ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ತಮ್ಮ ಎರಡನೇ ಅವಧಿಯಲ್ಲಿ ಹಿಡಿತ ಇಲ್ಲ. ಅವರೀಗ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ. ಶಕ್ತಿ ಯೋಜನೆಯಡಿ (Shakti Scheme) ಉಚಿತ ಬಸ್ ಪ್ರಯಾಣ ಹೊರತುಪಡಿಸಿ. ಗೃಹಲಕ್ಷ್ಮಿ ಯೋಜನೆ (Grilahakshmi Scheme) ಜನರನ್ನು ತಲುಪಿಲ್ಲ. ಇದಕ್ಕೆಲ್ಲ ಅವರು ಕಸರತ್ತು ಮಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣ ಹೊರತುಪಡಿಸಿ, ಉಳಿದ ಉಚಿತ ಗ್ಯಾರಂಟಿ ಯೋಜನೆಗಳು (Congress Guarantee Scheme) ಅರ್ಧದಷ್ಟು ಜನರನ್ನು ತಲುಪಿಲ್ಲ. ಹೀಗಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತವಾಗಿವೆ. ವಿದ್ಯುತ್ ಉಚಿತ ಕೊಡುವುದಾಗಿ ಹೇಳಿ, ದರವನ್ನು ಹೆಚ್ಚಳ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದವರು ಒಳ ಜಗಳದಲ್ಲಿ ತಲ್ಲೀನರಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಹೋರಾಟ ಮಾಡಬೇಕಾಗಲಿದೆ. ನಾವು ಆರು ತಿಂಗಳು ಅವಕಾಶ ನೀಡಿದೆವು. ಆದರೆ, ಆರು ತಿಂಗಳಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಹಾಗಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಎಚ್ಚರಿಕೆ ನೀಡಿದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಬಿಎಸ್‌ವೈ ಮತ್ತೆ ಸಂಚಲನ ಮೂಡಿಸುವ ಸಂದೇಶ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಾದರೂ ಮುಂದೆ ಸಾಗುತ್ತಿಲ್ಲ. ಚಕ್ರದಲ್ಲಿ ಗಾಳಿಯೇ ಇಲ್ಲ. ಅಪಾರ ಭರವಸೆ ನೀಡಿ ಆಶ್ವಾಸನೆಯನ್ನು ನೀಡಿ ಅದನ್ನು ಈಡೇರಿಸಲು ಪರದಾಡುತ್ತಿದೆ. ಐಟಿ ದಾಳಿಯಲ್ಲಿ ಸಿಕ್ಕ ನೂರು ಕೋಟಿ ರೂಪಾಯಿ ಹಣವು ಈ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ. ಇದು ಲೂಟಿಕೋರ ಸರ್ಕಾರ ಅಂತ ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Fraud Case : ಎನ್ವಿ ಗ್ರೀನ್ ಕಂಪೆನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್ ಹೆಗ್ಡೆ?
ಬರ ಪೀಡಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವ ಸಚಿವರೂ ಹೋಗಿಲ್ಲ. ಶಾಸಕರ ಅನುದಾನ 2 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಕೇವಲ 50 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ಅನುದಾನ (SC, ST Grant) ಬಿಡುಗಡೆ ಮಾಡಿಲ್ಲ. ತಾಂಡಾ, ಬೋವಿ, ಅಂಬೇಡ್ಕರ್ ನಿಗಮಗಳಿಗೆ ಒಂದು ಪೈಸೆ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ರೈತರಿಂದಲೂ ಪಂಪ್‌ಸೆಟ್ ವಿದ್ಯುತ್ ಹಣ ವಸೂಲಿ!
ರೈತ ಬರಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದಾನೆ. ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಈ ಸರ್ಕಾರ ಏನು ಮಾಡಲು ಹೊರಟಿದೆ? ಮುಂದೆ ಈ ಶುಲ್ಕವನ್ನು ರೈತರೇ ಭರಿಸುವಂತೆ ಮಾಡಲು ಮುಂದಾಗಲಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದ ವರ್ಗಾವಣೆ ದಂಧೆ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರಿದಿದೆ. ಡಿಸಿಎಂ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಸಹ ಆರಂಭವಾಗಿದೆ ಎಂದು ಡಿಕೆಶಿ ಬಗ್ಗೆ ವಾಗ್ದಾಳಿ ನಡೆಸಿದರು.
