Site icon Vistara News

Karnataka Politics : ಕಾಂಗ್ರೆಸ್‌ ಹೈಕಮಾಂಡ್‌ ಫುಲ್‌ ಆಕ್ಟಿವ್‌; 21ರಂದು ರಾಜ್ಯದ ಸಚಿವರ ಮೀಟಿಂಗ್

Congress high command leaders

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಅತ್ಯಂತ ಸಕ್ರಿಯವಾಗಿದ್ದ ಕಾಂಗ್ರೆಸ್‌ ಹೈಕಮಾಂಡ್‌ (Congress High command) ಇದೀಗ ಸರ್ಕಾರ ರಚನೆಯ ಬಳಿಕವೂ ಅದೇ ರೀತಿಯ ಉತ್ಸಾಹವನ್ನು ಮುಂದುವರಿಸಿದೆ. ಸ್ವತಃ ರಾಹುಲ್‌ ಗಾಂಧಿ (Rahul Gandhi) ಅವರೇ ಈ ನಿಟ್ಟಿನಲ್ಲಿ ಆಸಕ್ತರಾಗಿದ್ದಾರೆ. ಮತ್ತು ಹಿಂದೆಂದೂ ಇಡದ ನಡೆಗಳನ್ನು (Karnataka Politics) ಇಡುತ್ತಿದ್ದಾರೆ.

ಇದರ ಮೊದಲ ಭಾಗವಾಗಿ ಜೂನ್‌ 21ರಂದು ಕಾಂಗ್ರೆಸ್‌ ವರಿಷ್ಠರು ರಾಜ್ಯ ಸಚಿವ ಸಂಪುಟದ ಸದಸ್ಯರ (Cabinet Ministers meet) ಸಭೆಯನ್ನು ಕರೆದಿದ್ದಾರೆ. ದಿಲ್ಲಿಯಲ್ಲಿ ಈ ಸಭೆ ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಕೂಡಾ ಭಾಗವಹಿಸಲಿದ್ದಾರೆ. ಸರ್ಕಾರ ರಚನೆಯಾದ ಬಳಿಕ ರಾಹುಲ್‌ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿರುವುದು ಭಾರಿ ಕುತೂಹಲ ಮೂಡಿಸಿದೆ. ಇಷ್ಟು ವರ್ಷಗಳ ಅವಧಿಯಲ್ಲಿ ಹಿಂದೆಂದೂ ಕಾಂಗ್ರೆಸ್‌ ಹೈಕಮಾಂಡ್‌ ಸಚಿವರ ಸಭೆಯನ್ನು ನಡೆಸಿದ ನಿದರ್ಶನಗಳಿಲ್ಲ. ಕೇವಲ ಮುಖ್ಯಮಂತ್ರಿಯ ಜತೆ ಮಾತುಕತೆ ನಡೆಸಿ ಸೂಚನೆಗಳನ್ನು ನೀಡುವುದಕ್ಕೆ ಅದು ಸೀಮಿತವಾಗಿತ್ತು. ಈ ಬಾರಿ ಮೊದಲ ಸಲ ಸಚಿವರನ್ನೂ ಕರೆಸಿಕೊಂಡು ಚರ್ಚೆ ನಡೆಸುತ್ತಿರುವುದು ವಿಶೇಷವಾಗಿದೆ.

ರಾಹುಲ್‌ ಗಾಂಧಿ ಸಭೆ ಕರೆದಿದ್ದು ಯಾಕೆ?

ರಾಹುಲ್‌ ಗಾಂಧಿ ಅವರು ಕರೆದಿರುವ ಈ ಸಭೆಯ ಬಗ್ಗೆ ಹಲವು ಕೋನಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಮುಂದಿನ ಚುನಾವಣೆ, ಸಚಿವರ ಮೌಲ್ಯಮಾಪನ ಸೇರಿ ಹಲವು ಸಂಗತಿಗಳಿವೆ ಎನ್ನಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್‌ ಎಲ್ಲ ಹಂತಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿತ್ತು. ಗ್ಯಾರಂಟಿಗಳ ಘೋಷಣೆ, ಪ್ರಚಾರ ವೈಖರಿ, ಸೋಷಿಯಲ್‌ ಮೀಡಿಯಾ ನಿರ್ವಹಣೆಯೂ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಚರ್ಚೆಯನ್ನು ನಡೆಸಿ ಅಂತಿಮ ರೂಪ ನೀಡಲಾಗುತ್ತಿತ್ತು. ಈ ತಂತ್ರ ಕರ್ನಾಟಕದಲ್ಲಿ ಫಲಿಸಿದ್ದು ಕೇಂದ್ರ ನಾಯಕತ್ವಕ್ಕೆ ಹೊಸ ಆಸೆ ಚಿಗುರುವಂತೆ ಮಾಡಿದೆ ಎನ್ನಲಾಗಿದೆ.

