ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಇನ್ನು ಎಂಟು ತಿಂಗಳು ಮಾತ್ರವೇ ಬಾಕಿ ಇದೆ. ಈ ನಡುವೆ ಕರ್ನಾಟಕ ರಾಜಕೀಯ (Karnataka Politics) ವಲಯದಲ್ಲಿ ಅನೇಕ ವಿದ್ಯಮಾನಗಳು ನಡೆಯುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) 135 ಸ್ಥಾನಗಳನ್ನು ಪಡೆಯುವ ಮೂಲಕ ಆತ್ಮವಿಶ್ವಾಸದಲ್ಲಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ತವಕದಲ್ಲಿದೆ. ಇತ್ತ ಬಿಜೆಪಿ ಸಹ ಕಳೆದ ಬಾರಿ ಗೆದ್ದಿರುವ 25 + 1 ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಣತಂತ್ರವನ್ನು ಹೆಣೆಯುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಸರಿಯಾಗಿ ಠಕ್ಕರ್ ಕೊಡುವ ನಿಟ್ಟಿನಲ್ಲಿ ರಾಜಕೀಯ ದಾಳವನ್ನು ಉರುಳಿಸಲು ಮುಂದಾಗಿದೆ. ಇದರ ಭಾಗವಾಗಿ ಬಿಜೆಪಿ- ಜೆಡಿಎಸ್ ಮೈತ್ರಿ (BJP JDS alliance) ಹೋರಾಟಕ್ಕೆ ಸಜ್ಜಾಗಿದೆ. ಈಗ ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ (Karnataka Congress) (ಕೆಪಿಸಿಸಿ) ಟ್ವೀಟ್ ಮಾಡಿ ಟೀಕೆ ಮಾಡಿದೆ. ಅಲ್ಲದೆ, ಜೆಡಿಎಸ್‌ಗೆ (JDS Karnataka) ‘ಕಮಲದಳ’ ಎಂದು ಮರು ನಾಮಕರಣ ಮಾಡಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಾಂಗ್ರೆಸ್ ಟ್ವೀಟ್ (Congress Tweet) ಮಾಡಿ ವ್ಯಂಗ್ಯ ಮಾಡಿದೆ. ಜನತಾದಳ ಎಂಬ ಹೆಸರನ್ನು ‘ಕಮಲದಳ’ ಎಂದು ಬದಲಿಸಿಕೊಂಡರೆ ಒಳಿತು ಎಂದು ಮೂದಲಿಸಿದೆ. ಚುನಾವಣೆಯಲ್ಲಿ ಸೋತರೆ ಪಕ್ಷವನ್ನು ವಿಸರ್ಜಿಸುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಈ ವಿಸರ್ಜನೆ ಹೇಳಿಕೆಯನ್ನು ಸಹ ಇಲ್ಲಿ ವ್ಯಂಗ್ಯ ಮಾಡಲಾಗಿದೆ. ಹಾಗಾಗಿ ಈಗ ಹೊಸ ಹೆಸರನ್ನು ಕಾಂಗ್ರೆಸ್‌ನವರೇ ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: CM Siddaramaiah : ಬಿ.ಕೆ. ಹರಿಪ್ರಸಾದ್ ವಿರುದ್ಧ ಹೈಕಮಾಂಡ್‌ಗೆ ಸಿದ್ದು ಟೀಂ ದೂರು; ತಣ್ಣಗೆ ಮಾಡಿದರೇ ಖರ್ಗೆ?
ಜೆಡಿಎಸ್ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್, ಜೆಡಿಎಸ್‌ನವರು ಈಗ “ಜಾತ್ಯಾತೀತತೆ”ಯನ್ನು ವಿಸರ್ಜಿಸಲು ಹೊರಟಿದ್ದಾರೆ ಎಂದು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಕಾಲೆಳೆದಿದೆ. ಹೀಗಾಗಿ “ಜನತಾ ದಳ ಎಂಬ ಹೆಸರನ್ನು “ಕಮಲ ದಳ” ಎಂದು ಬದಲಿಸಿಕೊಂಡರೆ ಒಳಿತು” ಎಂಬ ಸಲಹೆಯನ್ನು ನೀಡಿದೆ.
ಬಿಜೆಪಿ ಬಗ್ಗೆಯೂ ಕಟು ಟೀಕೆ
ಇನ್ನು ಜೆಡಿಎಸ್ ಜತೆಗೆ ಮೈತ್ರಿಗೆ ಮುಂದಾಗಿರುವ ಬಿಜೆಪಿ ವಿರುದ್ಧವೂ ಕಾಂಗ್ರೆಸ್ ಟೀಕೆ ಮಾಡಿದೆ. ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಎಂದು ಕಳೆದ ಲೋಕಸಭೆಯಲ್ಲಿ ಬಿಜೆಪಿ ಟೀಕೆ ಮಾಡಿದ್ದನ್ನು ಉಲ್ಲೇಖಿಸಿರುವ ಕಾಂಗ್ರೆಸ್, “ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ?” ಎಂದು ಪ್ರಶ್ನೆ ಮಾಡಿದೆ.
ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಟೀಕೆ ಮಾಡಿದೆ. ಜತೆಗೆ ಸೈದ್ಧಾಂತಿಕ ವಾದದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದೆ.
ಟ್ವೀಟ್‌ನಲ್ಲೇನಿದೆ?
“ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು. ಆದರೆ ಈಗ “ಜಾತ್ಯಾತೀತತೆ”ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು “ಕಮಲ ದಳ” ಎಂದು ಬದಲಿಸಿಕೊಂಡರೆ ಒಳಿತು!
ಇತ್ತ ಕರ್ನಾಟಕ ಬಿಜೆಪಿಯವರು ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಟೀಕಿಸುತ್ತಿತ್ತು, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: Karnataka Politics : ಬಿ.ಕೆ. ಹರಿಪ್ರಸಾದ್ ಪರಿಣಾಮ ಎದುರಿಸಬೇಕಾದೀತು; ಮುಗಿಬಿದ್ದ ಕಾಂಗ್ರೆಸ್ ಸಚಿವರು!
ಜೆಡಿಎಸ್ ಎಂಬುದು ಬಿಜೆಪಿಯ ಬಿ ಟೀಂ: ಡಿ.ಕೆ. ಶಿವಕುಮಾರ್
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ ಎಂಬುದು ಬಿಜೆಪಿಯ ಬಿ ಟೀಂ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.