Site icon Vistara News

Karnataka Politics : ಡಿ.ಕೆ. ಶಿವಕುಮಾರ್ – ಸತೀಶ್‌ ಜಾರಕಿಹೊಳಿ ಭೇಟಿ; ಮಹತ್ವದ ಚರ್ಚೆ!

DK Shivakumar and Sathish Jarakiholi

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಇತ್ತೀಚೆಗೆ ಕಾಂಗ್ರೆಸ್‌ ಸರ್ಕಾರದ ಒಳಗಿನ ಭಿನ್ನಮತ ತೀವ್ರ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಈ ನಡುವೆ ಸಿಎಂ ಬದಲಾವಣೆ ಚರ್ಚೆಯೂ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೆ, ಬೆಳಗಾವಿ ರಾಜಕಾರಣ (Belagavi Politics) ಬೇರೆ ದಿಕ್ಕಿನಲ್ಲೇ ಸಾಗುತ್ತಿದೆ ಎಂಬ ಗುಸು ಗುಸು ಕೂಡಾ ಶುರುವಾಗಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ್‌ ಮೇಲೆ ಹಲವು ಕಾರಣಗಳಿಗೆ ಮುನಿಸಿಕೊಂಡಿದ್ದ ಸಚಿವ ಸತೀಶ್‌ ಜಾರಕಿಹೊಳಿ (Minister Satish Jarkiholi) ಶಾಸಕರ ಗುಂಪನ್ನು ಕಟ್ಟಿಕೊಂಡು ದುಬೈ ಪ್ರವಾಸಕ್ಕೆ ಹೋಗಲು ಸಜ್ಜಾಗಿದ್ದರು. ಬಳಿಕ ಕೆಲವೊಂದು ಸಂಧಾನದ ಮಾತುಕತೆ ಬಳಿಕ ಅವರು ತಣ್ಣಗಾಗಿದ್ದರು. ಈಗ ಸಚಿವ ಸತೀಶ್ ಜಾರಕಿಹೊಳಿ‌ ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ದಿಢೀರ್‌ ಭೇಟಿ ಮಾಡಿ‌ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅಲ್ಲಿಂದ ದೆಹಲಿಗೆ ಹೊರಡಲು ಅನುವಾಗಿದ್ದಾರೆ.

ಸಚಿವ ಸತೀಶ್‌ ಜಾರಕಿಹೊಳಿ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಕೆಲವು ಚರ್ಚೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಲೋಕಸಭಾ ಚುನಾವಣೆ ಸಮೀಪ ಬರುತ್ತಿದೆ. ಈ ವೇಳೆ ದುಬೈ ಪ್ರವಾಸ ಸೇರಿದಂತೆ ಇನ್ಯಾವುದೇ ಆಂತರಿಕ ವಿಷಯಗಳಿಗಾಗಿ ಕಚ್ಚಾಟ ನಡೆಸುತ್ತಿದ್ದರೆ, ಸಾರ್ವಜನಿಕವಾಗಿ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಭಾರಿ ಹೊಡೆತ ಬೀಳುತ್ತದೆ. ಅದೂ ಅಲ್ಲದೆ, ಡಿ.ಕೆ. ಶಿವಕುಮಾರ್‌ ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಹೆಚ್ಚಿನ ಸೀಟ್‌ ಗೆಲ್ಲುವ ಅನಿವಾರ್ಯತೆ ಸಹ ಅವರಿಗೆ ಇದೆ. ಈ ಎಲ್ಲ ಕಾರಣಗಳಿಂದ ಡಿ.ಕೆ. ಶಿವಕುಮಾರ್‌ ಅವರೇ ಖುದ್ದು ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಈ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನಕ್ಕೆ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ.