ಅದರಲ್ಲೂ ಮುಖ್ಯವಾಗಿ ಇದೇ ತಂತ್ರಗಳನ್ನು ಬಳಸಿಕೊಂಡು ಬೇರೆ ರಾಜ್ಯಗಳನ್ನು ಗೆಲ್ಲಬಹುದು, ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸ್ಥಾನಗಳನ್ನು ಪಡೆಯಬಹುದು ಎನ್ನುವುದು ಲೆಕ್ಕಾಚಾರ ಎನ್ನಲಾಗಿದೆ. ಅದಕ್ಕಾಗಿ ಪಕ್ಷವನ್ನು 2024ರ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎನ್ನಲಾಗಿದೆ.

ಸಚಿವರಿಗೆ ಸರ್ಕಾರದ ಜವಾಬ್ದಾರಿಯ ಜತೆಗೆ ಚುನಾವಣೆಯ ಟಾಸ್ಕನ್ನೂ ನೀಡಲು ಹೈಕಮಾಂಡ್‌ ಚಿಂತನೆ ನಡೆಸಿದೆ ಎನ್ನಲಾಗಿದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್‌ ಈ ಬಾರಿ 20 ಸ್ಥಾನಗಳಲ್ಲಿ ಗೆಲ್ಲಬೇಕು ಎನ್ನುವ ಲೆಕ್ಕಾಚಾರ ಹಾಕಿದೆ. ಹೀಗಾಗಿ ಸಚಿವರಿಗೂ ಲೋಕಸಭಾ ಚುನಾವಣೆ ಗೆಲ್ಲುವ ಟಾರ್ಗೆಟ್‌ ನೀಡುವ ಸಾಧ್ಯತೆ ಕಂಡುಬಂದಿದೆ.

ಇದರ ಜತೆಗೆ ಹಾಲಿ ಸಚಿವರ ಮೌಲ್ಯಮಾಪನವನ್ನು ಕೂಡಾ ಇದೇ ಸಂದರ್ಭದಲ್ಲಿ ನಡೆಯುವ ಸಾಧ್ಯತೆ ಇದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಜೂನ್‌ 20ಕ್ಕೆ ಒಂದು ತಿಂಗಳಾಗಿದೆ. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಮೌಲ್ಯ ಮಾಪನ ನಡೆಯುವ ಸಾಧ್ಯತೆಗಳಿವೆ. ಅದರ ಜತೆಗೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡುವ ಸಾಧ್ಯತೆಯೂ ಇದೆ.

ಒಂದು ವರ್ಷದ ಬಳಿಕ ಖಾತೆ ನಿರ್ವಹಣೆಯಲ್ಲಿ ವಿಫಲವಾದರೆ ಖಾತೆ ಬದಲಾವಣೆ, ಲೋಕಸಭಾ ಟಾಸ್ಕ್ ನಿರ್ವಹಿಸುವಲ್ಲಿ ವಿಫಲವಾದ್ರೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ಇದೇ ಸಂದರ್ಭದಲ್ಲಿ ನೀಡುವ ಸೂಚನೆಗಳಿವೆ.

ಗ್ಯಾರಂಟಿಗಳೇ ಶ್ರೀರಕ್ಷೆ ಎಂದು ನಂಬಿದ ಹೈಕಮಾಂಡ್‌

ರಾಜ್ಯದಲ್ಲಿ ಕಾಂಗ್ರೆಸ್‌ ನೀಡಿರುವ ಚುನಾವಣಾ ಪೂರ್ವ ಗ್ಯಾರಂಟಿಗಳೇ ಪಕ್ಷವನ್ನು ಗೆಲುವು ನೀಡಿದ್ದು ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಹೈಕಮಾಂಡ್‌ ಅದನ್ನು ಏನಾದರೂ ಮಾಡಿ ಜಾರಿ ಮಾಡಲೇಬೇಕು. ಇಲ್ಲವಾದರೆ 2024ರ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಎಚ್ಚರಿಕೆಯನ್ನೂ ಅದು ಹೊಂದಿದೆ. ಗ್ಯಾರಂಟಿ ಮೇಲೆಯೇ ಲೋಕಸಭಾ ಚುನಾವಣೆ ನಡೆಯಲಿರುವುದರ ಅರಿವು ಹೈಕಮಾಂಡ್‌ಗೆ ಇದೆ.

ಇದನ್ನೂ ಓದಿ : Karnataka Politics : ಅಕ್ಕಿ ಕೊಡದ ಕೇಂದ್ರದ ವಿರುದ್ಧ ಜೂ. 20ರಂದು ಕಾಂಗ್ರೆಸ್‌ ಉಗ್ರ ಹೋರಾಟ

Exit mobile version