ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಬದಲಾವಣೆಗಳು, ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ (Congress Party) ಆಂತರಿಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಕಾಂಗ್ರೆಸ್ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (Member of Legislative Council BK Hariprasad) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಈಗಾಗಲೇ ಬಿ.ಕೆ. ಹರಿಪ್ರಸಾದ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆ. ಈಗ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್‌ನ ಒಬ್ಬೊಬ್ಬರೇ ಸಚಿವರು ಧ್ವನಿ ಎತ್ತುತ್ತಿದ್ದಾರೆ. “ಹರಿಪ್ರಸಾದ್ ನಡೆ ಬಗ್ಗೆ ಪಕ್ಷವು ಗಮನಿಸುತ್ತಿದ್ದು, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ” ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರೆ, “ಹೈಕಮಾಂಡ್ (Congress High Command) ಅವರ ಹೇಳಿಕೆಯನ್ನು ಗಮನಿಸಿದೆ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸಿಎಂ ವಿರುದ್ಧ ಹರಿಪ್ರಸಾದ್ ಹೇಳಿಕೆ ಬಗ್ಗೆ ಪಕ್ಷ ನಿಗಾ : ಎಂ.ಬಿ. ಪಾಟೀಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಪರೋಕ್ಷ ವಾಗ್ದಾಳಿ
ನಡೆಸಿರುವ ಬಿ.ಕೆ. ಹರಿಪ್ರಸಾದ್ ಅವರ ನಡೆ ಬಗ್ಗೆ ಪಕ್ಷವು ಗಮನಿಸುತ್ತಿದ್ದು, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್, ‘ಹರಿಪ್ರಸಾದ್ ಪಕ್ಷದ ಹಿರಿಯ ನಾಯಕರು. ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕರಾಗಿ ಕೆಲಸ ಮಾಡಿರುವವರು. ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿದರು.
ಹರಿಪ್ರಸಾದ್ ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್ ಎಲ್ಲರೂ ಆತ್ಮೀಯರು. ಹೀಗಿರುವಾಗ ಅವರು ಎಲ್ಲ ವಿಚಾರಗಳನ್ನೂ ಪಕ್ಷದ ಒಳಗೇ ಮಾತನಾಡಬೇಕಿತ್ತು. ಆದರೆ, ಅವರು ಬೀದಿಗೆ ಹೋಗಿದ್ದಾರೆ. ಇದು ಸರಿಯಲ್ಲ. ಇದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಕಾಂಗ್ರೆಸ್ಸಿನಲ್ಲಿ ಯಾವ ಅಂತಃಕಲಹವೂ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: CM Siddaramaiah : ಬಿ.ಕೆ. ಹರಿಪ್ರಸಾದ್ ವಿರುದ್ಧ ಹೈಕಮಾಂಡ್‌ಗೆ ಸಿದ್ದು ಟೀಂ ದೂರು; ತಣ್ಣಗೆ ಮಾಡಿದರೇ ಖರ್ಗೆ?
ಹೈಕಮಾಂಡ್ ಕೂಡ ಹೇಳಿಕೆ ಗಮನಿಸಿದೆ- ಪರಮೇಶ್ವರ್
ಬಿ.ಕೆ. ಹರಿಪ್ರಸಾದ್ ಅವರದ್ದು ವೈಯಕ್ತಿಕ ಅಭಿಪ್ರಾಯ. ನಾನು ಅದರ ಬಗ್ಗೆ ಕಮೆಂಟ್ ಮಾಡೋದು ಏನಿದೆ? ನನ್ನ ಬಗ್ಗೆ ಹೇಳಿದ್ದಾರೆ, ಅವರಿಗೆ ಅಭಿನಂದನೆಗಳು. ಎಲ್ಲವೂ ವರಿಷ್ಠರ ಹಂತದಲ್ಲಿ ಚರ್ಚೆ ಆಗುತ್ತದೆ. ಹೈಕಮಾಂಡ್ ಕೂಡ ಹೇಳಿಕೆಯನ್ನು ಗಮನಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.