Site icon Vistara News

Karnataka Election: ಕರ್ನಾಟಕ ಗುಜರಾತ್‌ ಅಲ್ಲ, ಹುಬ್ಬಳ್ಳಿ ಅಹ್ಮದಾಬಾದ್‌ ಅಲ್ಲ; ಬಿಜೆಪಿಗೆ ಶೆಟ್ಟರ್‌ ತಿರುಗೇಟು

Karnataka Is Not Gujarat, Hubballi Is Not Ahmedabad; Jagadish Shettar Taunts BJP

ಜಗದೀಶ್‌ ಶೆಟ್ಟರ್

ಬೆಳಗಾವಿ: ಬಿಜೆಪಿಯಲ್ಲಿ ಟಿಕೆಟ್‌ ಕೈತಪ್ಪಿದ ಕಾರಣ, ಕಾಂಗ್ರೆಸ್‌ ಸೇರಿ ಅಬ್ಬರದ ಪ್ರಚಾರ (Karnataka Election) ನಡೆಸುತ್ತಿರುವ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಲಿಂಗಾಯತ, ಮುಸ್ಲಿಂ ಮುಖಂಡರ ಸಭೆಯಲ್ಲಿ ಶೆಟ್ಟರ್‌ ಅವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹುಬ್ಬಳ್ಳಿಗೆ ಬರುವ ಬಿಜೆಪಿ ರಾಷ್ಟ್ರೀಯ ನಾಯಕರು, ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಿ ಎಂದು ಕರೆ ನೀಡುತ್ತಿದ್ದಾರೆ. ಆದರೆ, ಅವರು ಹೇಳಿದ್ದನ್ನೆಲ್ಲ ಕೇಳಲು ಕರ್ನಾಟಕ ಗುಜರಾತ್‌ ಅಲ್ಲ, ಹುಬ್ಬಳ್ಳಿ ಅಹ್ಮದಾಬಾದ್‌ ಅಲ್ಲ” ಎಂದು ಹೇಳುವ ಮೂಲಕ ರಾಷ್ಟ್ರೀಯ ನಾಯಕರಿಗೆ ತಿರುಗೇಟು ನೀಡಿದ್ದಾರೆ.

“ಬಿಜೆಪಿಯಲ್ಲಿ ಸರ್ವಾಧಿಕಾರಿ, ಗುಲಾಮಗಿರಿ ಪ್ರವೃತ್ತಿ ಪ್ರಾರಂಭ ಆಗಿದೆ. ಜೀ ಹುಜೂರ್ ಎನ್ನುವ ಪ್ರವೃತ್ತಿ ಪ್ರಾರಂಭ ಆಗಿದೆ. ಅದಕ್ಕಾಗಿ ಪಕ್ಷದಿಂದ ಹೊರಬಂದು ಪ್ರತಿಭಟಿಸಿದ್ದೇನೆ. ಇದಾದ ಮೇಲೆ ಹುಬ್ಬಳ್ಳಿ ಕ್ಷೇತ್ರಕ್ಕೆ ರಾಷ್ಟ್ರೀಯ, ರಾಜ್ಯ ನಾಯಕರು ಬರುತ್ತಿದ್ದಾರೆ. ಎಲ್ಲರೂ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಿ, ಸೋಲಿಸಿ ಎನ್ನುತ್ತಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳುವುದಿಲ್ಲ. ಬದಲಾಗಿ ನನ್ನನ್ನು ಸೋಲಿಸಿ ಎಂಬುದಾಗಿ ಹೇಳುತ್ತಿದ್ದಾರೆ. ಇದು ಬಿಜೆಪಿ ನಾಯಕರ ಮನಸ್ಥಿತಿ” ಎಂದು ಕುಟುಕಿದರು.

“ಹಿಂದೆ ರಾಜಕೀಯ ಕಾರ್ಯಕ್ರಮಕ್ಕಾಗಿ ಬಿಜೆಪಿ ನಾಯಕನಾಗಿ ಬೆಳಗಾವಿಗೆ ಬರುತ್ತಿದ್ದೆ. ಈಗ ಕಾಂಗ್ರೆಸ್ ನಾಯಕನಾಗಿ ಕಾರ್ಯಕ್ರಮಕ್ಕೆ ಬಂದಿರುವೆ. ಇದು ನಿಮಗೂ ಆಶ್ಚರ್ಯ, ನನಗೂ ಆಶ್ಚರ್ಯ. ಜನಸಂಘದ ಕಾಲದಿಂದ ಬಿಜೆಪಿಯನ್ನು ಕಟ್ಟಿಕೊಂಡು ಬಂದಿದ್ದು ಶೆಟ್ಟರ್ ಕುಟುಂಬ. 1994ರಿಂದ ಹುಬ್ಬಳ್ಳಿ ಗ್ರಾಮೀಣ, ಸೆಂಟ್ರಲ್ ಕ್ಷೇತ್ರದಿಂದ ಪ್ರತಿ ಬಾರಿ ಗೆದ್ದಿದ್ದೇನೆ. 7ನೇ ಬಾರಿ ಸ್ಪರ್ಧೆಗೆ ತಯಾರಿ ಮಾಡಿದ್ದೆ. ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಬಂತೋ, ದ್ವೇಷ ಬಂತೋ ಗೊತ್ತಿಲ್ಲ. ಇವತ್ತು ಸ್ಥಾನಮಾನ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಹತ್ತು ಹನ್ನೆರಡು ತಿಂಗಳು, ಒಂದೂವರೆ ವರ್ಷ ಮಂತ್ರಿ ಆಗಿದ್ದೋ? 10 ತಿಂಗಳು ಮುಖ್ಯಮಂತ್ರಿ ಆಗಿದ್ದೋ? ಇದೆಲ್ಲದಕ್ಕಿಂತ 10 ವರ್ಷ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೆ. ಪ್ರತಿಪಕ್ಷ ನಾಯಕ ಎಂದರೆ ಅದು ಅಧಿಕಾರ ಅಲ್ಲ, ದುಡಿಮೆ” ಎಂದು ವ್ಯಾಖ್ಯಾನಿಸಿದರು.

