Site icon Vistara News

Karnataka Politics: ಸಿದ್ದರಾಮಯ್ಯ ಹೊಡಿಬಡಿ ಕೇಸ್‌ ಮಂಡ್ಯ ಠಾಣೆಗೆ ಶಿಫ್ಟ್‌; ಮಹಜರು ಆರಂಭ

M Lakshman with police in Mandya

ಮಂಡ್ಯ: ಟಿಪ್ಪು ಸುಲ್ತಾನ್‌ನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂಬ ವಿವಾದಿತ ಹೇಳಿಕೆ ನೀಡಿದ್ದಕ್ಕೆ ಮಲ್ಲೇಶ್ವರ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ವಿರುದ್ಧ (Karnataka Politics) ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌, ಮಂಡ್ಯ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು, ದೂರುದಾರ ಕೆಪಿಸಿಸಿ ಎಂ.ಲಕ್ಷ್ಮಣ್ ಸಮ್ಮುಖದಲ್ಲಿ ಶುಕ್ರವಾರ ಸ್ಥಳ ಮಹಜರು ನಡೆಸಿದ್ದಾರೆ.

ಫೆಬ್ರವರಿ 15ರಂದು ಜಿಲ್ಲೆಯ ಸಾತನೂರು ಗ್ರಾಮದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಟಿಪ್ಪುವನ್ನು ಉರಿಗೌಡ ಹಗೂ ನಂಜೇಗೌಡ ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್‌ ವಲಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವರ ವಿರುದ್ಧ ಮೇ 24ರಂದು ಮೈಸೂರಿನ ದೇವರಾಜ ಠಾಣೆಗೆ ಕಾಂಗ್ರೆಸ್‌ ನಿಯೋಗದಿಂದ ದೂರು ನೀಡಲಾಗಿತ್ತು. ಅದರಂತೆ ಐಪಿಸಿ ಸೆಕ್ಷನ್ 506, 153 ಅಡಿ ಎಫ್‌ಐಆರ್‌ ದಾಖಲಾಗಿತ್ತು.

ಈಗ ಪ್ರಕರಣ ಮೈಸೂರಿನ ದೇವರಾಜ ಠಾಣೆಯಿಂದ ಮಂಡ್ಯದ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಕೈಗೆತ್ತುಕೊಂಡಿದ್ದಾರೆ. ಜತೆಗೆ ಈ ಹಿಂದೆ ಮಂಡ್ಯ ತಾಲೂಕಿನ ಸಾತನೂರು ಬೆಟ್ಟದ ಬಳಿ ಬಿಜೆಪಿ ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ದೂರುದಾರ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಮ್ಮುಖದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ಕಾಂಗ್ರೆಸ್‌ ದ್ವೇಷ ರಾಜಕಾರಣ ಆರಂಭಿಸಿದೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ದ್ವೇಷ ಭಾಷಣ ಹಾಗೂ ಕೋಮು ಪ್ರಚೋದನೆ ಆರೋಪದಲ್ಲಿ ಮಲ್ಲೇಶ್ವರ ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Karnataka Politics: ದ್ವೇಷ ಭಾಷಣ; ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಜನ ‘ಅಧಿಕಾರ’ ನೀಡಿರುವುದು ಉತ್ತಮ ಆಡಳಿತ ನೀಡಲೆಂದೇ ಹೊರತು ಸೇಡಿನ ರಾಜಕಾರಣದಲ್ಲಿ ತೊಡಗುವುದಕ್ಕಲ್ಲ. ಬಿಜೆಪಿ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಹರೀಶ್‌ ಪೂಂಜಾ ಅವರ ವಿರುದ್ಧ ಪೋಲಿಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಎಐಆರ್‌ ದಾಖಲಿಸಿ ದ್ವೇಷದ ರಾಜಕಾರಣ ಕಾಂಗ್ರೆಸ್ ಆರಂಭಿಸಿದೆ. ಬಿಜೆಪಿ ಇದನ್ನು ಸಮರ್ಥವಾಗಿ ಎದುರಿಸಲಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ಟಿಪ್ಪುವನ್ನು ಉರಿಗೌಡ ಹಾಗೂ ನಂಜೇಗೌಡ ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಜೆಪಿ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದೇ ರೀತಿ ಸಿದ್ದರಾಮಯ್ಯ 24 ಹಿಂದು ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ ಎಂದು ಬೆಳ್ತಂಗಡಿಯಲ್ಲಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ದ್ವೇಷ ಭಾಷಣ ಹಾಗೂ ಕೋಮು ಪ್ರಚೋದನೆ ಆರೋಪದಲ್ಲಿ ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಮೈಸೂರಿನ ದೇವರಾಜ ಠಾಣೆ ಹಾಗೂ ಹರೀಶ್‌ ಪೂಂಜಾ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

Exit mobile version