Site icon Vistara News

Karnataka Medical Council: 4 ವರ್ಷದ ನಂತರ ಕೆಎಂಸಿ‌ ಸದಸ್ಯರಿಗೆ ಬಲ! ಆಯ್ಕೆ ಊರ್ಜಿತವೆಂದ ಹೈಕೋರ್ಟ್

Karnataka Medical Council

ಶಶಿಧರ ಮೇಟಿ, ಬಳ್ಳಾರಿ
ಕರ್ನಾಟಕ ವೈದ್ಯಕೀಯ ಪರಿಷತ್‌ನ (ಕೆಎಂಸಿ- Karnataka Medical Council) ನೂತನ ಸದಸ್ಯರಿಗೆ ನಾಲ್ಕು ವರ್ಷದ ನಂತರ ಕಲಬುರಗಿ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶದಿಂದ ಅಧಿಕಾರದ ಬಲ ಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 5 ಜನ ನಾಮನಿರ್ದೇಶಿತ ಸದಸ್ಯರ ಆಯ್ಕೆ ಮಾತ್ರ ಬಾಕಿ ಉಳಿದಿದೆ. ನಂತರದಲ್ಲಿ ಕೆಎಂಸಿ‌‌ ಚುಕ್ಕಾಣಿ ನೂತನ ಮಂಡಳಿಯ ಕೈ ಸೇರಲಿದೆ.

ಕೆಎಂಸಿಗೆ ಚುನಾವಣೆಯಿಂದ 12 ಸದಸ್ಯರು ಮತ್ತು ಸರ್ಕಾರದಿಂದ ನಾಮನಿರ್ದೇಶಿತರಾಗಿ‌ ಐದು ಜನ ಸೇರಿ 17 ಸದಸ್ಯ ಬಲವನ್ನು ಹೊಂದಿರುತ್ತದೆ. ಕೆಎಂಸಿಗೆ‌ 2020ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ 12 ಜನ ನೂತನ‌ ಸದಸ್ಯರನ್ನು‌ ಆಯ್ಕೆ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಕಲಬುರ್ಗಿಯ ಗಚ್ಚಿನಮನಿ ನಾಗನಾಥ ಅವರು ಮತದಾರರ ಪಟ್ಟಿ ಸರಿಯಿಲ್ಲವೆಂದು ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು.

Karnataka Medical Council members

ಏಕ‌ ಸದಸ್ಯ ಪೀಠದ ಆದೇಶದ ಮೇಲೆ ಮೇಲ್ಮನವಿ

ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು 2022ರಂದು ನೂತನ‌ ಸದಸ್ಯರ ಆಯ್ಕೆಯನ್ನು ರದ್ದುಗೊಳಿಸಿ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ, ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಕಲಬುರಗಿಯ ಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು.

ಚುನಾವಣೆ ಫಲಿತಾಂಶ ಊರ್ಜಿತಗೊಳಿಸಿದ ನ್ಯಾಯಾಲಯ

ಪ್ರಕರಣ ವಿಚಾರಣೆ ನಡೆಸಿದ ಕಲಬುರಗಿ ದ್ವಿಸದಸ್ಯ ಪೀಠವು ಏಕ‌ಸದಸ್ಯ ಪೀಠದ ಆದೇಶವನ್ನು ತಳ್ಳಿಹಾಕಿ ಮತದಾರ ಪಟ್ಟಿಯಿಂದ ಕೈ ಬಿಟ್ಟ ಸದಸ್ಯರ ಹೆಸರು ಸೇರಿಸಿ ಚುನಾವಣೆ ನಡೆಸಿರುವುದು ಸರಿಯಾಗಿದೆ. 2017 ಬೆಂಗಳೂರು ನ್ಯಾಯಾಲಯದ ಮಧ್ಯಂತರ ಆದೇಶದ ಮೇಲೆ‌ ನ್ಯಾಯಾಲಯಕ್ಕೆ ಹೋಗಬಹುದಿತ್ತು ಅಥವಾ ಸರ್ಕಾರದ ನ್ಯಾಯ ಮಂಡಳಿಯ ಮುಂದೆ ಹೋಗಬಹುದಿತ್ತು ಎಂದು ಹೇಳುವ ಜತೆಗೆ 2020ರಲ್ಲಿ ಕೆಎಂಸಿಗೆ ಚುನಾವಣೆ ಮೂಲಕ ಆಯ್ಕೆಯಾಗಿರುವ ಸದಸ್ಯರನ್ನು ಮುಂದಿನ ಐದು ವರ್ಷದವರೆಗೆ ಆಡಳಿತ ನಡೆಸಬಹುದೆಂದು ಸೂಚಿಸಿದೆ. ಇದರಿಂದಾಗಿ ಮೂರು ವರ್ಷದ ಹಿಂದೆ ಅಯ್ಕೆಯಾಗಿರುವ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಕೆಎಂಸಿ ಪದಾಧಿಕಾರಿಗಳ ಆಯ್ಕೆ ಬಾಕಿ

