ಗದಗ/ರಾಯಚೂರು: ಧಾರವಾಡದಲ್ಲಿ ನೇಹಾ ಹಿರೇಮಠ (Neha Hiremath) ಎಂಬ ಯುವತಿಯ ಕೊಲೆ ಸೇರಿ ಹಲವು ಕೊಲೆ ಪ್ರಕರಣಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ (Law And Order) ಬಗ್ಗೆ ಪ್ರಶ್ನೆಗಳು ಹುಟ್ಟಿಸುವಂತೆ ಮಾಡಿವೆ. ಇದರ ಬೆನ್ನಲ್ಲೇ, ಗದಗ ಹಾಗೂ ರಾಯಚೂರಿನಲ್ಲಿ ದುಷ್ಕರ್ಮಿಗಳು ಪೊಲೀಸರ (Police) ಮೇಲೆಯೇ ಹಲ್ಲೆ ನಡೆಸಿರುವುದು ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ನಿದರ್ಶನ ಎಂಬಂತಾಗಿದೆ.
ಗದಗದಲ್ಲಿ ನಡೆದಿದ್ದೇನು?
ಗದಗ ನಗರದ ಬೆಟಗೇರಿ ರೈಲ್ವೆ ಸೇತುವೆ ಬಳಿ ಕೆಲ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಪೊಲೀಸರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಪೊಲೀಸರ ಕಾರಿನ ಗಾಜು ಒಡೆದು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಕಾರಿನಲ್ಲಿದ್ದ ಆರೋಪಿಯನ್ನು ದುಷ್ಕರ್ಮಿಗಳು ಕರೆದುಕೊಂಡು ಹೋಗಿದ್ದಾರೆ. ಗಂಗಾವತಿ ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋಗುವಾಗ ಹಲ್ಲೆ ನಡೆಸಲಾಗಿದೆ. ಗಂಗಾವತಿ ಮೂಲದ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಕಾರು ಚಾಲಕನಿಗೆ ಶುಕ್ರವಾರ (ಜೂನ್ 29) ರಾತ್ರಿ ನಡೆದ ಹಲ್ಲೆಯಿಂದ ಗಾಯಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗದಗಿನ ಎಂ.ಎಸ್.ಕೃಷ್ಣಾ ನಗರದ ಅಲಿ ಎಂಬ ಆರೋಪಿಯನ್ನು ಗಂಗಾವತಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದರು. ಪ್ರಕರಣವೊಂದರ ವಿಚಾರಣೆಯ ಭಾಗವಾಗಿ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ದುಷ್ಕರ್ಮಿಗಳು ಪೊಲೀಸರ ಕಾರಿಗೆ ಅಡ್ಡಗಟ್ಟಿ, ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಕಾರು ಚಾಲಕನು ಗದಗಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಯಚೂರಿನಲ್ಲೂ ಪೊಲೀಸರ ಮೇಲೆ ಹಲ್ಲೆ
ರಾಯಚೂರು ಜಿಲ್ಲೆಯಲ್ಲಿಯೂ ಪೊಲೀಸರ ಮೇಲೆ ಡಕಾಯಿತರ ಗ್ಯಾಂಗ್ ದಾಳಿ ನಡೆಸಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶುಕ್ರವಾರ ತಡರತ್ರಿ ಸರ್ಕಲ್ ಇನ್ಸ್‌ಪೆಕ್ಟರ್ ವಾಹನವನ್ನು ಗುರಿಯಾಗಿಸಿ ದಾಳಿ ಮಾಡಲಾಗಿದ್ದು, ದರೋಡೆಗೆ ಯತ್ನಿಸಲಾಗಿದೆ. ಲಿಂಗಸುಗೂರು ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಕಾನ್‌ಸ್ಟೆಬಲ್ ಮೇಲೆ ದಾಳಿ ನಡೆಸಿದ್ದು, ಪೊಲೀಸ್ ಸಿಬ್ಬಂದಿಯು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ದಾಳಿಯ ವೇಳೆ ಪೊಲೀಸರ ಜೀಪ್ ಜಖಂಗೊಂಡಿದ್ದು, ಕೆಲ ಸಿಬ್ಬಂದಿಗೆ ಗಾಯಗಳಾಗಿವೆ. ಸ್ಕಾರ್ಪಿಯೋ ಕಾರ್‌ನಲ್ಲಿ ಬಂದು ದಾಳಿ ನಡೆಸಿದ್ದಾರೆ. ಇದಾದ ಬಳಿಕ ಪೊಲೀಸರು ಸಾರ್ವಜನಿಕರ ಸಹಾಯದಿಂದ ಮೂವರು ಡಕಾಯಿತರನ್ನು ಬಂಧಿಸಿದ್ದಾರೆ. ಬಂಧಿತರು ಯಾದಗಿರಿ ಜಿಲ್ಲೆಯ ಕನ್ಯಾ ಕೋಳೂರು ತಾಂಡಾ ನಿವಾಸಿಗಳಾಗಿದ್ದಾರೆ. ಕುಮಾರ (35), ಗುರುರಾಜ (25) ಹಾಗೂ ಸುರೇಶ್ (45) ಬಂಧಿತರು. ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ .
ಇದನ್ನೂ ಓದಿ: Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