ರಾಯಚೂರು: ಜಿಲ್ಲೆಯ ಬಿಜೆಪಿ ನಾಯಕರಾಗಿರುವ ಬಿ.ವಿ ನಾಯಕ್ ಅವರು ಮರಳಿ ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಕರ್ನಾಟಕ ರಾಜಕೀಯದಲ್ಲಿ (Karnataka politics) ಮೂಡಿದೆ.
ಕಾಂಗ್ರೆಸ್ ಮುಖಂಡ ಡಿ.ಕೆ ಸುರೇಶ್ (D.K suresh) ಹಾಗೂ ಬಿ.ವಿ ನಾಯಕ್ ಅವರ ಭೇಟಿ ಕುತೂಹಲ ಮೂಡಿಸಿದೆ. ಹಲವು ಅತೃಪ್ತ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದ ಗಾಳಿಸುದ್ದಿಗಳ ಹಿನ್ನೆಲೆಯಲ್ಲಿ ಈ ಭೇಟಿಯೂ ಮಹತ್ವ ಪಡೆದುಕೊಂಡಿದೆ. ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲು ಆಸಕ್ತರಾಗಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಕೂಡ ಹೇಳಿದ್ದಾರೆ.
ರಾಮನಗರದಲ್ಲಿ ಡಿ.ಕೆ ಸುರೇಶ್ ಅವರನ್ನು ಬಿ.ವಿ ನಾಯಕ್ ಭೇಟಿಯಾಗಿದ್ದಾರೆ. ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ಮಧ್ಯಸ್ಥಿಕೆಯಲ್ಲಿ ಈ ಭೇಟಿ ನಡೆದಿದೆ.
ಬಿ.ವಿ ನಾಯಕ್ ರಾಯಚೂರು- ಯಾದಗಿರಿ ಜಿಲ್ಲೆ ಮಾಜಿ ಸಂಸದರಾಗಿದ್ದಾರೆ. ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿದ್ದರು. ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಜಯ ಅನುಭವಿಸಿದ್ದರು.
ಮತ್ತೆ ಕಾಂಗ್ರೆಸ್ ಸೇರಲು ಅವರು ಬಯಸಿದ್ದಾರೆ ಎಂದು ನಾಯಕರ ಆಪ್ತ ಮೂಲಗಳು ತಿಳಿಸಿವೆ. ನಿನ್ನೆಯ ಈ ಭೇಟಿಯ ಹಿಂದೆ ಲೋಕಸಭಾ ಚುನಾವಣೆ ರಣತಂತ್ರ ಇದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ: Karnataka Politics : ಇಲ್ಲ ಇಲ್ಲ ನಾವು ಬಿಜೆಪಿ ಬಿಡೋದಿಲ್ಲ; ನೀವು ಬಂದ್ರೂ ಫಸ್ಟ್ ಬೆಂಚ್ ಸಿಗೋದಿಲ್ಲ!