ಎಚ್ಚೆತ್ತುಕೊಂಡ ಡಿ.ಕೆ. ಶಿವಕುಮಾರ್

ಕಳೆದ ವಾರ‌ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಆಹ್ವಾನ ಇರಲಿಲ್ಲ. ಸಿಎಂ ಡಿನ್ನರ್ ಬಳಿಕ ಡಿಕೆಶಿ ಅಲರ್ಟ್ ಆಗಿದ್ದರು. ಸಚಿವರಾದ ಡಾ. ಎಚ್.ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಲು ನಿರ್ಧಾರ ಮಾಡಿದ್ದರು.

ಪಕ್ಷದಲ್ಲಿ ಒಳಗಿಂದೊಳಗೆ ಆಗುತ್ತಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಲು ಡಿ.ಕೆ. ಶಿವಕುಮಾರ್‌ ನಿರ್ಧಾರ ಮಾಡಿದ್ದಾರೆ. ಅದೂ ಅಲ್ಲದೆ, ಸೋಮವಾರ (ನ.6) ಮತ್ತೆ ಸತೀಶ್‌ ಜಾರಕಿಹೊಳಿ ಅವರಿಂದ ಸಿಎಂ ರೇಸ್‌ಗೆ ಎಂಟ್ರಿ ಕೊಡುವ ಮಾತುಗಳನ್ನು ಆಡಿದ್ದರು. ಅಲ್ಲದೆ, ಡಿ.ಕೆ ಶಿವಕುಮಾರ್‌ಗೆ ಹೈಕಮಾಂಡ್ ನಾಯಕರಿಂದ ಬುಲಾವ್ ಬಂದಿತ್ತು. ಅಲ್ಲಿಗೆ ಹೋಗುವ ಮುಂಚೆ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜತೆಗೆ ಬೆಳಗಾವಿ ರಾಜಕೀಯದ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಸಮಸ್ಯೆ ಇದೆ

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ನಾನು ಕೆಪಿಸಿಸಿ ಅಧ್ಯಕ್ಷರ ರೇಸ್‌ನಲ್ಲಿ ಇಲ್ಲ. ಸದ್ಯ ಇರುವ ಜವಾಬ್ದಾರಿ ಸಾಕಾಗಿದೆ. ಮುಂದೆ ದೊಡ್ಡ ಜವಾಬ್ದಾರಿ ನೋಡೋಣ. ಚುನಾವಣೆ ಆದ ಮೇಲೆ ಹೈಕಮಾಂಡ್ ಅಧ್ಯಕ್ಷರ ನಿರ್ಧಾರವನ್ನು ಮಾಡುತ್ತಾರೆ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬೇಡ. ಈ ಅವಧಿಯಲ್ಲಿ ನನಗೆ ಬೇಡ ಎಂದು ಹೇಳಿದ್ದಾರೆ.

ಇದನ್ನೂ ಓದಿ: Reservation Politics : ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೀಸಲಾತಿ ಸಂಕಷ್ಟ; ಸರ್ಕಾರದ ವಿರುದ್ಧ ಸಚಿವರ ʼಮುನಿʼ

ಸದ್ಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಜತೆ ಸಮಸ್ಯೆ ಇಲ್ಲ. ನಮ್ಮ ಜಿಲ್ಲೆಯಲ್ಲಿ ಒಂದಷ್ಟು ಸಮಸ್ಯೆ ಇವೆ. ಅವುಗಳನ್ನು ಬಗೆ ಹರಿಸಿಕೊಳ್ಳುತ್ತೇವೆ. ದಿನ ಒಂದು ಸಮಸ್ಯೆ ಉದ್ಭವ ಆಗುತ್ತಲೇ ಇರುತ್ತವೆ. ರಾಜಕೀಯವಾಗಿ ಸಮಸ್ಯೆ ಇರುತ್ತವೆ. ಎಲ್ಲ ಜಿಲ್ಲೆಯಲ್ಲಿ ಈ ಸಮಸ್ಯೆ ಇದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಸಮಸ್ಯೆ ಬೆಳಗಾವಿಯಲ್ಲಿ ಇತ್ತು. ಈಗಲೂ ಸಮಸ್ಯೆ ಇದ್ದೇ ಇದೆ ಎಂದು ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version