Site icon Vistara News

Karnataka Politics: ಕಾಂಗ್ರೆಸ್‌ ಭ್ರಷ್ಟಾಚಾರವನ್ನೂ ನಾನೇ ಎಕ್ಸ್‌ಪೋಸ್‌ ಮಾಡ್ತೀನಿ ಎಂದ ಕಾಂಟ್ರ್ಯಾಕ್ಟರ್‌ ಕೆಂಪಣ್ಣ

Siddaramaiah and D Kempanna

#image_title

ಬೆಂಗಳೂರು: ಈಗಿನ ಕಾಂಗ್ರೆಸ್‌ ಸರ್ಕಾರವೂ ಲಂಚ ಕೇಳಿದರೆ ಅದನ್ನು ನಾನೇ ಎಕ್ಸ್‌ಪೋಸ್‌ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಗುತ್ತಿಗೆ ಹಣ ಬಿಡುಗಡೆ ಮಾಡಲು 40% ಲಂಚ ಕೇಳುತ್ತಿದೆ ಎಂದು ಆರೋಪಿಸಿ ಕೋಲಾಹಲ ಸೃಷ್ಟಿಸಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದರು.

ರಾಜ್ಯದ ಗುತ್ತಿಗೆದಾರರಿಗೆ ಮೊದಲ ಆದ್ಯತೆ ನೀಡಬೇಕೆಂದು ಸಿಎಂಗೆ ಮನವಿ ಮಾಡಿರುವ ಕೆಂಪಣ್ಣ ನಿಯೋಗ, 2013 ರಿಂದ 2018ರವರೆಗೆ ಇದ್ದ LOC ವ್ಯವಸ್ಥೆ ಮರುಜಾರಿಗೆ ತರಲು ಒತ್ತಾಯಿಸಿದ್ದಾರೆ. ಬಾಕಿ ಬಿಲ್ ಬಿಡುಗಡೆಗೂ ಮನವಿ ಮಾಡಿದ್ದು, ಬಜೆಟ್ ಅಧಿವೇಶನದ ನಂತರ ಬಾಕಿ ಹಣ ಬಿಡುಗಡೆಗೆ ಪರಿಶೀಲನೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕೋದಾಗಿ ನಿಯೋಗಕ್ಕೆ ಭರವಸೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರ ಜತೆಗೆ ಮಾಧ್ಯಮಗಳ ಜತೆಗೆ ಕೆಂಪಣ್ಣ ಮಾತನಾಡಿದರು. ಎಲ್ಲಿ ಹೋಗಿದ್ದಾರೆ ಕೆಂಪಣ್ಣ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಕೆ ಪ್ರತಿಕ್ರಿಯಿಸಿ, ಮೂರು ವರ್ಷಗಳ ಕಾಲ ಅವರ ಸರ್ಕಾರದ ಬಗ್ಗೆ ನಾವು ಹೋರಾಟ ಮಾಡಿದ್ವಿ. ಆಗ ಬೊಮ್ಮಾಯಿ ಸಿಎಂ ಆಗಿದ್ರು ಯಾಕೆ ಸುಮ್ಮನೆ ಇದ್ರು? ಈಗ ಸರ್ಕಾರ ಬಂದು ಒಂದು ತಿಂಗಳಾಗಿದೆ ಎಂದರು. ಈ ಸರ್ಕಾರ 40% ಬಗ್ಗೆ ತನಿಖೆ ಮಾಡುತ್ತಾ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಈಗ ಮಾತನಾಡಲ್ಲ. ಸರ್ಕಾರಕ್ಕೆ ಏನು ಹೇಳಬೇಕೋ ಅದನ್ನ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ಆ ವಿಚಾರದಲ್ಲಿ‌ ನಾವು ಸಾಫ್ಟ್ ಆಗಲ್ಲ ಎಂದರು.

