ನವದೆಹಲಿ: ಅನೇಕ ವರ್ಷಗಳ ಹೋರಾಟದ ನಂತರ ಕನ್ನಡಕ್ಕೆ ದೊರಕಿದ ಶಾಸ್ತ್ರೀಯ ಸ್ಥಾನಮಾನದ ಲಾಭ ಪಡೆಯುವ ನಿಟ್ಟಿನಲ್ಲಿ ಅತ್ಯಂತ ವಿಳಂಬದ ನಂತರ ಕೊನೆಗೂ ಕೇಂದ್ರ ಸರ್ಕಾರದ ಕದವನ್ನು ರಾಜ್ಯ ಸರ್ಕಾರ ತಟ್ಟಿದೆ.
ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಒಂದು ಅಂಗಸಂಸ್ಥೆಯಾಗಿರುವ ಕನ್ನಡ ಶಾಸ್ತ್ರೀಯ ಅತ್ಯುನ್ನದ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಗೆ ಸ್ವಾಯತ್ತತೆಯನ್ನು ನೀಡುವ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸುನಿಲ್‌ಕುಮಾರ್ ಬುಧವಾರ ಭೇಟಿಯಾದರು. ಸ್ವಾಯತ್ತತೆ ನೀಡಿದರೆ ಮಾತ್ರ ಅದು ರಚನಾತ್ಮಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಸಾಧ್ಯ. ಸ್ವಾಯತ್ತತೆ ಜತೆಗೆ ಕೇಂದ್ರಕ್ಕೆ ಅಗತ್ಯ ಹಣಕಾಸು ನೆರವನ್ನೂ ನೀಡಿದರೆ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯ ಎಂದು ಹೇಳಿದರು. ಈ ಕುರಿತು ಮಾಹಿತಿ ನೀಡಿರುವ ಸುನಿಲ್ ಕುಮಾರ್, ನಮ್ಮ ಮನವಿಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸ್ವಾಯತ್ತತೆ ನೀಡುವ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಹಳ ಮುಖ್ಯವಾಗಿ ಸ್ವತಃ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರು ಶೀಘ್ರದಲ್ಲಿಯೇ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ರಾಜಕಾರಣಿಗಳ ಅಸಡ್ಡೆಯೇ ಕಾರಣ
ಶಾಸ್ತ್ರೀಯ ಕೇಂದ್ರ ಸ್ಥಾಪನೆಯಾಗಿದ್ದರೂ ತಮಿಳುನಾಡಿನ ರೀತಿಯಲ್ಲಿ ಸ್ವಾಯತ್ತತೆ ಸಿಕ್ಕಿಲ್ಲ. ಇದರಿಂದ ದೊಡ್ಡ ಮಟ್ಟದ ಅನುದಾನ ಲಭಿಸದೆ ಹೆಸರಿಗೆ ಮಾತ್ರವೇ ಶಾಸ್ತ್ರೀಯ ಸ್ಥಾನ ಎಂಬಂತಾಗಿದೆ. ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕೆ ಅಥವಾ ಬೆಂಗಳೂರಿಗೆ ಸ್ಥಳಾಂತರಿಸಬೇಕೆ ಎಂಬ ಕುರಿತೇ ರಾಜ್ಯ ಸರ್ಕಾರ ಅನೇಕ ವರ್ಷ ತೀರ್ಮಾನ ಮಾಡಿರಲಿಲ್ಲ. ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ಜಾಗವನ್ನೂ ಗುರುತಿಸಲಾಗಿತ್ತು. ತಾತ್ಕಾಲಿಕವಾಗಿ ಕನ್ನಡ ಭವನದಲ್ಲಿ ಕೇಂದ್ರ ಆರಂಭಕ್ಕೆ ತೀರ್ಮಾನಿಸಲಾಗಿತ್ತಾದರೂ ಅಲ್ಲಿದ್ದ ಉರ್ದು ಅಕಾಡೆಮಿ ಸ್ಥಳಾಂತರವಾಗದೆ ಸಮಸ್ಯೆ ಬಗೆಹರಿದಿರಲಿಲ್ಲ. ಕೊನೆಗೆ ಮೈಸೂರಿನಲ್ಲೆ ಕೇಂದ್ರ ಸ್ಥಾಪನೆ ಎಂಬ ನಿರ್ಧಾರಕ್ಕೆ ಬರಲಾಯಿತು. ಕರ್ನಾಟಕದ ರಾಜಕಾರಣಿಗಳು ಈ ಕುರಿತು ಅತ್ಯಂತ ಕಡಿಮೆ ಆಸಕ್ತಿ ಹೊಂದಿರುವ ಕಾರಣದಿಂದ ಈ ಸಮಸ್ಯೆ ಬಗೆಹರಿದಿಲ್ಲ ಎಂದು ಸಾರ್ವಜನಿಕರು ಹಾಗೂ ಕನ್ನಡ ಹೋರಾಟಗಾರರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.
ಹೆಚ್ಚಿನ ಓದು: ಸರ್ಕಾರಿ ರಂಗಮಂದಿರಗಳ ಬಾಡಿಗೆ ಹೆಚ್ಚಳ: ಪ್ರತಿ ವರ್ಷ 5% ಏರಿಕೆ ಮಾಡಲು ಆದೇಶ
ಒಂದು ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಈ ಹಿಂದೆ ಸಚಿವ ಸುನಿಲ್ ಕುಮಾರ್ ಹೇಳಿದ್ದರು. ಆದರೆ ಇದೀಗ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಅವರೊಬ್ಬರನ್ನಷ್ಟೆ ಕರೆದುಕೊಂಡು ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಬಾರಿಯಾದರೂ ಸಮಸ್ಯೆ ಬಗೆಹರಿಯುತ್ತದೆಯೇ ಕಾದುನೋಡಬೇಕಿದೆ.