ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ರಾಜ್ಯದ ಮಾಜಿ ಆರೋಗ್ಯ ಸಚಿವ (Health Minister) ಡಾ. ಕೆ. ಸುಧಾಕರ್ (Dr. K Sudhakar) ಅವರ ಜಗಳ ಚುನಾವಣೆ ಮುಗಿದು ಎರಡುವರೆ ತಿಂಗಳಾಗುತ್ತಾ ಬಂದರೂ ನಿಂತಿಲ್ಲ. ರಾಜ್ಯದ ಪ್ರತಿಷ್ಠಿತ ಸಚಿವರಾಗಿದ್ದ ಸುಧಾಕರ್ ಅವರನ್ನು ಸವಾಲು ಹಾಕಿ ಸೋಲಿಸಿದ ಪ್ರದೀಪ್ ಈಶ್ವರ್ ಈಗಲೂ ಆಗಾಗ ಮಾಜಿ ಸಚಿವರನ್ನು ಕೆಣಕುತ್ತಿದ್ದಾರೆ. ಇದೀಗ ಅವರ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಜಗಳ ಇನ್ನೊಂದು ಹಂತವನ್ನು ತಲುಪಿದೆ. ಡಾ. ಕೆ ಸುಧಾಕರ್ ಅವರು ಈಗ ಪ್ರದೀಪ್ ಈಶ್ವರ್‌ಗೆ ಒಂದು ಸವಾಲು ಹಾಕಿದ್ದಾರೆ (Karnataka Politics).
ಧೈರ್ಯ ಇದ್ದರೆ ನೀನು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಹೊರಗೆ ಬಾ.. ನಾನು ಕೂಡಾ ಬಿಜೆಪಿಗೆ ರಾಜೀನಾಮೆ ಕೊಟ್ಟು ಬರ್ತೀನಿ. ಇಬ್ಬರೂ ಪಕ್ಷೇತರರಾಗಿ ಚುನಾವಣೆಗೆ ನಿಲ್ಲೋಣ. ಯಾರು ಗೆಲ್ತಾರೋ ನೋಡೋಣ: ಹೀಗೊಂದು ಸವಾಲು ಹಾಕಿದ್ದಾರೆ ಡಾ. ಕೆ. ಸುಧಾಕರ್.
ಶುಕ್ರವಾರ ಮಾತನಾಡಿದ ಅವರು, ಪದೇಪದೆ ಸೋತ ನಾಯಕ ಎಂದು ಗೇಲಿ ಮಾಡುವ ಪ್ರದೀಪ್ ಈಶ್ವರ್‌ಗೆ ಸವಾಲು ಹಾಕಿದರು.
“ನಿನ್ನ ಮುಖ ನೋಡಿ ಯಾರು ವೋಟೂ ಕೊಟ್ಟಿಲ್ಲ. ನೀನು ಇಂಡಿಪೆಂಡೆಂಟಾಗಿ ನಿಂತುಕೋ. ನಾನು ನಿಂತುಕೊಳ್ತೀನಿ. ಯಾರು ಗೆಲ್ತಾರೋ ನೋಡೋಣʼʼ ಎಂದು ಹೇಳಿರುವ ಅವರು, ʻʻನಾನು ಸೋತಿದ್ದೇನೆ ಸತ್ತಿಲ್ಲ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಹುಷಾರ್ʼʼ ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಅವರು ಇತ್ತೀಚೆಗೆ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂಬ ಆರೋಪ ಎದುರಾಗಿತ್ತು. ಶಾಸಕರು ಖಾಸಗಿ ಸ್ಥಳದಲ್ಲಿ ಅಧಿಕಾರಿಗಳ ಗುಪ್ತ ಸಭೆ ನಡೆಸಿ ಅಧಿಕಾರ ದುರಪಯೋಗಪಡಿಸಿಕೊಂಡಿದ್ದಾರೆ ಎಂದು ಡಾ. ಕೆ. ಸುಧಾಕರ್ ಅವರ ಆಪ್ತರು ಆರೋಪಿಸಿದ್ದರು.
ಸುಧಾಕರ್ ಬೆಂಬಲಿಗರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆಗೆ ಒತ್ತಾಯಿಸಿದ್ದರು. ಆಗ ಸುಧಾಕರ್ ಬೆಂಬಲಿಗ ಸಂತೋಷ್ ರಾಜ್ ಎಂಬಾತ ಶಾಸಕ ಪ್ರದೀಪ್ ಈಶ್ಬರ್ ವಿರುದ್ದ ಸವಾಲ್ ಹಾಕಿದ್ದರು.
ಇದಕ್ಕೆ ಪ್ರತಿಯಾಗಿ ತಾನೂ ಒಂದು ಸವಾಲು ಹಾಕಿದ್ದ ಪ್ರದೀಪ್ ಈಶ್ವರ್, ಮುಂದಿನ ಚುನಾವಣೆಯಲ್ಲಿ ಸುಧಾಕರ್ ಬೆಂಬಲಿತ ನಗರಸಭೆ ಸದಸ್ಯರಿಗೆ ಡಿಪಾಸಿಟ್ ಕೂಡಾ ಬರಲ್ಲ ಎಂದಿದ್ದರು.
ಈ ನಡುವೆ ಸುಧಾಕರ್ ಬೆಂಬಲಿಗ ಸಂತೋಷ್ ಮೇಲೆ ಶಾಸಕ ಪ್ರದೀಪ್ ಈಶ್ವರ್ ಬಂಬಲಿಗರು ಹಲ್ಲೆ ನಡೆಸಿದ್ದರು. ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ಸಚಿವ ಡಾ. ಕೆ. ಸುಧಾಕರ್ ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಮಾಜಿ ಸಚಿವ ಸುಧಾಕರ್ ಹಾಗು ಬೆಂಬಲಿಗರು ಪ್ರತಿಭಟನೆ ನಡೆಸಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ಎಸ್ಪಿಗೆ ದೂರು ನೀಡಿದ್ದರು. ಇದೀಗ ಪ್ರದೀಪ್ ಈಶ್ವರ್‌ಗೆ ಸುಧಾಕರ್ ನೇರ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: Vishweshwar Bhat: ಹುಚ್ಚ ವೆಂಕಟ್ 2 ಅಂದ್ರೆ ಬೇಜಾರ್ ಮಾಡ್ಕೋಬೇಡಿ: ಪ್ರದೀಪ್ ಈಶ್ವರ್‌ಗೆ ವಿಶ್ವೇಶ್ವರ ಭಟ್ ಸಲಹೆ