ಬಿಜೆಪಿ ಮೇಲಿನ 40% ಕಮೀಷನ್ ಆರೋಪದ ದಾಖಲಾತಿ ಬಿಡುಗಡೆ ಇನ್ನೂ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಕರಣ ಸದ್ಯ ಕೋರ್ಟ್‌ನಲ್ಲಿದೆ. ಅದರ ಕುರಿತ ದಾಖಲಾತಿಗಳನ್ನು ಸಮಯ ಬಂದಾಗ ಬಿಡುಗಡೆ ಮಾಡ್ತೀವಿ. ಈಗ ಬಾಕಿ ಬಿಲ್ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಬಾಕಿ ಬಿಲ್ ಬೇಗ ಬಿಡುಗಡೆ ಮಾಡುವ ಭರವಸೆಯನ್ನ ಸಿಎಂ ನೀಡಿದ್ದಾರೆ. 20 ಸಾವಿರ ಕೋಟಿ ರೂ. ಬಾಕಿ ಬಿಲ್ ಇದೆ ಎಂದರು. ಹಿಂದೆ ಬಿಜೆಪಿ ಸರ್ಕಾರ ವಿರುದ್ಧ 40% ಆರೋಪ ಮಾಡಿದ್ರಿ ಈಗ ಏನು ಮಾಡ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಅದರ ಬಗ್ಗೆ ಸಿಎಂ ಜೊತೆ ಪ್ರಸ್ತಾಪ ಮಾಡಿಲ್ಲ. ನಾನು ಬಾಕಿ ಬಿಲ್ ಬಗ್ಗೆ ಮಾತ್ರ ಪ್ರಸ್ತಾಪ ಮಾಡ್ತೀನಿ. ಬೇರೆ ವಿಷಯದ ಬಗ್ಗೆ ನಾನು ಮಾತನಾಡಲ್ಲ. ಈ ಸರ್ಕಾರದಲ್ಲಿ ಬಂದು ಒಂದು ತಿಂಗಳಾಗಿದೆ‌. ಇದುವರೆಗೂ ನನ್ನ ಬಳಿ ಬಂದು ಕಮಿಷನ್ ಕೊಡಿ ಎಂದು ಕೇಳಿಲ್ಲ. ಒಂದು ವೇಳೆ ಕಮಿಷನ್ ಕೇಳಿದ್ರೆ ನಾನೇ ಎಕ್ಸಫೊಸ್ ಮಾಡ್ತೀನಿ ಎಂದಿದ್ದಾರೆ.

ಕಮಿಷನ್‌ಗೆ ಸಂಪೂರ್ಣ ಕಡಿವಾಣ

ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಗುತ್ತಿಗೆದಾರರಿಗೆ ಸಮಸ್ಯೆ ಆಗಿದೆ. ಬಿಜೆಪಿ ಹಳಿ ತಪ್ಪಿಸಿರುವ ಆರ್ಥಿಕತೆಯನ್ನು ಸರಿಯಾಗಿಸಲು ಸ್ವಲ್ಪ ಸಮಯಾವಕಾಶ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನೇತೃತ್ವದ ನಿಯೋಗವು ತಮ್ಮನ್ನು ಭೇಟಿ ಮಾಡಿ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಮಿಷನ್ ಹಾವಳಿಗೆ ಕಡಿವಾಣ ಹಾಕಿ, ಸ್ಥಳೀಯ ಗುತ್ತಿಗೆದಾರರ ಹಿತಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.

ಬಜೆಟ್ ಮಂಡನೆಯಾಗಬೇಕಿದೆ. ಬಜೆಟ್ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಪರಿಶೀಲಿಸಲಾಗುವುದು. ಬಿಬಿಎಂಪಿಯಲ್ಲಿ 2000 ಕೋಟಿ ರೂ. ಹಾಗೂ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ. ಬಾಕಿ ಇರುವುದಾಗಿ ತಿಳಿಸಿದ ಕೆಂಪಣ್ಣ, ತಡೆಹಿಡಿದಿರುವ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡಬೇಕು ಹಾಗೂ ನಿರಾಕ್ಷೇಪಣಾ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಕೆಂಪಣ್ಣ ಮನವಿ ಮಾಡಿದರು.

ಇದನ್ನೂ ಓದಿ: Kempegowda Jayanti: ಕೆಂಪೇಗೌಡ ಜಯಂತಿಗೆ ರಾಜ್ಯಮಟ್ಟದ 2 ಕಾರ್ಯಕ್ರಮ: ಹಾಸನದಲ್ಲೊಂದು, ಬೆಂಗಳೂರಲ್ಲೊಂದು

Exit mobile version