Site icon Vistara News

Karnataka JDS: ಸೋಲಿನ ಹೊಣೆ ಹೊತ್ತು ಸಿ.ಎಂ. ಇಬ್ರಾಹಿಂ ರಾಜೀನಾಮೆ: ಗುರುವಾರ ಅವಲೋಕನ ಸಭೆ

karnataka jds president CM Ibrahim resigns

karnataka-election: JDS state Preident CM Ibrahim calls 25 BJP MPs impotent

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಪದ್ಮನಾಭನಗರದಲ್ಲಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ದೇವೆಗೌಡ್ರು ಹಿರಿಯರು, ಮುಖಂಡರು ಎಲ್ಲರನ್ನು ಸಭೆಗೆ ಕರೆದಿದ್ದಾರೆ. ಫಲಿತಾಂಶ ಬಂದ ಮಾರನೆ ದಿನ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಿದ್ದೇನೆ ಎಂದರು.

ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೂ ನಾವು ರಾಜ್ಯದಲ್ಲಿ 60 ಲಕ್ಷ ಮತ ಪಡೆದಿದ್ದೇವೆ. ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ ಅಂತ ಕಾರ್ಯಕರ್ತರಿಗೆ ಹೇಳ್ತೀನಿ. ಈ ಸರ್ಕಾರದ ಮೂರು ತಿಂಗಳ ಹನಿಮೂನ್ ಸಮಯ ನೋಡ್ತೀವಿ. ನಮ್ಮಲ್ಲಿ ಮತ ಪರಿವರ್ತನೆಗಾಗಿ ಸಿದ್ದತೆ ಮಾಡಿಕೊಳ್ಳುವಲ್ಲಿ ವಿಫಲವಾದೆವು. ಕೊನೆಯ ನಾಲ್ಕು ದಿನದ ತಂತ್ರಗಾರಿಕೆಯಲ್ಲಿ ವಿಫಲವಾದೆವು ಎಂದು ಹೇಳಿದರು.

ಗುರುವಾರ ಜೆಡಿಎಸ್‌ ಅವಲೋಕನ ಸಭೆ ನಡೆಯಲಿದೆ. ಈ ಸಭೆಯಲ್ಲೇ ಇಬ್ರಾಹಿಂ ರಾಜೀನಾಮೆ ವಿಚಾರವೂ ಚರ್ಚೆಯಾಗುವ ಹಾಗೂ ರಾಜ್ಯ ಅಧ್ಯಕ್ಷರ ಆಯ್ಕೆ ಆಗುವ ಸಾಧ್ಯತೆಯಿದೆ. ಕಾರ್ಯಕರ್ತರೇ ನಿರ್ಧಾರ ಮಾಡಲಿದ್ದಾರೆ ಎಂದು ಈಗಾಗಲೆ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ, ಹೊಸ ಸರ್ಕಾರ ರಚನೆಯಾಗಿದೆ ಶುಭವಾಗಲಿ. ಕಾಂಗ್ರೆಸ್‌ನಲ್ಲಿದ್ರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗ್ತೀವಿ. ಯು.ಟಿ.ಖಾದರ್‌ನ ಡಿಸಿಎಂ ಮಾಡಬಹುದಿತ್ತಲ್ಲ? ಈಗ ಅವರು ಎದ್ದೇಳುವಂತೆಯೂ ಇಲ್ಲ ಮಾತಾಡುವಂತೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡ, ಸಿಎಂ ಇಬ್ರಾಹಿಂ ಹಿರಿಯರಿದ್ದಾರೆ, ಸಾಕಷ್ಟು ಅನುಭವ ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜೀನಾಮೆ ನೀಡೋದು ಬೇಡ. ದೊಡ್ಡವರ ಜೊತೆ ಈ ಬಗ್ಗೆ ಮಾತನಾಡ್ತೀನಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: HD Kumaraswamy: ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕರಾಗಿ ಎಚ್‌.ಡಿ. ಕುಮಾರಸ್ವಾಮಿ ಆಯ್ಕೆ

Exit mobile version