ಬೆಂಗಳೂರು: ರಾಜ್ಯ ಸರ್ಕಾರದ (Karnataka Politics) ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮುಂದುವರಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈ ಬಾರಿ ಭ್ರಷ್ಟಾಚಾರದ ದಾಖಲೆಯಾಗಿ ಆಡಿಯೋ ಫೈಲ್ ಇರುವ ಪೆನ್‌ಡ್ರೈವ್ ಹಿಡಿದೇ ಸದನಕ್ಕೆ ಆಗಮಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ, ಕೈಯಲ್ಲಿ ಪೆನ್‌ಡ್ರೈವ್ ಹಿಡಿದಿದ್ದರು. ಕುಮಾರಸ್ವಾಮಿ ಯಾವಾಗಲೂ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಎಂದು ಟೀಕಿಸುವವರಿಗೆ ಉತ್ತರ ನೀಡಲು ಎಂಬಂತೆ ಅದನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು. ಇದರಲ್ಲಿ ವರ್ಗಾವಣೆ ಅಕ್ರಮದ ಬಗೆಗಿನ ಆಡಿಯೋ ಇದೆ ಎಂದು ಹೇಳಿದರು.
ನಂತರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಕೆ.ಎಸ್.ಟಿ. ಇಟ್ಟವನಲ್ಲ. ಕುಮಾರಸ್ವಾಮಿ ಬಿಲ್ ಕಟ್ಟಿಲ್ಲ ಎಂದು ತಾಜ್ ವೆಸ್ಟೆಂಡ್ ಹೋಟೆಲಿನವರುಕಾಂಗ್ರೆಸ್‌ಗೆ ತಿಳಿಸಿದ್ದಾರೆಯೇ? ಎಂದು ಕಾಂಗ್ರೆಸ್ ಟ್ವೀಟ್ ಕುರಿತು ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನವರು ಯಾಕೆ ಮೈ ಪರಚಿಕೊಳ್ಳುತ್ತಿದ್ದಾರೆ? ನಾನೇನು ಬೀದಿಯಲ್ಲಿದ್ದವನ? ಎಂದರು.
ಚುನಾವಣೆ ನಡೆಸುತ್ತೇವೆ, ಹಲವಾರು ಜನ ಸಹಾಯ ಮಾಡ್ತಾರೆ. ತಾಜ್ ವೆಸ್ಟೆಂಡ್‌ನಲ್ಲಿ ಈಗಲೂ ರೂಮ್ ಇದೆ. ಇವರನ್ನು ಕೇಳಿ ನಾನು ರೂಮ್ ಮಾಡಬೇಕ? ಎಷ್ಟು ಗಂಟೆಗೆ ವಾಶ್‌ರೂಂಗೆ ಹೋಗಬೇಕು ಎಂದು ಕಾಂಗ್ರೆಸ್‌ನವರನ್ನ ಕೇಳಬೇಕಾ? ಎಂದು ಟ್ವೀಟ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದ ಎಚ್.ಡಿ. ಕುಮಾರಸ್ವಾಮಿ, ನಾನು ರೌಡಿಗಳಿಗೆ ಬಾಟಲ್ ತಂದುಕೊಟ್ಟವನಲ್ಲ. ನಾನು ಬ್ಲೂಫಿಲ್ಮ್ ತೋರಿಸಿದವನಲ್ಲ. ನನ್ನ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದರು.
ಸುಮ್ಮನೆ ಮೈ ಪರಚಿಕೊಳ್ಳಬೇಡಿ ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಸಮಯ ಬರಲಿ. ದಿನೇಶ್ ಗುಂಡೂರಾವ್ ಮೈ ಕೈ ಪರಚಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಮೈ ಕೈ ಪರಚಿಕೊಳ್ಳುತ್ತಿರುವುದು ಅವರು. ನಾವು ಸಮಚಿತ್ತರಾಗಿದ್ದೇವೆ. ಸೋತಿದಾಗಲೂ ಜನರ ಸೇವೆ ಮಾಡಿದ್ದೇವೆ ಎಂದರು.
ಕುಮಾರಸ್ವಾಮಿ ಆಸ್ತಿ ಎಷ್ಟಿದೆ ಎಂದು ಘೋಷಿಸಲಿ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಆಸ್ತಿ ಎಷ್ಡಿದೆ ಎಂದು ತನಿಖೆ ಮಾಡಲಿ. ರಾಜಕೀಯಕ್ಕೆ ಬರೋಕು ಮುನ್ನ ಎಷ್ಟಿತ್ತು, ಈಗ ಆಸ್ತಿ ಎಷ್ಟಿದೆ ತನಿಖೆ ಮಾಡಲಿ. ಅವರದೇ ಸರ್ಕಾರ ಇದ್ಯಲ್ಲ ತನಿಖೆ ಮಾಡಲಿ. ನಮ್ಮ ಸರ್ಕಾರದ ಅವಧಿಯನ್ನು ತನಿಖೆ ಮಾಡಿಸುತ್ತಾರಂತೆ ಮಾಡಿಸಲಿ.
