Site icon Vistara News

Karnataka Politics: ಬಿಜೆಪಿ ಕಾಲದ ಹಗರಣಗಳ SIT ತನಿಖೆ?; ಅಧಿವೇಶನದಲ್ಲಿ ಪ್ರತಿಪಕ್ಷ ಕಟ್ಟಿ ಹಾಕಲು ಪ್ಲ್ಯಾನ್‌?

PayCM scam

#image_title

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ (Budget session) ಜುಲೈ 3ರಿಂದ ಆರಂಭಗೊಳ್ಳಲಿದ್ದು, ಅದಕ್ಕಿಂತ ಮೊದಲು ಬಿಜೆಪಿ ಕಾಲದ ಹಗರಣಗಳ (Scams under BJP Government) ತನಿಖೆಗೆ ಆದೇಶ ನೀಡಬೇಕು ಎಂಬ ಒತ್ತಡ ಹೆಚ್ಚಿದೆ.

ಈ ಬಜೆಟ್‌ ಅಧಿವೇಶನದಲ್ಲಿ (Karnataka Politics) ಬಿಜೆಪಿಯು ರಾಜ್ಯ ಸರ್ಕಾರದ (Congress Government) ಗ್ಯಾರಂಟಿಗಳು (Congress Guarantee) ಇನ್ನೂ ಜಾರಿಯಾಗದಿರುವ ವಿಚಾರವನ್ನೇ ಪ್ರಮುಖವಾಗಿ ಉಲ್ಲೇಖಿಸಿ ಕಾಂಗ್ರೆಸ್‌ನ್ನು ಕಟ್ಟಿಹಾಕುವ ಪ್ರಯತ್ನ ನಡೆಸಲಿದೆ. ಇದನ್ನು ತಡೆಯುವುದಕ್ಕಾಗಿ ಕಾಂಗ್ರೆಸ್‌ ಹಿಂದಿನ ಸರ್ಕಾರದ ಹಗರಣಗಳ ಬಾಣ ಬಿಡಲು ಮುಂದಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕೆ ಅದು ಪ್ರಕಟಿಸಿದ ಪಂಚ ಗ್ಯಾರಂಟಿಗಳು ಎಷ್ಟು ಕಾರಣವೋ? ಸರ್ಕಾರದ ವಿರುದ್ಧ ಅದು ಅತ್ಯಂತ ವ್ಯವಸ್ಥಿತವಾಗಿ ನಡೆಸಿದ ಭ್ರಷ್ಟಾಚಾರದ ಆರೋಪದ ಪ್ರಚಾರವೂ ಕಾರಣ. ಹೀಗಿರುವಾಗ ಪಕ್ಷ ಈ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸರ್ಕಾರದ ಅಂತರಂಗದಲ್ಲಿ ಜೋರಾಗಿದೆ.

ವಿಶೇಷ ತನಿಖಾ ತಂಡ ರಚನೆ ಮಾಡಿ ಹಗರಣಗಳ ತನಿಖೆ ಮಾಡಿಸಬೇಕು ಎಂಬ ಅಭಿಪ್ರಾಯವನ್ನು ಹೆಚ್ಚಿನ ಸಚಿವರು ಮತ್ತು ಶಾಸಕರು ವ್ಯಕ್ತಪಡಿಡುತ್ತಿದ್ದಾರೆ. ಆದರೆ, ಗ್ಯಾರಂಟಿಗಳ ಜಾರಿಯಲ್ಲಿ ಬ್ಯುಸಿಯಾಗಿದ್ದೇವೆ, ತನಿಖೆ ಮಾಡಿಸೋಣ, ವಿಧಾನಸಭಾ ಅಧಿವೇಶನ ಕಳೆಯಲಿ ಎನ್ನುವುದು ಕೆಲವರ ಅಭಿಪ್ರಾಯ.

ತಡಮಾಡುವುದು ಬೇಡ ಎಸ್.ಐ.ಟಿ (SIT Investigation) ತಂಡ ರಚನೆ ಮಾಡಿ ತನಿಖೆ ಶುರು ಮಾಡಿಸೋಣ, ಎಸ್.ಐ.ಟಿ ತಂಡ ರಚನೆ ಆದರೆ ಅಧಿವೇಶನದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಸಚಿವರು ಒತ್ತಾಯಿಸಿದ್ದಾರೆ.

ಎಸ್‌ಐಟಿ ತನಿಖೆ ನಡೆಯುತ್ತಾ?

