ಬೆಂಗಳೂರು: ವಿಧಾನಸಭೆ ಅಧಿವೇಶನ ನಡೆದಾಗ ಪ್ರತಿ ಬಾರಿಯೂ ದಾಖಲೆ ಬಿಡುಗಡೆ ಮಾಡುತ್ತೇನೆ, ಸಚಿವರ ಹಗರಣ ಬಯಲು ಮಾಡುತ್ತೇನೆ ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿಯೂ ಅದೇ ವರಸೆ ಪ್ರದರ್ಶಿಸಿದ್ದಾರೆ.
ಸೋಮವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ಅದರಲ್ಲೂ ಈ ಬಾರಿ ಸದನದಲ್ಲಿ ದಾಖಲೆ ಇಟ್ಟೇ ಮಾತನಾಡುತ್ತೇನೆ. ಹಗರಣ ಬಯಲು ಮಾಡುತ್ತೇನೆ ಎಂದು ಅವರು ಹೇಳಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಕೂಡಾ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸರಕಾರದ ಬೃಹತ್ ಹಗರಣವನ್ನು ಬಯಲಿಗೆಳೆಯುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಅದರಲ್ಲೂ ಒಬ್ಬ ಸಚಿವರ ಹಗರಣ ಇದು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಅವರು ಈಗಾಗಲೇ ಹಲವು ದಾಖಲೆ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಸಚಿವರು ಯಾರು ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಈ ನಡುವೆ ಕುಮಾರಸ್ವಾಮಿ ಅವರ ಆವಾಜ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಮೊದಲು ಅಧಿವೇಶನಕ್ಕೆ ಬನ್ನಿ. ಆಮೇಲೆ ಹಗರಣ, ದಾಖಲೆ ಬಿಡುಗಡೆ ಎಲ್ಲ ಎಂದು ಹೇಳಿದೆ. ಈ ನಡುವೆ, ಇಷ್ಟೆಲ್ಲ ರೋಷಾವೇಶ ತೋರಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರು ಬೆಳಗ್ಗೆ ಎದ್ದುಕೊಂಡು ಹಾಸನಕ್ಕೆ ಹೋಗಿದ್ದಾರೆ. ಅಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗುತ್ತಾರೆ ಎನ್ನಲಾಗಿದೆ.
ಆಗಾಗ ಅಧಿವೇಶನ ಕರೆಯಿರಿ, ಚರ್ಚೆ ಮಾಡಲಿಕ್ಕಿದೆ ಎಂದು ಹೇಳುವ ಕುಮಾರಸ್ವಾಮಿ ಅವರು ಕೊನೆಗೆ ಅಧಿವೇಶನದಲ್ಲಿ ಭಾಗವಹಿಸುವುದು ಮಾತ್ರ ಭಾರಿ ಕಡಿಮೆ.
ಿಇದನ್ನೂ ಓದಿ | ಅಧಿವೇಶನ | ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಕೈ ಪಡೆ ಬಳಿ ನಾಲ್ಕು ಅಸ್ತ್ರ