Site icon Vistara News

Karnataka Politics: ಕುಮಾರಸ್ವಾಮಿಯವರನ್ನೇ ಬಿಜೆಪಿ ನಾಯಕನಾಗಿಸಿ ಎಂದ ಕಾರ್ಯಕರ್ತರು; ಕೊನೆಗೂ ಫೀಲ್ಡಿಗಿಳಿದ ಬಿಜೆಪಿ !

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಗಳನ್ನು ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ

#image_title

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತ ಎಚ್ಚರಿಕೆ ನೀಡುತ್ತಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರನ್ನೇ ಬಿಜೆಪಿ ನಾಯಕನನ್ನಾಗಿ ಮಾಡಿಬಿಡಿ ಎಂಬ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಬೆಚ್ಚಿದ ಬಿಜೆಪಿ ನಾಯಕರು ಈಗ ಫೀಲ್ಡಿಗೆ ಇಳಿದಿದ್ದಾರೆ.

ಮೇ 13ರ ನಂತರ ತಮ್ಮದು ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕರ ಬರಲಿದೆ ಎಂದು ಕನಸು ಕಾಣುತ್ತಿದ್ದ ಬಿಜೆಪಿ, ಫಲಿತಾಂಶದ ದಿನದಿಂದ ಸಂಪೂರ್ಣ ಮೌನಕ್ಕೆ ಜಾರಿದೆ. ಹೊಸಕೋಟೆ ಹಾಗೂ ಇತರೆಡೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳಾದ ಹೊರಬಂದದ್ದು ಬಿಟ್ಟರೆ ಪ್ರಮುಖ ನಾಯಕರು ಮಾತಾಡಿದ್ದೇ ಕಡಿಮೆ.

ಇದೆಲ್ಲದರ ನಡುವೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಗಳನ್ನು ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಗ್ಯಾರಂಟಿ ಸ್ಕೀಂಗಳನ್ನು ಜಾರಿ ಮಾಡುವವರೆಗೆ ಬಿಡುವುದಿಲ್ಲ. ಯಾರೂ ಕರೆಂಟ್‌ ಬಿಲ್‌ ಕಟ್ಟ ಬೇಡಿ ಎಂದು ಕರೆ ನೀಡುತ್ತೇನೆ ಎನ್ನುವುದಾಗಿ ಹೇಳಿಕೆ ನೀಡುತ್ತ ಜನರನ್ನು ಸೆಳೆಯುತ್ತಿದ್ದಾರೆ. ಆದರೆ ಬಿಜೆಪಿ ವಲಯದಿಂದ ಇಂತಹ ಪ್ರಯತ್ನ ಆಗದೇ ಇರುವುದಕ್ಕೆ ಆ ಪಕ್ಷದ ಕಾರ್ಯಕರ್ತರೇ ಸಾಮಾಜಿಕ ಜಾಲತಾಣ ಹಾಗೂ ಪಕ್ಷದೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿ ನಾಯಕರಂತೂ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಕುಮಾರಸ್ವಾಮಿ ಅವರನ್ನೇ ವಿಧಾನಸಭೆ ಪ್ರತಿಪಕ್ಷ ನಾಯಕನನ್ನಾಗಿ ಮಾಡಿಬಿಡಿ ಎಂದು ಅಸಮಾಧಾನವನ್ನು ಸಿಟ್ಟು ತೋರಿದ್ದರು. ಇದರಿಂದ ಎಚ್ಚೆತ್ತ ಬಿಜೆಪಿ ಈಗ ಸುದ್ದಿಗೋಷ್ಠಿ ಮೂಲಕ ಅಖಾಡಕ್ಕೆ ಪ್ರವೇಶಿಸಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಕಂದಾಯ ಸಚಿವ ಆರ್‌. ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಎನ್‌. ರವಿಕುಮಾರ್‌ ಹಾಗೂ ಗೋವಿಂದ ಕಾರಜೋಳ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಆರ್‌ಎಸ್‌ಎಸ್‌, ಬಜರಂಗದಳ ನಿಷೇಧ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್‌. ಅಶೋಕ್‌, ಬಿಜೆಪಿ ಒಂದು ವಿರೋಧ ಪಕ್ಷವಾಗಿ ಕೆಲಸ ಪ್ರಾರಂಭ ಮಾಡ್ತಿದೆ. ಜನರ ಭಾವನೆಯನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಶುರು ಮಾಡಿದೀವಿ. ರಾಜ್ಯದಲ್ಲಿ ಡಬಲ್ ಸ್ಟೇರಿಂಗ್ ಸರ್ಕಾರ ಬಂದಿದೆ.

ನಿಮ್ಮ ಅಪ್ಪ, ಅಜ್ಜಿ, ಮುತ್ತಾತ್ತನ ಕೈಯಲ್ಲೇ ಬ್ಯಾನ್‌ ಮಾಡಲು ಆಗಿಲ್ಲ. ಇವಾಗ ದೇಶದಲ್ಲಿ ನಿಮ್ಮ ಸರ್ಕಾರ ನೆಗೆದು ಬಿದ್ದಿದೆ. ಇವಾಗ ತಾಕತ್ ಧಮ್ ಇದ್ರೆ ಬಜರಂಗ ದಳ ಆಗಲಿ, ಒಂದು ಆರ್‌ಎಸ್‌ಎಸ್‌ ಶಾಖೆಯನ್ನು ಬ್ಯಾನ್ ಮಾಡಿ. ಬ್ಯಾನ್ ಮಾಡಿದ ಮೂರು ತಿಂಗಳಿಗೆ ನಿಮ್ಮ ಸರ್ಕಾರ ಇರಲ್ಲ. ನಿಮ್ಮ ಗೂಟದ ಕಾರುಗಳೆಲ್ಲ ಎಲ್ಲವೂ ವಾಪಸ್ಸು ಹೋಗಬೇಕು. ಈ ದೇಶದ ಪ್ರಧಾನಿಗಳು ಆರ್‌ಎಸ್‌ಎಸ್‌ನವರು. ಆರ್‌ಎಸ್‌ಎಸ್‌ ಎಂದರೆ ಹಿಂದುಗಳ ಧ್ವನಿ ಎಂದರು.

