ಚಿತ್ರದುರ್ಗ: 30 ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಶೇ.50ರಷ್ಟು ಮೀಸಲಾತಿ ಇತ್ತು. ಸಾರ್ವಜನಿಕ ವಲಯದ ಉದ್ದಿಮೆಗಳ ಉದ್ಯೋಗಗಳು ಈ ವರ್ಗದವರಿಗೆ ಸಿಗುತ್ತಿತ್ತು. ಇದನ್ನು ತಪ್ಪಿಸಲು ಖಾಸಗಿಯವರಿಗೆ ಮಾರುತ್ತಿದ್ದಾರೆ. ಆ ಮೂಲಕ ಬಡವರು, ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂಬ ಷಡ್ಯಂತ್ರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದೆ. ಹೀಗಾಗಿ ಈ ಚುನಾವಣೆಯಲ್ಲಿ (Karnataka Politics) ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯದವರು ಛಿದ್ರವಾದರೆ ನಿಮ್ಮನ್ನು ಯಾರೂ ಕೇಳುವವರು ಇರುವುದಿಲ್ಲ. ನಿಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಿಮ್ಮನ್ನು ಬ್ರಿಟಿಷರಂತೆ ತುಂಡು ತುಂಡಾಗಿ ವಿಭಜಿಸಿ ಒಡೆದು ಆಳುತ್ತಾರೆ. ಯಾರಿಗೆ ಅಧಿಕಾರ ಸಿಗಲಿದೆ ಎಂಬುದಕ್ಕಿಂತ ನಿಮ್ಮ ಹಿತಾಸಕ್ತಿ, ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು, ಆ ಉದ್ಯೋಗಗಳು ಎಲ್ಲಿವೆ? ಅವರು ಹೇಳಿದಂತೆ ಇದುವರೆಗೂ 18 ಕೋಟಿ ಉದ್ಯೋಗ ನೀಡಬೇಕಿತ್ತು. ಈ ಬಗ್ಗೆ ಯಾರಾದರೂ ಕೇಳಿದ್ದೀರಾ? ಬೆಂಬಲ ಬೆಲೆ ಹೆಚ್ಚಿಸುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು, ಅದನ್ನಾದರೂ ಮಾಡಿದ್ದಾರಾ? ಎಂದು ಖರ್ಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ | Karnataka politics | ಇನ್ಸ್‌ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ ಬಿ. ಪುಟ್ಟಸ್ವಾಮಿ: ಕೊಳ್ಳೇಗಾಲದ ಬಿಜೆಪಿ ಟಿಕೆಟ್ ಆಕಾಂಕ್ಷಿ
ಸಂವಿಧಾನ ತೊಂದರೆಯಲ್ಲಿದ್ದಾಗ ಅದನ್ನು ಧಿಕ್ಕರಿಸಿ ಕೇಂದ್ರ ಸರ್ಕಾರ ಆಡಳಿತ ಮಾಡುತ್ತಿದೆ. ಲಕ್ಷಾಂತರ ಜನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜತೆ ನಡೆಯುತ್ತಿದ್ದಾರೆ, ಭಾರತ್ ಜೋಡೋ ಯಾತ್ರೆಗೆ ಸೇರುತ್ತಿದ್ದಾರೆ. ಈ ದೇಶದಲ್ಲಿ 30 ಲಕ್ಷ ಸರ್ಕಾರಿ ನೌಕರಿಗಳಿವೆ. ಪ್ರಧಾನಿ ನರೇಂದ್ರ ಮೋದಿ ಈ ಹುದ್ದೆಗಳನ್ನೇಕೆ ಭರ್ತಿ ಮಾಡುತ್ತಿಲ್ಲ? ಒಂದು ವೇಳೆ ಭರ್ತಿ ಮಾಡಿದರೆ 30 ಲಕ್ಷ ನೌಕರಿಯಲ್ಲಿ 15 ಲಕ್ಷ ಕೆಲಸ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಸಿಗುತ್ತವೆ. ಈ ನೌಕರಿಗಳು ಬಡವರ ಕೈಗೆ ಬಂದರೆ ಅವರ ಆಟ ನಡೆಯುವುದಿಲ್ಲ. ಈ ಕಾರಣಕ್ಕಾಗಿಯೇ ಗುತ್ತಿಗೆ, ದಿನಗೂಲಿಗಳ ನೇಮಕಾತಿಗಳನ್ನು ಮಾಡುತ್ತಾ ಇದ್ದಾರೆ ಎಂದು ಖರ್ಗೆ ಕಿಡಿಕಾರಿದರು.
