ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕೀಯದ (Adjustment politics) ಚರ್ಚೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿಯ ಒಂದು ಗುಂಪು ನಡೆಸುತ್ತಿರುವ ಗುಂಡಿನ ದಾಳಿ, ಲಿಂಗಾಯತ ನಾಯಕರನ್ನು (Lingayat leaders) ಮುಗಿಸುವ ಹುನ್ನಾರ ಎಂಬ ಕಾಂಗ್ರೆಸ್ ವ್ಯಾಖ್ಯಾನಕ್ಕೆ (Karnataka Politics) ಮಾಜಿ ಸಿಎಂ ತಿರುಗೇಟು ನೀಡಿದ್ದಾರೆ.
ಹೊಂದಾಣಿಕೆ ರಾಜಕೀಯದ ಬಗ್ಗೆ ಮೈಸೂರು ಸಂಸದ ಪ್ರತಾಪ್ ಸಿಂಹ (MP Pratapsimha) ಆಡಿರುವ ಮಾತುಗಳು ನೇರವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಟ್ಟುಕೊಂಡಿದ್ದು ಎಂದು ಕಾಂಗ್ರೆಸ್ ವಾದ. ಇದನ್ನೇ ಮುಂದಿಟ್ಟುಕೊಂಡು ಅದು ಬೊಮ್ಮಾಯಿ ಅವರನ್ನು ಕೆಣಕಿದೆ.
ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪರೋಕ್ಷ ಪ್ರತಿಕ್ರಿಯೆ ಎಂಬಂತೆ ಬಸವರಾಜ ಬೊಮ್ಮಾಯಿ ಅವರು ʻʻಹೊಂದಾಣಿಕೆ ರಾಜಕೀಯ ಜೀವಮಾನದಲ್ಲಿ ಮಾಡಿಲ್ಲʼʼ ಎಂದು ಹೇಳಿದ್ದರು. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಕೆಣಕಿದೆ.
ʻʻಜೋಶಿ, ಸಂತೋಷ್ ಅವರು ಪ್ರತಾಪ್ ಸಿಂಹ ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು ಬೊಮ್ಮಾಯಿ ಎದೆಗೆ ತಗುಲಿದೆ. ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್ಬೊ ಮ್ಮಾಯಿಯವರನ್ನು ಮುಗಿಸಿದರೆ “ಟಾರ್ಗೆಟ್ ಲಿಂಗಾಯತ” ಕಾರ್ಯಾಚರಣೆ ಪೂರ್ಣಗೊಳಿಸಿದಂತಾಗುತ್ತದೆʼʼ ಎಂದು ಕಾಂಗ್ರೆಸ್ ಹೇಳಿತ್ತು. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮುಗಿಸುವ ಕಾರ್ಯಾಚರಣೆಯ ಭಾಗವಿದು ಎನ್ನುವುದು ಕಾಂಗ್ರೆಸ್ ವ್ಯಾಖ್ಯಾನ.
ಕೌಂಟರ್ ನೀಡಿದ ಬಸವರಾಜ ಬೊಮ್ಮಾಯಿ
ʻಟಾರ್ಗೆಟ್ ಲಿಂಗಾಯತʼ ಎಂಬ ಕಾಂಗ್ರೆಸ್ ಟ್ವೀಟ್‌ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೌಂಟರ್ ನೀಡಿದ್ದು, ನಿಮ್ಮ ಪಕ್ಷದ ವಿಚಾರ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ʻʻಭಾರತೀಯ ಜನತಾ ಪಾರ್ಟಿ ಲಿಂಗಾಯತ ಸಮುದಾಯವನ್ನು ಯಾವಾಗಲೂ ಗೌರವದಿಂದಲೇ ನೋಡಿಕೊಂಡು ಬಂದಿದೆ. ಬಿಜೆಪಿ ಎಂಬುವ ಒಂದೇ ಗುಡಿ ಇದ್ದು ಎಲ್ಲರಿಗೂ ಪ್ರವೇಶವಿದೆ. ರಾಜ್ಯದಲ್ಲಿ ಕಡಿಮೆ ಅವಧಿ ಅಧಿಕಾರ ನಡೆಸಿದರೂ ನನ್ನ ಸಮೇತವಾಗಿ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿರುವುದೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಪಕ್ಷ ಕಳೆದ ಮೂವತೈದು ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ಜಗತ್ತಿಗೆ ಗೊತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಲಿಂಗಾಯತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲʼʼ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : BJP Politics : ಮತ್ತೆ ಪ್ರತಾಪ ತೋರಿದ ʻಸಿಂಹʼ; ಈ ಬಾರಿ ಬೊಮ್ಮಾಯಿಯೇ ನೇರ ಟಾರ್ಗೆಟ್!