ಈ ಸರ್ಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆಯಿದೆ ಎಂದು ಯಾರೊ ಹೇಳಿದರು ಎಂದು ವ್ಯಂಗ್ಯ ಮಾಡಿದ ಎಚ್.ಡಿ. ಕುಮಾರಸ್ವಾಮಿ, 2009ರಲ್ಲಿ ಮೂರು ಜನ ಸಿಎಂ ಯಾಕೆ ಬದಲಾದರು? ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪನವರು ನನ್ನ ಬಗ್ಗೆ ಒಂದೊಳ್ಳೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಹೊಸ ಅಧ್ಯಾಯ ಶುರುವಾಗಬೇಕು. ನನಗೆ ಯಾರು ಸಹಕಾರ ಕೊಡ್ತಾರೊ ಅವರ ಬೆಂಬಲ ತೆಗೆದುಕೊಳ್ಳುತ್ತೇನೆ ಎಂದರು.
ಬೆಂಗಳೂರಿನಲ್ಲಿ ಟನಲ್ ನಿರ್ಮಾಣ ಮಾಡಲಾಗುತ್ತದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿ, ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ ಹುಷಾರು. ಬೆಂಗಳೂರು ಅಭಿವೃದ್ಧಿ ಮಾಡೋಕೆ ಹೋಗಿ ಈಗಾಗಲೇ ಸಮಾಧಿ ಮಾಡಿದ್ದೀರ. ಬೆಂಗಳೂರು ಅಭಿವೃದ್ಧಿಗೆ ತಾಂತ್ರಿಕವಾಗಿ, ಪ್ರಾಯೋಗಿಕವಾಗಿ ಕೆಲಸ ಮಾಡಿ. ಟನಲ್ ಮಾಡೋಕೆ ಸಮಾಧಿ ಮಾಡಬೇಡಿ ಎಂದರು.
ಮತ್ತೆ ಪೆನ್‌ಡ್ರೈವ್ ತೋರಿಸಿದ ಎಚ್.ಡಿ. ಕುಮಾರಸ್ವಾಮಿ, ಸೋಮವಾರ ಎರಡು ಟ್ರಾನ್ಸ್‌ಫರ್ ಆಗಿದೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿ ರೂ.ಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ ಎಂದರು.
ಸದನದಲ್ಲಿ ಉತ್ತರಿಸುವೆ ಎಂದ ಸಿಎಂ
ಎಚ್.ಡಿ. ಕುಮಾರಸ್ವಾಮಿ ಆರೋಪ ಹಾಗೂ ಪೆನ್‌ಡ್ರೈವ್ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಹತಾಶೆರಾಗಿ ಮಾಡತ್ತಾ ಇದ್ದಾರೆ. ಹತಾಶರಾಗಿ ಸುಳ್ಳು ಹೇಳುತ್ತಿದ್ದಾರೆ. ಅದಕ್ಕೆಲ್ಲ ಅಸೆಂಬ್ಲಿಯಲಿ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಇಂಧನ ಸಚಿವ ಕೆ.ಜೆ. ಕಾರ್ಜ್ ಮಾತನಾಡಿ, ಪೆನ್‌ಡ್ರೈವನ್ನು ಸ್ಪೀಕರ್ ಕೈಗೆ ಕೊಡಲಿ, ಯಾರು ತಪ್ಪು ಮಾಡಿದ್ದರೋ ಕ್ರಮ ಆಗಲಿ. ಇಂಧನ ಇಲಾಖೆ ವರ್ಗಾವಣೆಯಲ್ಲಿ ಅಕ್ರಮ ಆಗಿದ್ರೆ ದಾಖಲೆ ಕೊಡಲಿ, ಪೆನ್ ಡ್ರೈವ್‌ನಲ್ಲಿ ಏನಿದೆ ತೋರಿಸಲಿ. ದಾಖಲೆ ವಿಡಿಯೋ ಬಿಡುಗಡೆ ಮಾಡಿದ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಅಂಥ ಹೊಲಸು ಕೆಲಸ ನಾನಂತೂ ಮಾಡಲ್ಲ, ಮಾಡಿಲ್ಲ. ಜೆಡಿಎಸ್‌ನವರಿಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ. ಅಂಥ ಅಭ್ಯಾಸ ನನಗಂತೂ ಇಲ್ಲ ಎಂದರು.