ಚುನಾವಣೆಯಿಂದ 12 ಸದಸ್ಯರು ಆಯ್ಕೆಯಾಗಿದ್ದು, ಇನ್ನುಳಿದ ಐದು ಸದಸ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಾಮನಿರ್ದೇಶನ ಮಾಡಬೇಕಾಗಿದೆ. ಇದರಲ್ಲಿ ನಾಲ್ಕು  ಜನರನ್ನು ವಿಭಾಗಕ್ಕೆ ಒಬ್ಬರಂತೆ ನಾಲ್ಕು ಜನರನ್ನು ಜಾತಿ ಮತ್ತು ಲಿಂಗದ ಸಾಮಾಜಿಕ ನ್ಯಾಯ ಅನುಸಾರ ಆಯ್ಕೆ ಮಾಡಬೇಕಾಗಿದೆ. ಒಬ್ಬ ಸದಸ್ಯರನ್ನು ಡೆಂಟಲ್ ಕೌನ್ಸಿಲ್, ಫಾರ್ಮಸಿ ಕೌನ್ಸಿಲ್, ನರ್ಸಿಂಗ್ ಕೌನ್ಸಿಲ್, ಆಯುರ್ವೇದಿಕ್ ಮತ್ತು ಹೋಮಿಯೋಪತಿ‌ ಕೌನ್ಸಿಲ್‌ನಿಂದ ಒಂದು‌ ವರ್ಷದ ಅವಧಿಗೆ ಒಬ್ಬರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ‌ ನೇಮಕ ಮಾಡಬೇಕಾಗುತ್ತದೆ.

ಬೇಗ ಆಗಲಿ ಸರ್ಕಾರ ನಾಮನಿರ್ದೇಶನ

ಈಗಾಗಲೇ ಕಂದಾಯ ವಿಭಾಗದ ಅನುಸಾರ ಬೆಂಗಳೂರು ವಿಭಾಗದಿಂದ ಮೂವರು, ಮೈಸೂರು ವಿಭಾಗದಿಂದ 3, ಕಲಬುರಗಿ ವಿಭಾಗದಿಂದ 3 ಮತ್ತು ಬೆಳಗಾವಿ ವಿಭಾಗದಿಂದ 3 ಜನರು ಚುನಾವಣೆಯಲ್ಲಿ‌ ಆಯ್ಕೆ ಮಾಡಲಾಗಿತ್ತು. ಸರ್ಕಾರ ಐದು ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಿದ ನಂತರ ಕೆಎಂಸಿಯ ರಿಜಿಸ್ಟ್ರಾರ್ ಅವರು ಕೆಎಂಸಿಗೆ ನೂತನ‌ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಕೆಎಂಸಿಯಿಂದ ನಾಮ ನಿರ್ದೇಶನ ಸದಸ್ಯರ ಆಯ್ಕೆ ಮಾಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ.

