Site icon Vistara News

Karnataka Politics : ನಿಗಮ-ಮಂಡಳಿ ಶಾಸಕರಿಗೆಂದ ಸಿಎಂ, ಕಾರ್ಯಕರ್ತರಿಗೂ ಬೇಕೆಂದ ಡಿಕೆಶಿ; ನೇಮಕ ಮುಂದೂಡಿಕೆ

CM siddaramaiah DCM DK shivakumar and Randeep singh surjewala

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) ಕಾಂಗ್ರೆಸ್‌ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರವನ್ನು ಹಿಡಿದಿದೆ. ಅಧಿಕಾರ ಹಿಡಿದು ಐದು ತಿಂಗಳಾಗುತ್ತಾ ಬಂದಿದೆ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಬರುತ್ತಿರುವುದರಿಂದ ರಾಜ್ಯ ರಾಜಕೀಯದಲ್ಲಿ (Karnataka Politics) ಚಟುವಟಿಕೆ ಗರಿಗೆದರಿವೆ. ಅಲ್ಲದೆ, ನಿಗಮ – ಮಂಡಳಿಗಳ ನೇಮಕಕ್ಕೆ ಕಾಂಗ್ರೆಸ್‌ ಒಳಗೆ ಲಾಬಿಗಳು ಶುರುವಾಗಿವೆ. ಇದೇ ಈಗ ಕಗ್ಗಂಟಾಗಿ ಪರಿಣಮಿಸಿದೆ.

ಶಾಸಕರಿಗೆ ಮಾತ್ರವಲ್ಲ, ಪಕ್ಷದ ಕಾರ್ಯಕರ್ತರಿಗೂ ಇದರಲ್ಲಿ ಸ್ಥಾನಮಾನಗಳನ್ನು ಕಲ್ಪಿಸಬೇಕು ಎಂಬ ಕೂಗು ಈಗಾಗಲೇ ಎದ್ದಿದೆ. ಇದಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಸಹಮತವೂ ಇದೆ. ಆದರೆ, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ಇಲ್ಲಿ ಸ್ಥಾನ ಕಲ್ಪಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಇಂಗಿತ. ಇದೇ ಕಾರಣಕ್ಕಾಗಿ ನಿಗಮ – ಮಂಡಳಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಇನ್ನು ಕಾಂಗ್ರೆಸ್‌ ಆಂತರಿಕ ಕಲಹ ಶಮನಕ್ಕಾಗಿ ರಾಜ್ಯಕ್ಕೆ ಬಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (AICC general secretary Randeep Singh Surjewala) ಅವರಿಗೂ ಈ ಆಯ್ಕೆ ಕಗ್ಗಂಟನ್ನು ಬಿಡಸಲಾಗಿಲ್ಲ. ಈ ಕಾರಣಕ್ಕಾಗಿ ಇನ್ನೂ ಮೂರು ವಾರಗಳ ಕಾಲ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್ ಸಿಂಗ್‌ ಸುರ್ಜೇವಾಲ‌ ಅವರು ಕೆಪಿಸಿಸಿ ಕಚೇರಿಯಲ್ಲಿ ಸುದೀರ್ಘ 2 ಗಂಟೆ ಕಾಲ ಚರ್ಚೆ ನಡೆಸಿದರು. ಈ ವೇಳೆ ನಿಗಮ – ಮಂಡಳಿಗಳ ಆಯ್ಕೆ ಬಗ್ಗೆಯೂ ಮಾತುಕತೆಗಳು ನಡೆದಿವೆ. ನೇಮಕದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ.