ಮೈನಾರಿಟಿ ಸ್ಕಾಲರ್‌ಶಿಪ್ ಅನ್ನು ಸಹ ಮೋದಿ ಬಂದ್ ಮಾಡಿದ್ದಾರೆ. ಇಷ್ಟೆಲ್ಲ ಆದರೂ ಎಸ್‌ಸಿ, ಎಸ್‌ಟಿ ಜನಾಂಗದವರ ಹೋರಾಟ ಯಾಕಿಲ್ಲ? ಹೋರಾಟ ಮಾಡದಿದ್ದರೆ ದಲಿತರಿಗೆ ಉಳಿಗಾಲವಿಲ್ಲ. ಅಂಬೇಡ್ಕರ್ ಹೋರಾಟ ಮಾಡಿ ತಂದ ಸಂವಿಧಾನವನ್ನು ನಾವು ಉಳಿಸಿಕೊಂಡು ಹೋಗಬೇಕು. ಗುಜರಾತ್‌ನಲ್ಲಿ ಅಲ್ಲಿನ ಜನ ನರೇಂದ್ರ ಮೋದಿ ಅವರನ್ನು ಮೇಲಕ್ಕೆತ್ತಿದ್ದಾರೆ. ಕರ್ನಾಟಕದಲ್ಲಿ ನೀವು ನಮ್ಮನ್ನು ಎತ್ತಬೇಕು. ನಾವು ಮಣ್ಣಿನ ಮಕ್ಕಳಿದ್ದೇವೆ, ಈ ಬಾರಿ ನಮ್ಮನ್ನು ಆಯ್ಕೆ ಮಾಡಿ, ನಾವು ಸರ್ಕಾರ ರಚಿಸುವಂತೆ ಮಾಡಿ ಎಂದು ಸಾರ್ವಜನಿಕರಲ್ಲಿ ಖರ್ಗೆ ಮನವಿ ಮಾಡಿದರು.
ನಾವು ಛಿದ್ರ ಆಗಿರುವುದರಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದೆ. ಬಿಜೆಪಿ ನೇತೃತ್ವದಲ್ಲಿ ಪ್ರಗತಿಪರ ರಾಜ್ಯ ಕೆಟ್ಟು ಹೋಗಿದೆ. ಅಸೂಯೆ, ಒಳಪೆಟ್ಟು, ಅಭಿವೃದ್ಧಿ ಶೂನ್ಯವನ್ನಾಗಿ ಬಿಜೆಪಿಯವರು ಮಾಡಿದ್ದಾರೆ. ಇಷ್ಟು ಮಾಡಿದರೂ ದಿನವೂ ಟೀಕೆ ಮಾಡುತ್ತಾರೆ. ಬಿಜೆಪಿಯಲ್ಲಿ ‘ಲೂಟೋ ಬಾಟೋ’ ಪದ್ಧತಿ ಇದೆ. ದುಡ್ಡೇ ದೊಡ್ಡಪ್ಪ ಎನ್ನುವಂತೆ ಮಾಡುತ್ತಿದ್ದಾರೆ. ಇಂತಹ ಸರ್ಕಾರ ಉಳಿಯಬಾರದೆಂದರೆ ಎಲ್ಲರೂ ಒಗ್ಗಟ್ಟಿಂದ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎಂದು ಪಕ್ಷದ ನಾಯಕರಿಗೆ ಖರ್ಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ | Modi Killed Jayalalithaa | ಜಯಲಲಿತಾ ಅವರನ್ನು ಕೊಂದಿದ್ದು ಮೋದಿ, ವಿವಾದ ಹುಟ್ಟುಹಾಕಿದ ಡಿಎಂಕೆ ಶಾಸಕ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಗಿದೆ. ಅಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರ್ನಾಟಕಕ್ಕೆ ಬಂದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಲ್ಲದ ನಡ್ಡಾ ಇಲ್ಲಿ ಎಲ್ಲ ಕಡೆ ತಿರುಗುತ್ತಿದ್ದಾರೆ. ಮೋದಿ ಎಂದರೆ ದೇವರು ಎಂದು ತೋರಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ದೇವರಾದರೆ ಅದು ಡೆಮೋಕ್ರಸಿ ಅಲ್ಲ, ಅಟೋಕ್ರಸಿ (ಪ್ರಜಾಪ್ರಭುತ್ವ ಅಲ್ಲ, ನಿರಂಕುಶ ಪ್ರಭುತ್ವ) ಆಗುತ್ತದೆ. ಇದರಿಂದ ಸರ್ವಾಧಿಕಾರತ್ವ ಉಂಟಾಗುತ್ತದೆ. ಜಪ ಮಾಡಿದರೆ ಎಲ್ಲವೂ ಸಿಗುವುದಿಲ್ಲ, ಕಷ್ಟ ಪಡಬೇಕು, ದುಡಿಯಬೇಕಾಗುತ್ತದೆ. ಮೀಸಲಾತಿ ಹಾಗೂ ಸಂವಿಧಾನ ಉಳಿಯಬೇಕು ಎಂದು ಖರ್ಗೆ ಕರೆ ನೀಡಿದರು.
ಇದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಖರ್ಗೆ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಂತೆ ವೀರ ಮದಕರಿ ನಾಯಕ, ಒನಕೆ ಓಬವ್ವ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಪುತ್ಥಳಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಗಿದ್ದರು.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ. ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಎಚ್. ಮುನಿಯಪ್ಪ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತರ ನಾಯಕರು ಇದ್ದರು.
ಇದನ್ನೂ ಓದಿ | Karnataka Elections | ಅಂಬೇಡ್ಕರ್ ಅವರನ್ನು ಕಡೆಗಣಿಸಿದ್ದೇ ಕಾಂಗ್ರೆಸ್‌ಗೆ ಶಾಪವಾಗಿದೆ ಎಂದ ನಳಿನ್ ಕುಮಾರ್