ಬಿಜೆಪಿ ಬೆಳವಣಿಗೆಯಲ್ಲಿ ನಮ್ಮ ಶ್ರಮ ಹೆಚ್ಚು

“ಜನರ ಬಳಿ ಹೋಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಹಿಂದೆ ಪ್ರತಿಪಕ್ಷ ನಾಯಕನಾದಾಗ ಬೆಳಗಾವಿಯಲ್ಲಿ ಪಕ್ಷ ಬೆಳೆದಿರಲಿಲ್ಲ. ನಮ್ಮ ಬೀಗರಾದ ಸುರೇಶ್ ಅಂಗಡಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಆಗ ಇಬ್ಬರೂ ಸೇರಿ ಕಾರ್ಯಕರ್ತರ ಪಡೆ ತಯಾರಿ ಮಾಡಿದೆವು. ಆಮೇಲೆ 6, 8, 9 ಶಾಸಕರು ಬಿಜೆಪಿಯಿಂದ ಆಯ್ಕೆಯಾದರು. ಪಕ್ಷದ ಬೆಳವಣಿಗೆಯಲ್ಲಿ ನಮ್ಮ ಶ್ರಮ ಇದೆ. 30 ವರ್ಷದ ತಪಸ್ಸಿನ ಫಲದಿಂದ ರಾಜ್ಯ ನಾಯಕನಾಗಿ ಬೆಳೆಯಲು ಕಾರಣ ಆಯಿತು. ಅದಕ್ಕೆ ಜನರ ಪ್ರೀತಿ ವಿಶ್ವಾಸವೂ ಕಾರಣ. ಆದರೆ, 7ನೇ ಬಾರಿ ಸ್ಪರ್ಧೆ ಮಾಡುವಾಗ ಪಕ್ಷದಲ್ಲಿ ಷಡ್ಯಂತ್ರ ನಡೆಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ನಾಯಕರು ಕರೆ ಮಾಡಿ, ಡ್ರಾಫ್ಟ್‌ ಲೆಟರ್‌ಗೆ ಸಹಿ ಮಾಡಿ ಎಂದರು. ಟಿಕೆಟ್‌ ಕೊಡುವುದಿಲ್ಲ ಎಂದು ಹೇಳಿದರು. ಆದರೆ, ನನಗೆ ವಯಸ್ಸಿನ ಸಮಸ್ಯೆಯೇ? ಸರ್ವೇ ಬಂದಿದೆಯೇ? ಕರೆಪ್ಟ್ ಚಾರ್ಜ್, ಗೂಂಡಾಗಿರಿ, ರೌಡಿಶೀಟರ್ ಇದೆಯಾ ಎಂದು ಪ್ರಶ್ನಿಸಿದೆ. ದೆಹಲಿಗೆ ಕರೆದು ರಾಷ್ಟ್ರೀಯ ಅಧ್ಯಕ್ಷರು ನಿಮ್ಮ ಸೊಸೆಯನ್ನು ನಿಲ್ಲಿಸಿ ಅಂದರು. ಅವಳು ರಾಜಕಾರಣದಲ್ಲಿ ಇಲ್ಲ, ಸಾರ್ವಜನಿಕ ವಲಯದಲ್ಲಿ ಇಲ್ಲ ಎಂದೆ. ನಿಲ್ಲುವುದಾದರೆ ನಾನೇ ನಿಲ್ತೀನಿ ಅಂತ ಎರಡು ದಿನ ಟೈಮ್ ಪಡೆದು ವಾಪಸ್ ಬಂದೆ. ಬಳಿಕ ಮೂರನೇ ಆಫರ್ ರಾಜ್ಯಸಭಾ ಸದಸ್ಯ ಮಾಡ್ತೀವಿ ಅಂದರು. ಜನರ ಮಧ್ಯೆ ಇದ್ದ ವ್ಯಕ್ತಿ ನಾನು ರಾಜ್ಯಸಭೆಯಲ್ಲಿ ಹೋಗಿ ಮೂಲೆಯಲ್ಲಿ ಕುಳಿತುಕೊಳ್ಳಲಾ ಎಂದೆ. ಕೊನೆಗೆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಂದೆ” ಎಂದು ಟಿಕೆಟ್‌ ಪ್ರಹಸನದ ಕುರಿತು ಹೇಳಿದರು.

ಇದನ್ನೂ ಓದಿ: Karnataka Election 2023: ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಸೋನಿಯಾ ಗಾಂಧಿ ಎಂಟ್ರಿ, ಶೆಟ್ಟರ್ ಪರ ಕ್ಯಾಂಪೇನ್

Exit mobile version