ಸಿಎಂ – ಡಿಸಿಎಂ ಭಿನ್ನರಾಗ

ನಿಗಮ ಮಂಡಳಿಯ ನೇಮಕಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಒಮ್ಮತ ಮೂಡಿಲ್ಲ. ಶಾಸಕರಿಗೆ ಮಾತ್ರ ಸ್ಥಾನ ಕಲ್ಪಿಸೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ವಾದ ಮಂಡಿಸಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಪಕ್ಷದ ಕಾರ್ಯಕರ್ತರಿಗೂ ಮಣೆ ಹಾಕಬೇಕು. ಈಗಾಗಲೇ ನಾನು ಈ ಬಗ್ಗೆ ಹೇಳಿಕೆ ನೀಡಿದ್ದೇನೆ. ಅಲ್ಲದೆ, ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದರೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಇದು ಹೆಚ್ಚು ಸೀಟ್‌ ಗೆಲ್ಲಲು ಅನುಕೂಲ” ಎಂದು ಹೇಳಿದ್ದಾರೆ. ಇನ್ನು “ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ಹೆಚ್ಚು ಅನುದಾನ ನೀಡಲಾಗುತ್ತಿಲ್ಲ. ಅವರಿಗೆ ಸ್ಥಾನ ಕಲ್ಪಿಸುವುದರಿಂದ ಚುನಾವಣೆಗೆ ಅನುಕೂಲ ಆಗುತ್ತದೆ” ಎಂಬಿತ್ಯಾದಿ ಸೂತ್ರವನ್ನು ಸಿಎಂ ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. ಹೀಗಾಗಿ ನಾಯಕರ ನಡುವೆ ಒಮ್ಮತ ಮೂಡದೇ ಇರುವ ಕಾರಣಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಲಾಗಿದೆ,

ಇನ್ನೂ ಎರಡು ಮೂರು ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಬಂದಿದೆ. ಈ ಕಾರಣಕ್ಕಾಗಿ ಅಂತಿಮವಾಗಬೇಕಿದ್ದ ನಿಗಮ ಮಂಡಳಿ ಪಟ್ಟಿ‌ ಮುಂದೂಡಿಕೆಯಾಗಿದೆ.

ನವೆಂಬರ್‌ 17ರ ನಂತರ ನಿಗಮ-ಮಂಡಳಿಗಳಿಗೆ ನೇಮಕ

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಣದೀಪ್‌ ಸಿಂಗ್‌ ಸುರ್ಜೇವಾಲ, “ನಿಗಮ – ಮಂಡಳಿಗಳ ನೇಮಕ ಬಗ್ಗೆ ಇಂದು ಚರ್ಚೆ ಮಾಡಲಾಯಿತು. ಈ ವಿಚಾರವಾಗಿ ಇನ್ನು ನಾಲ್ಕೈದು ಸುತ್ತಿನ ಚರ್ಚೆ ನಡೆಯಬೇಕಿದೆ. ಸದ್ಯ ನನಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿದ್ದು, ಇದೇ ತಿಂಗಳು 17ರಂದು ಚುನಾವಣೆ ಪೂರ್ಣಗೊಂಡ ತಕ್ಷಣವೇ ನಾನು ಕರ್ನಾಟಕಕ್ಕೆ ಆಗಮಿಸುತ್ತೇನೆ. ಬಳಿಕ ಇದರ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದರು.

ಸಂಘಟನೆಯಲ್ಲಿ ಬದಲಾವಣೆ

ಸಭೆಯಲ್ಲಿ ಪಕ್ಷ ಸಂಘಟನೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚರ್ಚೆ ಆಗಿದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಹಾಲಿ ಪದಾಧಿಕಾರಿಗಳ ಪೈಕಿ ಹಲವರು ಶಾಸಕರು, ಸಚಿವರುಗಳಾಗಿದ್ದಾರೆ. ಅವರಿಗೆ ಸಂಘಟನಾ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕಿದೆ. ಯುವಕರಿಗೆ ಸಂಘಟನೆಯಲ್ಲಿ ಆದ್ಯತೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Politics : ಪಕ್ಷ ಹಾನಿ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ; ಸಚಿವ, ಶಾಸಕರಿಗೆ ಸುರ್ಜೇವಾಲ ವಾರ್ನಿಂಗ್

ಲೋಕಸಭೆಗೆ ಸಂಭಾವ್ಯ ಅಭ್ಯರ್ಥಿ ಫೈನಲ್‌ ಆಗದ್ದಕ್ಕೆ ಗರಂ

ಲೋಕಸಭಾ ಚುನಾವಣೆಗೆ ವೀಕ್ಷಕರನ್ನು ನೇಮಿಸಿದರೂ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಯನ್ನು ಮಾತ್ರ ಮಾಡಿರಲಿಲ್ಲ. ಈ ಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಯಾರ ಬಳಿಯಲ್ಲೂ ಉತ್ತರ ಇಲ್ಲದೇ ಇದ್ದಾಗ ಹೈಕಮಾಂಡ್‌ ನಾಯಕರು ಗರಂ ಆಗಿದ್ದಾರೆ. ಹೀಗಾಗಿ 15 ದಿನದೊಳಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಲು ಸೂಚನೆ ನೀಡಿದ್ದಾರೆ.

Exit mobile version