ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ಕಾಂಗ್ರೆಸ್ ಸರ್ಕಾರದ ಭಿನ್ನಮತದ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ವರ್ಗಾವಣೆ ಶಿಫಾರಸಿಗೆ ಸಚಿವರು ಬೆಲೆ ಕೊಡುತ್ತಿಲ್ಲ ಎಂಬುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಹಿರಿಯ ಶಾಸಕರು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈಗ ವರ್ಗಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾತನಾಡಿದ್ದು, ತಮಗೆ ಇರುವ ಅಧಿಕಾರ ವ್ಯಾಪ್ತಿಯ ಬಗ್ಗೆ ಹೇಳಿದ್ದಾರೆ. “ವರ್ಗಾವಣೆ ಸಂಬಂಧ ನಮಗೂ ಇತಿಮಿತಿ (Transfer Limitations) ಇದೆ. ಕೇವಲ 6% ವರ್ಗಾವಣೆಯನ್ನಷ್ಟೇ ನಾವು ಮಾಡಬಹುದು. ಬಾಕಿ ವರ್ಗಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೇ ಮಾಡಬೇಕು” ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಶುಕ್ರವಾರ (ಜುಲೈ 28) ಮಾತನಾಡಿದ ಸತೀಶ್ ಜಾರಕಿಹೊಳಿ, ವರ್ಗಾವಣೆ ವಿಚಾರದಲ್ಲಿ ಕೆಲವೊಂದು ಶಾಸಕರ ಮನವೊಲಿಸುವುದು ಸಾಧ್ಯವಾಗಿಲ್ಲ. ಅವರು ಕನ್ವಿನ್ಸ್ ಆಗೋದೂ ಇಲ್ಲ. ಈ ಬಗ್ಗೆ ಜಿಲ್ಲಾವಾರು ಮೀಟಿಂಗ್ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು. ಈ ಮೂಲಕ ವರ್ಗಾವಣೆ ವಿಚಾರದಲ್ಲಿ ಸಚಿವರ ಕೈಯಲ್ಲಿ ಎಲ್ಲವೂ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Weather report : ಉತ್ತರ ಕರ್ನಾಟಕದಲ್ಲಿ ಬಿರು ಮಳೆ; ಕರಾವಳಿ, ಮಲೆನಾಡಲ್ಲೂ ಅಬ್ಬರ!
ಗುರುವಾರ (ಜುಲೈ 27) ದೆಹಲಿಗೆ ಹೋಗಿದ್ದೆ. ರಾಜ್ಯದಲ್ಲಿ ಸಿಎಲ್‌ಪಿ ಸಭೆ (Congress Legislature Party meeting) ಶಾಂತವಾಗಿ ನಡೆದಿದೆ. ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿರುವ ವಿಚಾರವನ್ನು ನೋಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಸರ್ಕಾರದಲ್ಲಿ ಹೊಸಬರು ಇದ್ದಾರೆ, ಹಳಬರೂ ಇದ್ದಾರೆ. ಕೆಲವು ಸಮಸ್ಯೆ ಇದ್ದೇ ಇರುತ್ತದೆ. ಇಲ್ಲ ಎಂದು ಹೇಳೋಕೆ ಆಗಲ್ಲ. ಹಾಗಂತ ಶಿಫಾರಸು ಮಾಡಿದ ಮಾತ್ರಕ್ಕೆ ನೌಕರರನ್ನು ಏಕಾಏಕಿ ತೆಗೆದು ಹಾಕಲು ಆಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಶಾಸಕರಷ್ಟೇ ಅಲ್ಲ, ಮಂತ್ರಿಗಳೂ ವರ್ಗಾವಣೆ ಲೆಟರ್ ಕೊಟ್ಟಿದ್ದಾರೆ