ವಿವಾದದ ಹಿನ್ನೆಲೆ

ಕೆಎಂಸಿಗೆ ಚುನಾವಣೆಯ ಸಂದರ್ಭದಲ್ಲಿ ಕೆಎಂಸಿಯು ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿ ರಿನಿವಲ್ ಮಾಡಿಲ್ಲವೆಂದು‌ ಸುಮಾರು 40 ಸಾವಿರಕ್ಕೂ‌‌ ಅಧಿಕ ವೈದ್ಯ‌ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಮತದಾರರ ಪಟ್ಟಿ‌ಯನ್ನು ಸಿದ್ಧಪಡಿಸಿತ್ತು. ಆದರೆ, ಬೆಂಗಳೂರು ಮತ್ತು ಕಲಬುರಗಿ ನ್ಯಾಯಾಲಯವು 2017ರಲ್ಲಿ ನೀಡಿರುವ ಮಧ್ಯಂತರ ಆದೇಶದಂತೆ ಮತದಾರರ ಪಟ್ಟಿಯಿಂದ ಕೈ ಬಿಟ್ಟ ಸದಸ್ಯರು ಆರ್‌ಓಗೆ ತಕರಾರು ಸಲ್ಲಿಸಿದಾಗ ಕೈ ಬಿಟ್ಟ ಸದಸ್ಯರನ್ನು ಮತದಾರ ಪಟ್ಟಿಯಲ್ಲಿ‌ ಸೇರಿಸಿ 2020ರ ಜನವರಿಯಲ್ಲಿ ಚುನಾವಣೆ ನಡೆದು, ನೂತನ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಮತದಾರರ ಪಟ್ಟಿ‌ ಸರಿಯಿಲ್ಲವೆಂದು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ನಾಗನಾಥ್ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಇವರು ಕೆಎಂಸಿಯ ನೂತನ ಸದಸ್ಯರು

2020ರಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿ ವಿಭಾಗದಿಂದ ಮೂರು ಸದಸ್ಯರಲ್ಲಿ ಇಬ್ಬರು ವೈದ್ಯರು, ಇನ್ನೊಬ್ಬರು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿರುತ್ತದೆ. ಡಾ. ಹೊನ್ನೆಗೌಡ, ಡಾ.ವೈ.ಸಿ. ಯೋಗಾನಂದರೆಡ್ಡಿ, ಡಾ.ರವೀಂದ್ರ ಕೆ.ಎನ್., ಡಾ.ರವೀಂದ್ರ ಆರ್, ಡಾ. ಪವನ್ ಕುಮಾರ್ ಎನ್ ಪಾಟೀಲ್, ಡಾ.ವೀರಭದ್ರಯ್ಯ ಟಿ.ಎ., ಡಾ.ಸೊರಗಾವಿ ವಿ.ರಾಮಪ್ಪ, ಡಾ.ಶರಣಬಸಪ್ಪ ಕಾರಾಭಾರಿ, ಡಾ.ಸುಧೀರ್ ಆರ್ ಜಂಭಗಿ, ಡಾ.ರವಿ‌.ಕೆ., ಡಾ.ರವಿ ನಿಂಗಪ್ಪ ಅವರು ನೂತನ ಸದಸ್ಯರಾಗಿ‌ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Lok Sabha Security Breach: ಪ್ರತಾಪ್‌ ಸಿಂಹ ವಿರುದ್ಧ ದೇಶದ್ರೋಹಿ ಫ್ಲೆಕ್ಸ್;‌ ಸಂಘಟನೆ ಅಧ್ಯಕ್ಷನ ಮೇಲೆ FIR

ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಸದಸ್ಯರ ಆಯ್ಕೆಯನ್ನು ದ್ವಿಸದಸ್ಯ ಪೀಠವು ಎತ್ತಿ‌ಹಿಡಿದಿದೆ. ಸರ್ಕಾರವೂ ಆದಷ್ಟು ಬೇಗ, ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.
| ಡಾ.ವೈ.ಸಿ. ಯೋಗಾನಂದರೆಡ್ಡಿ, ಕೆಎಂಸಿಗೆ ಆಯ್ಕೆಯಾಗಿರುವ ನೂತನ ಸದಸ್ಯರು

Exit mobile version