ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ 30 ಕೋಟಿ ರೂ. ಬಿಲ್ ಮಾಡಲಾಗಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಈ ಕುರಿತು ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಸುರೇಶ್, ಕರ್ನಾಟಕಕ್ಕೆ ಪಿಎಂ ಮೋದಿ 7 ಬಾರಿ ಬಂದಿದ್ದಾರೆ. ಮೋದಿ ಟೂರ್ ಡೀಲ್ ಕರ್ನಾಟಕದಲ್ಲಿ ನಡೆಯುತ್ತಿದೆ. 40% ಅಲ್ಲ ಬದಲಾಗಿ 200% ಡೀಲ್ ನಡೆಯುತ್ತಿದೆ. ಪ್ರಧಾನಿ ಹೆಸರನ್ನು ಇಟ್ಟುಕೊಂಡು ಡೀಲ್ ಬಿಜೆಪಿ ಮಾಡುತ್ತಿದೆ. ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಬಂದಿದ್ದರು ಮೋದಿ.
ಕೆಂಪೇಗೌಡರ ಮೇಲೆ ಗೌರವ ಇಟ್ಟು ಮಾಡಿದ್ದಾರೆ ಅಂದುಕೊಂಡಿದ್ದೆವು. ಆದರೆ ಕೆಂಪೇಗೌಡರ ಹೆಸರಿನಲ್ಲಿ ಡೀಲ್ ಮಾಡುತ್ತಿದ್ದಾರೆ. ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ 30 ಕೋಟಿ ರೂ. ಬಿಲ್ ಮಾಡಿದ್ದಾರೆ. 7 ಬಾರಿ ಬಂದಿದ್ದಾರೆ ಅಂದರೆ ಸಾರ್ವಜನಿಕ ಹಣ ಎಷ್ಟು ಲೂಟಿ ಮಾಡಲು ಸಜ್ಜಾಗಿದ್ದಾರೆ ಅಂದಾಯ್ತು. ಪ್ರಧಾನಿ ಹೆಸರಿನಲ್ಲಿ ಅವರ ಕಾರ್ಯಕ್ರಮಕ್ಕೆ 30 ಕೋಟಿ ರೂಐ., ಏರ್ ಪೋರ್ಟ್ ರಸ್ತೆಗೆ 8. 36 ಕೋಟಿ ರೂ. ಖರ್ಚು ಮಾಡಿದ್ದಾರೆ.
ಆದರೆ ಅಲ್ಲಿ ರಸ್ತೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಪಿಎಂ ಆ ರಸ್ತೆಯಲ್ಲಿ ಓಡಾಟ ನಡೆಸಿಲ್ಲ. ಹಾಗಾದರೆ ರಸ್ತೆ ರಿಪೇರಿ ಏಕೆ? ಪೆಂಡಾಲ್ ಹಾಕಲು 12 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಹಣದಲ್ಲಿ ಎರಡು ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. ನೀರು ಬಾಟಲ್ ಗೆ 1 ಕೋಟಿ ರೂ. ಖರ್ಚು ಮಾಡಿದ್ದಾರೆ. ಮೋದಿ ಅಥವಾ ಅಮಿತ್ ಶಾ ಕುಡಿಯುವ ನೀರಿನ ಬಾಟಲ್ ಕೊಟ್ರಾ? ಬಸ್‌ಗೆ 6.30 ಕೋಟಿ ರೂ. ಖರ್ಚು ಮಾಡಿದ್ದಾರೆ.
ಅಡುಗೆ ಮನೆ ಸೆಟಪ್‌ಗೆ ಸೆಟ್ ಟಪ್ 50 ಲಕ್ಷ ರೂ., ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 77 ಲಕ್ಷ ರೂ. ಕೊಟ್ಟಿದ್ದಾರೆ. ಕನ್ನಡಿಗರನ್ನು ಮೋಸ ಮಾಡಿದ್ದಾರೆ, ಪ್ರಧಾನಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಕೆಂಪೇಗೌಡ ಪ್ರತಿಮೆ ನಿರ್ಮಾಣ 50 ಕೋಟಿ ರೂ., ಆದರೆ ಕಾರ್ಯಕ್ರಮಕ್ಕೆ ಖರ್ಚು 30 ಕೋಟಿ ರೂ. ಆಗಿದೆ. ಅಮಿತ್ ಶಾ ಹೆಸರಿನಲ್ಲಿ 40-50 ಕೋಟಿ ರೂ. ಡೀಲ್ ನಡೆದಿದೆ. ಪ್ರಧಾನಮಂತ್ರಿ ಹೆಸರಿನಲ್ಲಿ 200-300% ರಷ್ಟು ಭ್ರಷ್ಟಾಚಾರ ನಡೆದಿದೆ. ಪಾಪ ಮೋದಿ ಅವರು ಇವರು ಕರೆಯುತ್ತಾರೆ ಎಂದು ಬಂದು ಹೋಗ್ತಾರೆ. ಪದೆ ಪದೆ ಬಂದು ಹೋಗ್ತಾರೆ. ಇದರ ಬಗ್ಗೆ ಅವರಿಗೆ ಗೊತ್ತಿಲ್ಲ ಎನ್ನಿಸುತ್ತದೆ ಎಂದರು.
ಇದನ್ನೂ ಓದಿ: Modi In Bengaluru | ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕ್ಷಣದ ವಿಶೇಷ ಫೋಟೋಗಳು ಇಲ್ಲಿವೆ