ಪ್ರತೀ ಸಭೆಯಲ್ಲೂ ಸಿಎಂಗಿಂತಲೂ ಡಿಸಿಎಂ ತಾವೇ ಮೊದಲು ಮಾತಾಡ್ತಾರೆ. ಈ ಸರ್ಕಾರದಲ್ಲಿ ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್ ಆಗಿದಾರೆ. ಡಿಸಿಎಂ ಅವರು ಪೊಲೀಸರಿಗೆ ಮತ್ತು ಹಿಂದೂ ಸಂಘಟನೆಗಳಿಗೆ ಧಮ್ಕಿ ಹಾಕಿದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಜಾರಿ ಇನ್ನೂ ಆಗಿಲ್ಲ. ಇದು ಈ ರಾಜ್ಯದ ಜನರಿಗೆ ಈ ಸರ್ಕಾರ ಮಾಡಿರುವ ಮೋಸ. ರಾಹುಲ್, ಪ್ರಿಯಾಂಕಾ ಇಬ್ಬರೂ ಬಂದು ಗ್ಯಾರಂಟಿ ಘೋಷಣೆ ಮಾಡಿದರು. ಮೊದಲ ಸಂಪುಟ ಸಭೆಯಲ್ಲಿ ಗ್ಯಾರಂಟಿ ಸ್ಕೀಂ ಜಾರಿಯ ಗ್ಯಾರಂಟಿ ಕೊಟ್ಟಿದ್ದರು. ಆದರೆ ಗ್ಯಾರಂಟಿ ಸ್ಕೀಂಗಳ ಜಾರಿಗೆ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ. ಖಾತೆಗಳ ಗ್ಯಾರಂಟಿಗೆ ವಿಮಾನ ಹತ್ತಿ ದೆಹಲಿಗೆ ಹೋಗಿದ್ದಾರೆ. ಜನ ಇಲ್ಲಿ ಗ್ಯಾರಂಟಿ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಎಲ್ಲರಿಗೂ ಗ್ಯಾರಂಟಿ ಕಾರ್ಡ್‌ಗಳನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಇಬ್ಬರೂ ಸಹಿ ಮಾಡಿ ಕೊಟ್ಟರು. ದಾರಿಯಲ್ಲಿ ಹೋಗುವವರಿಗೂ ಕಾರ್ಡ್‌ ಕೊಟ್ಟರು.

ಯಾರೂ ವಿದ್ಯುತ್ ಬಿಲ್ ಕಟ್ಬೇಡಿ ಎಂದಿದ್ದರು. ಈಗ ಡಬಲ್ ಸ್ಟ್ಯಾಂಡರ್ಡ್‌ ತೋರಿಸ್ತಿದಾರೆ ಕಾಂಗ್ರೆಸ್ ನಾಯಕರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ಮಾವನ ಮನೆಗೆ, ಸೊಸೆ ಕರೆ ತರಲು, ದೇವಸ್ಥಾನ ಹೋಗಲು ಫ್ರೀ ಟಿಕೆಟ್ ಅಂತ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಮಹಿಳೆಯರು ಯಾರೂ ಕೆಸ್ಸಾರ್ಟಿಸಿಯಲ್ಲಿ ಟಿಕೆಟ್ ತಗೋಬೇಡಿ ಎಂದಿದ್ದರು.

ಸಿದ್ದರಾಮಯ್ಯ 13 ಬಜೆಟ್ ಮಂಡಿಸಿದಾರೆ, ಅಂಥ ಸಿದ್ದರಾಮಯ್ಯಗೆ ಜ್ಞಾನ ಇಲ್ವಾ? ಎಷ್ಟು ವಿದ್ಯುತ್ ಬೇಕು, ಎಷ್ಟು ವೆಚ್ಚ ಅಂತ ಗೊತ್ತಿರ್ಲಿಲ್ವಾ? ಬಿಪಿಎಲ್‌ನವರ ಬಗ್ಗೆ ಸಿದ್ದರಾಮಯ್ಯಗೆ ಮಾಹಿತಿ ಇಲ್ಲ ಎಂದರೆ ಜನ ನಗುತ್ತಾರೆ. ಈ ಸರ್ಕಾರ ರೌಡಿಸಂ ಸರ್ಕಾರ. ಹೆಚ್ಚು ದಿನ ಈ ಸರ್ಕಾರ ಉಳಿಯಲ್ಲ. ಇನ್ನು ಮುಂದೆ ಯಾರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ತಿಳಿಸಿದರು.

ಇದನ್ನೂ ಓದಿ: HD Devegowda: ಜೆಡಿಎಸ್‌ ಆತ್ಮಾವಲೋಕನ ಸಭೆ; ಮತ್ತೆ ಪುಟಿದೇಳುವ ಪ್ರತಿಜ್ಞೆ; ಹೋರಾಟ ಗ್ಯಾರಂಟಿ ಅಂದ್ರು ಎಚ್‌ಡಿಕೆ

Exit mobile version