ಈ ನಡುವೆ, ಬಿಬಿಎಂಪಿ ಮತ್ತು ಬಿಡಿಎ ಅಕ್ರಮಗಳಿಗೆ ಸಂಬಂಧಿಸಿ ಎಸ್ಐಟಿ ಮೂಲಕ ತನಿಖೆ ನಡೆಸುವ ಸುಳಿವನ್ನು ಡಿಕೆ ಶಿವಕುಮಾರ್ ನೀಡಿದ್ದಾರೆ. ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಆಗ ಉಳಿದ ಹಗರಣಗಳ ವಿಚಾರದಲ್ಲೂ ಧ್ವನಿ ಎತ್ತಲು ಸಚಿವರು ಸಿದ್ಧರಾಗಿದ್ದಾರೆ.

ತನಿಖಾ ಲಿಸ್ಟ್ ನಲ್ಲಿರುವ ಹಗರಣಗಳು

ಬಿಟ್ ಕಾಯಿನ್ ಹಗರಣ, ಗಂಗಾ ಕಲ್ಯಾಣ , ಪಿಎಸ್ಐ ಹಗರಣ, ಸಹಾಯಕ ಪ್ರಧ್ಯಾಪಕರ ನೇಮಕಾತಿ ಹಗರಣದ ಬಗ್ಗೆ ಪ್ರಮುಖಗಾಗಿ ಒತ್ತಾಯ ಕೇಳಿಬಂದಿದೆ. ಇದರ ಜತೆಗೆ ಆರೋಗ್ಯ ಇಲಾಖೆ ಸೇರಿದಂತೆ ಕೆಲ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆಗೆ ಒತ್ತಾಯಿಸಲಾಗುತ್ತಿದೆ.

ತನಿಖೆಗೆ ವಿಶೇಷ ತಂಡ ರಚನೆ ಯಾಕೆ?

ಸಾಮಾನ್ಯವಾಗಿ ಯಾವುದೇ ಹಗರಣಗಳು ನಡೆದಾಗ ಇಲಾಖಾವಾರು ತನಿಖೆ ನಡೆಸುವುದು ವಾಡಿದೆ. ಆದರೆ, ಇಲ್ಲಿ ನಡೆದಿದೆ ಎನ್ನಲಾದ ಕೆಲವು ಹಗರಣಗಳಲ್ಲಿ ತಾಂತ್ರಿಕ ವಿಚಾರಗಳೇ ಪ್ರಮುಖವಾಗಿರುವುದರಿಂದ ಇಲಾಖಾವಾರು ತನಿಖೆ ನಡೆಸುವುದು ಕಷ್ಟ ಎಂಬ ಮಾತಿದೆ. ಹೀಗಾಗಿ ಎಸ್‌ಐಟಿ ತನಿಖೆ ನಡೆಸಿದರೆ ಉತ್ತಮ ಎಂಬ ಮಾತುಗಳಿವೆ.

ಬಿಟ್ ಕಾಯಿನ್ ಹಗರಣದ ತನಿಖೆಗೆ ತಾಂತ್ರಿಕ ಸಮಸ್ಯೆಗಳಿವೆ, ಆದ್ದರಿಂದ ತಂತ್ರಜ್ಞಾನದ ಮಾಹಿತಿ ಇರುವ ಅಧಿಕಾರಿಗಳು ಬೇಕು. ಗಂಗಕಲ್ಯಾಣ ಹಗರಣದಲ್ಲೂ ನಕಲಿ ಬಿಲ್, ಜೊತೆಗೆ ಐಟಿ ರಿಟರ್ನ್ಸ್‌ ಮಾಡಿದ್ದಾರೆ ಎಂಬ ಆರೋಪವಿದೆ. ಹಾಗಾಗಿ ತಾಂತ್ರಿಕ ಪರಿಣಿತರಿಗೆ ತಂಡದ ಆಗತ್ಯವಿದೆ ಎಂಬ ಲೆಕ್ಕಾಚಾರ ಕೇಳಿಬಂದಿದೆ.

ಇದನ್ನೂ ಓದಿ: BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್‌ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ

ಇನ್ನೊಂದು ಕಡೆಯಲ್ಲಿ ಬಿಜೆಪಿ ಕೂಡಾ ನೀವು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ಬಂದಿದ್ದೀರಿ. ನಿಮ್ಮದೇ ಸರ್ಕಾರ ಬಂದಿದೆ. ಹಾಗಿದ್ದರೂ ಇನ್ನೂ ತನಿಖೆಗೆ ಆದೇಶ ಯಾಕೆ ನೀಡಿಲ್ಲ ಎಂದೇ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನಿಸುವ ಸಾಧ್ಯತೆಯೂ ದಟ್ಟವಾಗಿದೆ. ಹೀಗಾಗಿ ತನಿಖೆಯ ಘೋಷಣೆ ಮಾಡುವುದು ಕಾಂಗ್ರೆಸ್‌ ಸರ್ಕಾರಕ್ಕೆ ಅನಿವಾರ್ಯವಾಗಿದೆ.

Exit mobile version