ಕಾವೇರಿ ಜಲಾನಯನದ ಮುಂದೆ, ಸಮರ್ಪಕವಾಗಿ ವಾದ ಮಂಡಿಸಲು ಈ ಸರ್ಕಾರಕ್ಕೆ ಆಗಲಿಲ್ಲ. ಕಳೆದ ಎರಡು ತಿಂಗಳಿಂದ ನೀರು ಬಿಡಲಾಗಿದೆ. ಕುಡಿಯುವ ನೀರಿಗೂ ಕಷ್ಟ ಆಗುವಂತೆ ಈ ಸರ್ಕಾರದವರು ಮಾಡಿದ್ದಾರೆ. ಮಳೆ ಕೊರತೆ ಇದೆ ಎಂದು ಗೊತ್ತಿದ್ದರೂ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಹೊಸ ಪಂಪ್‌ಗೆ ರೈತರು ಎರಡು ಲಕ್ಷ ರೂಪಾಯಿ ಕೊಡಬೇಕಿದೆ. ಇದು ಸರಿಯಲ್ಲ. ಇದು ರೈತ ವಿರೋಧಿ ನೀತಿ ಎಂದು ಬಿ.ಎಸ್. ಯಡಿಯೂರಪ್ಪ ಗುಡುಗಿದರು.
ಬರಕ್ಕೆ ಹಣ ಕೊಡಲು ಸಂಪನ್ಮೂಲದ ಕೊರತೆ!
ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಜನರ ಸಂಕಷ್ಟವನ್ನು ಆಲಿಸಬೇಕು. ಜನರಿಗೆ ಕೂಡಲೇ ಬರ ಪರಿಹಾರವನ್ನು ನೀಡಬೇಕು. ಆದರೆ, ಅದನ್ನು ಮಾಡುವುದನ್ನು ಬಿಟ್ಟು ಕೇಂದ್ರದ ಕಡೆ ಕೈ ತೋರಿಸುತ್ತಿದ್ದಾರೆ. ಆಡಳಿತ ಪಕ್ಷವಾಗಿ ಜನರ ಸಮಸ್ಯೆಯನ್ನು ಆಲಿಸುವುದನ್ನು ಬಿಟ್ಟು, ವಿಪಕ್ಷಗಳತ್ತ ಬೊಟ್ಟು ಮಾಡುತ್ತಾ ಕುಳಿತುಕೊಂಡಿದೆ. ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾಗುತ್ತಿದೆ. ಅಸಂಬದ್ಧ, ಅಸತ್ಯ ವಿಷಯಗಳನ್ನು ಪ್ರಸ್ತಾಪಿಸಿ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಹಾರ ಕೊಡುವುದು ನಿಶ್ಚಿತ. ಹಿಂದೆ ಬರ ಬಂದಾಗ ರಾಜ್ಯದಿಂದಲೇ ಮೊದಕಲು ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಈಗ ಈ ಸರ್ಕಾರದಲ್ಲಿ ಸಂಪನ್ಮೂಲ ಕೊರತೆ ಇದೆ ಎಂದು ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರು ರಾಜ್ಯಕ್ಕೆ ಏಕೆ ಭೇಟಿ ನೀಡುತ್ತಿದ್ದಾರೆ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಕಲೆಕ್ಷನ್ ಮಾಡಲು ರಾಜ್ಯಕ್ಕೆ ಅವರು ಭೇಟಿ ನೀಡುತ್ತಿದ್ದಾರೆ. ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದು ಸಿಎಂ ಸಿದ್ದರಾಮಯ್ಯ ಅವರ ಚಾಳಿ ಆಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಭಿವೃದ್ಧಿಯ ಮಹಾಪೂರವ್ನೇ ಹರಿಸಿದೆ. ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆ ಇರಬಹುದು. ಎನ್‌ಡಿಆರ್‌ಎಫ್‌ನಿಂದ (NDRF) 12,784 ಕೋಟಿ ರೂ., ಎಸ್‌ಡಿಆರ್‌ಎಫ್ (SDRF) ನಿಂದಲೂ ಹಣ ಬಿಡುಗಡೆ ಆಗಿದೆ. 5.23 ಲಕ್ಷ ಕೋಟಿ ರೂಪಾಯಿ ಕೇಂದ್ರದ ಯೋಜನೆ ಹೊರತುಪಡಿಸಿ ಕೊಟ್ಟಿದ್ದಾರೆ. 