ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತದಿಂದ ಅಧಿಕಾರವನ್ನು ಹಿಡಿದಿದೆ. ಇದೇ ವೇಳೆ, ಕರ್ನಾಟಕ ರಾಜಕಾರಣದಲ್ಲಿ (Karnataka Politics) ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸರ್ಕಾರ ರಚನೆಯಿಂದ ಹಿಡಿದು ಇಲ್ಲಿಯವರೆಗೂ ಅನೇಕ ರೀತಿಯ ಸಂಘರ್ಷಗಳನ್ನು ಎದುರಿಸುತ್ತಲೇ ಬಂದಿದೆ. ಸಚಿವರ ವಿರುದ್ಧ ಶಾಸಕರ ಅಸಮಾಧಾನ ಸ್ಫೋಟಗೊಂಡಿತ್ತು. ಈ ನಡುವೆ ಶನಿವಾರ (ಸೆಪ್ಟೆಂಬರ್ 2) ಶಾಸಕ ಬಸವರಾಜ ರಾಯರೆಡ್ಡಿ (MLA Basavaraj Rayareddy) ಅವರು ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದು ಅಸಮಾಧಾನವನ್ನು ಹೊರಹಾಕಿದ್ದರು. ಈಗ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ (KPCC vice president BL Shankar) ಅವರು, ಪಕ್ಷದ ಕೆಲವು ನಿರ್ಧಾರಗಳ ಬಗ್ಗೆ ಖಡಕ್ ಆಗಿಯೇ ಕುಟುಕಿದ್ದಾರೆ. ಹಣವಂತರನ್ನು ಬಿಟ್ಟು ಪಕ್ಷ ನಿಷ್ಠರಿಗೆ, ಶಾಸಕರಿಗಿಂತ ಕಾರ್ಯಕರ್ತರಿಗೆ ಅವಕಾಶ ಕೊಡಿ. ನಗರ ಸ್ಥಳೀಯ ಮಟ್ಟದ ಕಮಿಟಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು (Congress party workers) ನೇಮಕ ಮಾಡಿ ಎಂದು ಹೇಳಿದ್ದಾರೆ. ಅಲ್ಲದೆ, ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೆಸರನ್ನೂ ಪ್ರಸ್ತಾಪಿಸಿದ್ದಾರೆ.
ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ (KPCC Bharat Jodo Bhavan) ನಡೆಯುತ್ತಿರುವ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಹಣವಂತರು ಹೇಗಿದ್ದರೂ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಹಾಗಾಗಿ ಪಕ್ಷ ನಿಷ್ಠರಿಗೆ ಹೆಚ್ಚಿನ ಅವಕಾಶ ನೀಡಬೇಕು. ಶಾಸಕರಿಗಿಂತ ಹೆಚ್ಚಾಗಿ ಕಾರ್ಯಕರ್ತರಿಗೆ ಅವಕಾಶ ನೀಡಿ. ನಗರ ಸ್ಥಳೀಯ ಮಟ್ಟದ ಕಮಿಟಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಲು ಕ್ರಮವಹಿಸಿ ಎಂದು ಆಗ್ರಹಿಸಿದರು.
ಯತೀಂದ್ರ ಸಿದ್ದರಾಮಯ್ಯ ಅವರನ್ನು ಈಗ ಆಶ್ರಯ ಸಮಿತಿ ಸದಸ್ಯರಾಗಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಸಮಿತಿಗಳಿಗೆ ನೇಮಕ ಮಾಡಿ. ಮಾಜಿ ಶಾಸಕರು, ಚುನಾವಣೆಯಲ್ಲಿ ಸೋತಂಥವರನ್ನು ಮತ್ತೆ ಬೋರ್ಡ್, ಕಾರ್ಪೋರೇಷನ್‌ಗಳಿಗೆ ಸದಸ್ಯರನ್ನಾಗಿ ನೇಮಕ ಮಾಡುವುದು ಬೇಡ ಎಂದು ಬಿ.ಎಲ್. ಶಂಕರ್ ಖಡಕ್ ಆಗಿಯೇ ಹೇಳಿದ್ದಾರೆ.
ಬಿಜೆಪಿ ಸೋತಿದೆಯೇ?
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ, ಆದರೆ ಬಿಜೆಪಿ ಸೋತಿದೆಯೇ? ಎಂದು ಪ್ರಶ್ನೆ ಮಾಡಿದ ಬಿ.ಎಲ್. ಶಂಕರ್, ನಾವು ಹೆಚ್ಚಿನ ಸ್ಥಾನವನ್ನು ಗೆದ್ದಿರಬಹುದು. ಆದರೆ, ಬಿಜೆಪಿಯ ವೋಟ್ ಶೇರ್ ಹಾಗೆಯೇ ಇದೆ. ನಾವು ಬಿಜೆಪಿ ವೋಟ್ ಶೇರ್ ಹೆಚ್ಚಾಗುವುದಕ್ಕೆ ಬಿಟ್ಟರೆ ನಮಗೆ ಕಷ್ಟ. ಈ ಬಾರಿ ಇರುವಷ್ಟು ಅವಕಾಶ ಯಾವತ್ತೂ ಇರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳ ಸಭೆ ಸಮಾವೇಶವನ್ನು ಮಾಡಬೇಕು. ಅಲ್ಪಸಂಖ್ಯಾತ, ದಲಿತ ಮೇಲ್ವರ್ಗದ ಸಮುದಾಯಗಳೆಲ್ಲ ಈ ಬಾರಿ ನಮ್ಮ ಜತೆಗೆ ನಿಂತಿದ್ದಾರೆ. ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: Congress Politics : ಮತ್ತೆ ಸಿಡಿದೆದ್ದ ರಾಯರೆಡ್ಡಿ; ಸಚಿವರು ಮಾತ್ರವಲ್ಲ ಈಗ ಅಧಿಕಾರಿಗಳೂ ಮಾತು ಕೇಳ್ತಿಲ್ಲ!
ಅಸಮಾಧಾನದ ಮಾತೇ?
ಬಿ.ಎಲ್. ಶಂಕರ್ ಅವರು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರನ್ನು ಇದೇ ವೇಳೆ ಪ್ರಸ್ತಾಪ ಮಾಡಿದ್ದಾರೆ. ಅವರನ್ನು ಆಶ್ರಯ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಪಕ್ಷದ ನಿಷ್ಠಾವಂತರನ್ನು, ಕಾರ್ಯಕರ್ತರನ್ನೂ ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳ ಮಗ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಪರೋಕ್ಷ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದರೇ? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಅಲ್ಲದೆ, ಪಕ್ಷದಲ್ಲಿ ಅಧಿಕಾರ ಅನುಭವಿಸಿದವರಿಗೇ ಮಣೆ ಹಾಕುತ್ತಿರುವ ಸಂಸ್ಕೃತಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.