Site icon Vistara News

Karnataka Cyber Crime: ಕರ್ನಾಟಕದಲ್ಲಿ ನಿತ್ಯ 1 ಕೋಟಿ ರೂ. ಸೈಬರ್ ವಂಚಕರ ಪಾಲು! ಕಳೆದ ವರ್ಷ 363 ಕೋಟಿ ರೂ. ಗುಳಂ

Cyber Crime

ಬೆಂಗಳೂರು: ಸೈಬರ್ ಅಪರಾಧಗಳಿಗಾಗಿ (Cyber Crimes) 2022ರಲ್ಲಿ ಕರ್ನಾಟಕವು ಸುಮಾರು 363 ಕೋಟಿ ರೂಪಾಯಿ ಕಳೆದುಕೊಂಡಿದೆ. ಸರಾಸರಿ ಲೆಕ್ಕ ಹಾಕಿದರೆ, ದಿನಕ್ಕೆ ಒಂದು ಕೋಟಿ ರೂಪಾಯಿ ಸೈಬರ್ ಕಳ್ಳರ ಪಾಲಾಗಿದೆ! 2023 ಜನವರಿ ತಿಂಗಳವೊಂದರಲ್ಲಿ ಗರಿಷ್ಠ 36 ಕೋಟಿ ರೂ. ಸೈಬರ್ ಕಳ್ಳರ ಜೇಬುಪಾಲಾಗಿದೆ! ಈ ಮಾಹಿತಿಯನ್ನು ಸ್ವತ ರಾಜ್ಯ ಸರ್ಕಾರವೇ ಬಹಿರಂಗಪಡಿಸಿದೆ. ವಿಧಾನ ಪರಿಷತ್‌ನಲ್ಲಿ ಕೇಳಲಾದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ(Karnataka Cyber Crime).

ಎಂಎಲ್‌ಸಿ ಎಂ. ನಾಗರಾಜು ರಾಜ್ಯದಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಮಾಹಿತಿಯನ್ನು ಕೇಳಿದ್ದರು. ಈ ಬಗ್ಗೆ ಉತ್ತರ ಒದಗಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ವಂಚನೆಯು ಐದು ಪಟ್ಟು ಹೆಚ್ಚಳವಾಗಿದೆ. 2009ರಲ್ಲಿ ಕರ್ನಾಟಕದಲ್ಲಿ ಒಟ್ಟು 71.27 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿತ್ತು. 2022ರ ಹೊತ್ತಿಗೆ ಈ ಪ್ರಮಾಣವು 363 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಸೈಬರ್ ಸಂಬಂಧಿ ವಂಚನೆಗಳ ಪೈಕಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಕಳೆದ ವರ್ಷ ಬೆಂಗಳೂರ ಒಂದರಲ್ಲೇ 266 ಕೋಟಿ ರೂಪಾಯಿ ಸೈಬರ್ ವಂಚಕರು ಎಗರಿಸಿದ್ದಾರೆ. 2021ರಲ್ಲಿ ಈ ಪ್ರಮಾಣ 97 ಕೋಟಿ ರೂ. ಇತ್ತು. ಬೆಂಗಳೂರು ನಂತರದ ಸ್ಥಾನದಲ್ಲಿ ಮೈಸೂರು ನಗರವಿದೆ. 14 ಕೋಟಿ ರೂ. ವಂಚಕರ ಪಾಲಾಗಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಒಟ್ಟು 4.35 ಕೋಟಿ ರೂ. ಸೈಬರ್ ವಂಚನೆ ಪಾಲಾಗಿದೆ.

ಜನರು ಮುಖ್ಯವಾಗಿ ತಮ್ಮ ಆನ್‌ಲೈನ್ ಪಾವತಿ ಗೇಟ್‌ವೇಗಳು ಮತ್ತು ಬ್ಯಾಂಕ್ ಖಾತೆಗಳನ್ನು ಗುರಿಯಾಗಿಸಿಕೊಂಡು ವಿವಿಧ ರೀತಿಯ ಸೈಬರ್‌ಕ್ರೈಮ್‌ಗಳಿಗೆ ಬಲಿಯಾಗುತ್ತಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಜನರನ್ನು ಆರ್ಥಿಕವಾಗಿ ಮತ್ತು ಬೇರೆ ರೀತಿಯಲ್ಲಿ ಮೋಸ ಮಾಡಲು ಸಹ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!

Exit mobile version