಿಸಿತ್ತು.

ಪ್ರಾದೇಶಿಕ ಅಧಿಕಾರಿಗಳು ಮತ್ತು ಅರಣ್ಯ ಸಂರಕ್ಷಣಾ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ, ಮಂಜೂರು ಮಾಡಿದ ಅನುಮೋದನೆಗಳ ವರ್ಗಾವಣೆಯನ್ನು ಪರಿಗಣಿಸುಲು ಇರುವ ಮಾರ್ಗಸೂಚಿಗಳನ್ನು ಅರಣ್ಯ ಸಲಹಾ ಸಮಿತಿ ಗಮನಿಸಿದೆ. ಸುಪ್ರೀಂ ಕೋರ್ಟ್ 2015 ಜುಲೈ 30ರಂದು ಹೊರಡಿಸಿದ ಆದೇಶದಲ್ಲಿ ಒಳಗೊಂಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ‘ಸಿ’ ಕೆಟಗರಿಯ ಗಣಿಗಾರಿಕೆ ಗುತ್ತಿಗೆಗಳು ಮರು ಹಂಚಿಕೆಯನ್ನು ಪರಿಗಣಿಸಲಾಗಿದೆ. 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ‘ಸಿ’ ಕೆಟಗರಿ ಗಣಿಗಳಿಗೆ ಹಿಂದೆ ನೀಡಲಾದ ಅನುಮೋದನೆಗಳನ್ನು ಪರಿಗಣಿಸಬಹುದು ಎಂದು ಸಮಿತಿಯು ಶಿಫಾರಸು ಮಾಡಲು ಅರಣ್ಯ ಸಲಹಾ ಸಮಿತಿಯು ಸೆಪ್ಟೆಂಬರ್ 11ರಂದು ನಡೆಸಿದ ಸಭೆಯಲ್ಲಿ ನಿರ್ಧರಿಸಿದೆ.

ಈ ಸುದ್ದಿಯನ್ನು ಓದಿ: ಗಣಿಗಾರಿಕೆಗೆ ಸುಪ್ರೀಂಕೋರ್ಟ್‌ನ ಶಾಪವಿಮೋಚನೆ; ಹಲವು ನಿರ್ಬಂಧಗಳ ತೆರವು

2022ರ ಸೆಪ್ಟೆಂಬರ್ 13ರಂದು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಕೇಂದ್ರ ಪರಿಸರ ಸಚಿವಾಲಯವು, 2021 ಜುಲೈ 7 ಕ್ಲಿಯರೆನ್ಸ್ ಮಾರ್ಗಸೂಚಿಗಳ ವರ್ಗಾವಣೆಯು ಕೇಂದ್ರ, ರಾಜ್ಯ ಅಥವಾ ಯಾವುದೇ ನ್ಯಾಯಾಲಯ ಮೂಲಕ ರದ್ದುಗೊಂಡಿರುವ ಅಥವಾ ಮುಕ್ತಾಯಗೊಂಡಿರುವ ಅಥವಾ ರದ್ದುಗೊಳಿಸಿದ ಗುತ್ತಿಗೆಗಳ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ. ಆದ್ದರಿಂದ, ಕರ್ನಾಟಕದಲ್ಲಿರುವ ಸಿ ಕೆಟಗರಿಯ ಗಣಿಗಳಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕು ಮತ್ತು ಈ ಸಂದರ್ಭದಲ್ಲಿ ವರ್ಗಾವಣೆಯ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version