37 ಲಕ್ಷ ಕೋಟಿ ರೂಪಾಯಿ ರಸ್ತೆ ಕಾಮಗಾರಿಗೆ ಹಾಗೂ ಹೆದ್ದಾರಿ ಕಾಮಗಾರಿಗೆ 47,200 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನೀಡಲಾಗಿದ್ದು, ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಆಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರ ಸರ್ಕಾರ 6 ಸಾವಿರ ರೂಪಾಯಿ ನೀಡುತ್ತಿದ್ದು, ರಾಜ್ಯ ಸರ್ಕಾರದಿಂದ ನಾನಿದ್ದಾಗ 4 ಸಾವಿರ ರೂಪಾಯಿ ಕೊಡಲಾಗುತ್ತಿತ್ತು. ಈಗ ಸಿದ್ದರಾಮಯ್ಯ ಅದನ್ನೂ ನಿಲ್ಲಿಸಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ರಾಜ್ಯದ ರೈಲು ಯೋಜನೆಗೆ 800 ಕೋಟಿ ರೂಪಾಯಿಯನ್ನು ಕೇಂದ್ರ ನೀಡಿದ್ದರೆ, ಈಗ 3,700 ಕೋಟಿ ಕೊಡಲಾಗುತ್ತಿದೆ. ಬೆಂಗಳೂರು ಉಪ ರೈಲು ಯೋಜನೆಗೆ 400 ಕೋಟಿ ರೂಪಾಯಿ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಎರಡು, ಮೂರನೇ ಯೋಜನೆಗೆ ಹಣ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಮಾಡದೆ ಕೆಲಸ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರಿಗೆ ಬೆಳಗ್ಗೆ ಎದ್ದರೆ ಅವರನ್ನು ಟೀಕೆ ಮಾಡುತ್ತಾರೆ ಎಂದು ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ಆಪರೇಷನ್ ಕಮಲ ಮಾಡಿದ್ರೆ ತನಿಖೆ ಮಾಡಿಸಿ
ಆಪರೇಷನ್ ಕಮಲ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್. ಯಡಿಯೂರಪ್ಪ, ಈ ರೀತಿಯ ಜವಾಬ್ದಾರಿ ಆರೋಪ ಮಾಡೋದು ಸರಿಯಲ್ಲ. ಹಾಗೆ ಏನಾದರೂ ಘಟನೆಗಳು ನಡೆದರೆ ತನಿಖೆ ಮಾಡಿಸಲಿ. ಈ ರೀತಿ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ವಿಪಕ್ಷದವರಾಗಿ ನಮಗೂ ಜವಾಬ್ದಾರಿ ಮತ್ತು ಕರ್ತವ್ಯ ಇದೆ. ಹಾಗಾಗಿ ಜನರ ಸಮಸ್ಯೆ ಆಲಿಸಲು ರಾಜ್ಯ ಪ್ರವಾಸ ಮಾಡುತ್ತೇನೆ. ನಾಳೆಯಿಂದ ಬೆಂಗಳೂರಿನಲ್ಲಿ ಬರ ಪ್ರವಾಸ ಮಾಡಬೇಕಿತ್ತು. ಆದರೆ, ಶಿವಮೊಗ್ಗದಲ್ಲಿ ಕೆಲಸ ಇದೆ. ಹೀಗಾಗಿ ಅಲ್ಲಿಂದ ಬಂದ ಬಳಿಕ ಬರ ಅಧ್ಯಯನ ಪ್ರವಾಸ ಮಾಡಲಾಗುವುದು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅಧಿವೇಶನಕ್ಕೂ ಮೊದಲು ವಿಪಕ್ಷ ನಾಯಕರ ನೇಮಕ
ಈಗಾಗಲೇ ವಿಪಕ್ಷ ನಾಯಕರ ಆಯ್ಕೆ ತಡ ಆಗಿದೆ. ರಾಜ್ಯಾಧ್ಯಕ್ಷ ಆಯ್ಕೆ ನಿಧಾನ ಆಗಿದೆ. ಆದಷ್ಟು ಬೇಗ ಮಾಡಲು ಮನವಿ ಮಾಡಿದ್ದೇವೆ. ನೂರಕ್ಕೆ ನೂರು ಅಧಿವೇಶನಕ್ಕೂ ಮೊದಲು ನಾಯಕರ ನೇಮಕ ಆಗಲಿದೆ ಎಂದು ಬಿ.ಎಸ್. ಯಡಿಯೂರಪ್ಪ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Chaitra Fraud Case : ಚೈತ್ರಾ ವಂಚನೆ ಪ್ರಕರಣ; ಸಿಸಿಬಿ ತನಿಖೆ ಪೂರ್ಣ, ಮುಂದಿನ ವಾರ ಚಾರ್ಜ್‌ಶೀಟ್?
ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅಶ್ವತ್ಥ್ ನಾರಾಯಣ್, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಎಸ್.ಆರ್ ವಿಶ್ವನಾಥ್, ಎಸ್. ರಘು, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಭಾಗಿಯಾಗಿದ್ದರು.