Site icon Vistara News

BJP Meeting | ಕಾರ್ಯಕಾರಿಣಿಯಲ್ಲಿ ಕರ್ನಾಟಕದ್ದೇ ಚರ್ಚೆ, ನಾಯಕರಿಗೆ ವಸ್ತುಸ್ಥಿತಿ ವಿವರಿಸಿದ ಬೊಮ್ಮಾಯಿ, ಕಟೀಲ್

BJP National Executive Meeting

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (BJP Meeting) ಕರ್ನಾಟಕದ ರಾಜಕೀಯ ಸ್ಥಿತಿಗತಿಗಳ ಕುರಿತೇ ಹೆಚ್ಚು ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ನಾಯಕರು ಪಾಲ್ಗೊಂಡ ಸಭೆಯು ಮೂರು ಗಂಟೆ ನಡೆಯಿತು. ಇದರಲ್ಲಿ ಅರ್ಧ ಗಂಟೆ ಕರ್ನಾಟಕದ ಕುರಿತು ಚರ್ಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಸ್ತುಸ್ಥಿತಿ ವಿವರಿಸಿದ ಬೊಮ್ಮಾಯಿ, ಕಟೀಲ್
ಕರ್ನಾಟಕದ ರಾಜಕೀಯ ಬೆಳವಣಿಗೆ, ಪಕ್ಷ ಸಂಘಟನೆ, ಆಡಳಿತ ಸೇರಿ ಹಲವು ವಿಷಯಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಕೇಂದ್ರ ನಾಯಕರಿಗೆ ಮಾಹಿತಿ ನೀಡಿದರು. ನಳಿನ್‌ ಕುಮಾರ್‌ ಕಟೀಲ್‌ ಅವರು ಪಕ್ಷದ ಸಂಘಟನೆ, ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಸಂಪರ್ಕ ಸೇರಿ ವಿವಿಧ ಮಾಹಿತಿ ನೀಡಿದರು. ಇನ್ನು ಬೊಮ್ಮಾಯಿ ಅವರು, ರಾಜ್ಯದ ಆಡಳಿತ, ಜನಪರ ಯೋಜನೆ, ಪ್ರಮುಖ ನಾಯಕರ ರ‍್ಯಾಲಿಗಳ ಬಗ್ಗೆ ವಿವರಿಸಿದರು. ಇಬ್ಬರೂ ನಾಯಕರು ಕರ್ನಾಟಕದ ಬಗ್ಗೆ ಅರ್ಧ ಗಂಟೆ ಮಾಹಿತಿ ನೀಡಿದರು.

ಚುನಾವಣೆ ಬಗ್ಗೆ ಚರ್ಚೆ ಎಂದ ಆರ್‌.ಅಶೋಕ್‌
“ಕೆಲವೇ ತಿಂಗಳಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆಯಾಗಿದೆ” ಎಂದು ರಾಜ್ಯ ಕಂದಾಯ ಸಚಿವ ಆರ್‌.ಅಶೊಕ್‌ ಮಾಹಿತಿ ನೀಡಿದರು. ಕಾರ್ಯಕಾರಿಣಿಯ ಮೊದಲ ದಿನದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ 15 ವರ್ಷದಿಂದ ಕಾರ್ಯಕಾರಿಣಿ ಸಭೆಗಳಿಗೆ ಹಾಜರಾಗುತ್ತಿದ್ದೇನೆ. ಚುನಾವಣೆ ನಡೆಯುವ ರಾಜ್ಯಗಳಿಗೆ ಸಭೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅದರಂತೆ ಕರ್ನಾಟಕ ಸೇರಿ ಕೆಲವು ರಾಜ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ” ಎಂದು ತಿಳಿಸಿದರು.

“ಬಸವರಾಜ ಬೊಮ್ಮಾಯಿ ಹಾಗೂ ನಳಿನ್‌ ಕುಮಾರ್‌ ಕಟೀಲ್‌ ಅವರು ರಾಜ್ಯದ ಕುರಿತು ಹೆಚ್ಚಿನ ಮಾಹಿತಿ ಒದಗಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಏನು ಮಾಡಬೇಕು, ಜನರ ಮನಸ್ಸನ್ನು ಹೇಗೆ ಗೆಲ್ಲಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಕುರಿತು ನರೇಂದ್ರ ಮೋದಿ ಅವರು ಸ್ಫೂರ್ತಿ ತುಂಬಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ | BJP Meeting | ಬಿಜೆಪಿ ಕಾರ್ಯಕಾರಿಣಿ; 2024ರ ಲೋಕಸಭೆ, 9 ವಿಧಾನಸಭೆ ಚುನಾವಣೆಗೆ ಪಕ್ಷ ರಣತಂತ್ರ, ರವಿಶಂಕರ್‌ ಪ್ರಸಾದ್ ಮಾಹಿತಿ

Exit mobile version