ಇನ್ನು ಶಾಸಕರು ವರ್ಗಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ಬೇಸರ ವ್ಯಕ್ತಪಡಿಸಿ ಯಾವುದೋ ಸಂದರ್ಭದಲ್ಲಿ ಪತ್ರ ಬರೆದಿರಬಹುದು. ಆದರೆ, ನಾವು ಅವರೆಲ್ಲರ ಕೈಗೆ ಸಿಗುತ್ತಿದ್ದೇವೆ. ಬೇರೆ ಬೇರೆ ಕಾರಣಗಳಿಂದ ಅನುದಾನ ಹಂಚಿಕೆ ವಿಳಂಬ ಆಗಿದೆ. ಕೆಲವರು ಶಾಸಕರು, ಮಂತ್ರಿಗಳು ಕೂಡಾ ವರ್ಗಾವಣೆಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (MLC BK Hariprasad) ಅವರು ಪಾರ್ಟ್ ಆಫ್ ಕಾಂಗ್ರೆಸ್ ಫ್ಯಾಮಿಲಿ. ಅವರು ಕೂಡ ಕೆಲವು ಕಡೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಅವರ ಹೇಳಿಕೆ ಕರ್ನಾಟಕಕ್ಕೆ ಸಂಬಂಧಪಟ್ಟಿಲ್ಲ. ಹರಿಪ್ರಸಾದ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೆಲವು ಸಮುದಾಯಗಳಿಗೆ ಅವಕಾಶ ಸಿಗಲಿಲ್ಲ. ಆದರೆ, ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ. ಸಿಎಂ ಅಧಿಕಾರ ಹಂಚಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಅದೆಲ್ಲವೂ ಹೈಕಮಾಂಡ್‌ಗೆ ಬಿಟ್ಟಿದ್ದು, ನಮ್ಮ ಜತೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯನವರು ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ನಾನು ಈ ಅವಧಿಯಲ್ಲಿ ಸಿಎಂ ರೇಸ್‌ನಲ್ಲಿ ಇಲ್ಲ. ಮುಂದಿನ ಅವಧಿಯಲ್ಲಿ ಇರುತ್ತೇನೆ ಎಂಬುದನ್ನು ಹೇಳಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಹತ್ತು ವರ್ಷದಿಂದ ಪ್ರಸ್ತಾವನೆ ಪೆಂಡಿಂಗ್ ಇದೆ
ಕೇಂದ್ರ ರಾಜ್ಯ ಹೆದ್ದಾರಿಗೆ ಸಂಬಂಧಪಟ್ಟಂತೆ ಈಗ 10 ವರ್ಷದಿಂದ ಹಲವಾರು ಪ್ರಸ್ತಾವನೆಗಳು ಬಾಕಿ ಇವೆ. ಪ್ರಸ್ತಾವನೆಗಳು ಬೇರೆ ಬೇರೆ ರೀತಿ ಇವೆ. ಈ ಬಗ್ಗೆ ಒನ್ ಟು ಒನ್ ಸಭೆ ಮಾಡಿದರೂ ಯಶಸ್ಸು ಕಾಣಲಿಲ್ಲ. ತಿಂಗಳಲ್ಲಿ ಎರಡು ಬಾರಿ ಸಭೆ ಮಾಡಿದ್ದೆವು. ಒಟ್ಟು 20 ಪ್ರಸ್ತಾವನೆಗಳು ಇವೆ. ಶಿವಮೊಗ್ಗ, ಗದಗ, ರಾಯಚೂರು ರಿಂಗ್ ರೋಡ್‌ಗಳಿಗೆ ಪ್ರಪೋಸಲ್‌ಗಳು ಬೇರೆ ಬೇರೆ ಇವೆ. ಬೇರೆ ಮಾದರಿಯಲ್ಲಿ ಪ್ರಸ್ತಾವನೆ ಕಳಿಸಿ ಎಂದು ಹೇಳಿದ್ದಾರೆ. ಇದನ್ನು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: Shadow CM : ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಶ್ಯಾಡೊ ಸಿಎಂ; ಸಿಕ್ಕಿತು ದಾಖಲೆ!
ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದಲೇ ಮಾಡುವ ಚಿಂತನೆ ಇದೆ. ಇದಕ್ಕೆ ನಮ್ಮಿಂದ ಎನ್‌ಒಸಿ ಆಗಬೇಕು ಅಷ್ಟೇ. ಪೀಣ್ಯ, ವೈಟ್‌ಫೀಲ್ಡ್, ಕೆ.ಆರ್ ಪುರದಿಂದ ಮೇಕ್ರಿ ಸರ್ಕಲ್‌ವರೆಗೆ ಟನಲ್ ನಿರ್ಮಾಣವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