Site icon Vistara News

Karnataka Politics : ಜೆಡಿಎಸ್‌ನ 13 ಶಾಸಕರು ಶೀಘ್ರವೇ ಕಾಂಗ್ರೆಸ್‌ಗೆ; ಕೆ.ಎನ್‌ ರಾಜಣ್ಣ ಹೊಸ ಬಾಂಬ್

KN Rajanna infront of vidhana soudha

ಬೆಂಗಳೂರು: ಜೆಡಿಎಸ್‌ನ 19 ಶಾಸಕರಲ್ಲಿ 13 ಮಂದಿ ಶೀಘ್ರದಲ್ಲೇ ಕಾಂಗ್ರೆಸ್‌ಗೆ ಬರಲಿದ್ದಾರೆ (13 JDS MLAs to join Congress) ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (KN Rajanna) ಹೊಸ ಬಾಂಬ್‌ ಸಿಡಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ (Karnataka Politics) ಕೇಳಿಬರುತ್ತಿರುವ ಆಪರೇಷನ್‌ ಕಮಲದ (Operation Kamala) ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ʻʻಬಿಜೆಪಿ ಒಂದು ವೇಳೆ ಆಪರೇಷನ್ ಕಮಲ ಮಾಡಿದರೆ ಕಾಂಗ್ರೆಸ್ ಕೈ ಕಟ್ಟಿ ಕೂರುವುದಿಲ್ಲ. ಅವರು ಆಪರೇಷನ್‌ ಕಮಲ ಮಾಡಿದರೆ ನಾವು ಕೂಡಾ ಅಪರೇಷನ್ ಹಸ್ತ (Operation Hasta) ಮಾಡುತ್ತೇವೆʼʼ ಎಂದು ಹೇಳಿದ ಕೆ.ಎನ್‌. ರಾಜಣ್ಣ, ನಾವೇನು ಸುಮ್ಮನೆ ಕುತಿದ್ದೇವಾ‌.? ಜೆಡಿಎಸ್ ನಿಂದ ಮೂರನೇ ಎರಡರಷ್ಟು ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ. ಲೋಕಸಭೆ ಚುನಾವಣೆಯೊಳಗೇ ಬರುವ ಸಾಧ್ಯತೆ ಇದೆ ಎಂದರು.

ʻʻಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿಯಿಂದ ಬೇಸತ್ತು ಅವರು ಕಾಂಗ್ರೆಸ್ ಪಾರ್ಟಿಗೆ ಬರ್ತಾರೆ. ಯಾರು ಯಾರು ಬರ್ತಾರೆ ಅಂತ ಈಗಲೇ ಹೇಳೋದಿಲ್ಲ. ಹೇಳಿದ್ರೆ ಎಚ್ಚೆತ್ತುಕೊಳ್ತಾರೆ. ನೂರಕ್ಕೆ ನೂರು ಬರ್ತಾರೆʼʼ ಎಂದು ಹೇಳಿದ ಕೆ.ಎನ್‌. ರಾಜಣ್ಣ ಅವರು, ʻʻಅವರನ್ನು ನಾವೇನೂ ಬನ್ನಿ ಅಂತ ಕರೆಯುತ್ತಿಲ್ಲ. ಅವರೇ ಬರ್ತೀವಿ ಅಂತಿದ್ದಾರೆ. ಅಲ್ಲಿ ಸೆಕ್ಯೂಲರ್ ಮೈಡ್ ಸೆಟ್ ಇರುವ ಶಾಸಕರುಗಳು ಬರಲು ಸಿದ್ಧರಾಗಿದ್ದಾರೆʼʼ ಎಂದರು.

ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು

ಎರಡುವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಹೊಸ ಸುದ್ದಿಯ ಬಗ್ಗೆ ಕೇಳಿದಾಗ, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

ʻʻಮುಖ್ಯಮಂತ್ರಿ ಆಯ್ಕೆಯಿಂದ ಹಿಡಿದು ಎಲ್ಲವೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಹೈಕಮಾಂಡ್ ಹಂತದಲ್ಲಿ ಏನು ಚರ್ಚೆ ಆಗಿದೆ ಎನ್ನುವುದು ನಮಗೆ ಗೊತ್ತಿಲ್ಲ. ಗಣಿಗ ರವಿ ಅವರು ಡಿ.ಕೆ ಶಿವಕುಮಾರ್ ಅವರು ಎರಡುವರೆ ವರ್ಷಗಳ ಬಳಿಕ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ನಾನು ಸಿದ್ದರಾಮಯ್ಯನವರೇ ಐದು ವರ್ಷ ಇರ್ತಾರೆ ಅಂತ ಹೇಳ್ತೀನಿ. ಹೀಗೆ ಒಬೊಬ್ಬರದ್ದು ಒಂದೊಂದು ರೀತಿ ಅಭಿಪ್ರಾಯ ಇರುತ್ತದೆ. ಎಲ್ಲಾ ಅಂತಿಮ ನಿರ್ಣಯ ಹೈಕಮಾಂಡ್‌ನದ್ದುʼʼ ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಮಾಡುವ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅಭಿಪ್ರಾಯ ಸಿದ್ದರಾಮಯ್ಯ ಐದು ವರ್ಷ ಇರಬೇಕು ಎಂದು ಸ್ಪಷ್ಟಪಡಿಸಿದರು.

ಕೆ.ಎನ್‌. ರಾಜಣ್ಣ ಅವರು ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರು ಹೇಳುವ ಮಾತುಗಳಿಗೆ ಪ್ರಾಮುಖ್ಯತೆ ಇರುತ್ತದೆ. ಕೆಲವೊಮ್ಮೆ ಅವರು ಸಿದ್ದರಾಮಯ್ಯ ಅವರ ಮನದ ಮಾತನ್ನೇ ಹೇಳುತ್ತಾರೆ ಎಂಬ ಅಭಿಪ್ರಾಯವೂ ಇದೆ. ಕಳೆದ ಬಾರಿ ಡಿ.ಕೆ. ಶಿವಕುಮಾರ್‌ ಅಲ್ಲದೆ ಇನ್ನೂ ಮೂರು ಡಿಸಿಎಂಗಳನ್ನು ಮಾಡಬೇಕು ಎಂಬ ಅಭಿಪ್ರಾಯ ಮಂಡಿಸಿದಾಗಲೂ ಅದು ಸಿದ್ದರಾಮಯ್ಯ ಅವರ ಮನದಿಂಗಿತ ಎನ್ನಲಾಗಿತ್ತು. ಇದೀಗ 13 ಜೆಡಿಎಸ್‌ ಶಾಸಕರ ಆಗಮನದ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿರುವುದರ ಸೂಚನೆ ಇದು ಎನ್ನಲಾಗುತ್ತಿದೆ.

Exit mobile version