Site icon Vistara News

Karnataka Politics: ಹನಿಮೂನ್‌ ಪೀರಿಯಡ್‌ನಲ್ಲೇ ಹೀಗಾದ್ರೆ ಮುಂದೆ ಹೇಗೆ?: ಸರ್ಕಾರದ ದಮ್‌ ಪ್ರಶ್ನಿಸಿದ ಎಚ್‌.ಡಿ. ಕುಮಾರಸ್ವಾಮಿ

HD Kumaraswamy pressmeet 1

ಬೆಂಗಳೂರು: ಈ ಸರ್ಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು ತಾಕತ್ತು ಸರ್ಕಾರಕ್ಕೆ (Karnataka Politics) ಇದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಎಚ್‌.ಡಿ. ಕುಮಾರಸ್ವಾಮಿ, ಯಾರೋ ಒಬ್ಬರು ತಾಕತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳಿದ್ದಾರೆ. ಅದಕ್ಕೆ ಇದೇ ನನ್ನ ಉತ್ತರ. ನನ್ನ ಹತ್ತಿರ ದಾಖಲೆಗಳೂ ಇವೆ. ದಾಖಲೆ ಕೊಡುವ ದಮ್ಮು, ತಾಕತ್ತು ನನಗೆ ಇದೆ. ತನಿಖೆ ಮಾಡುವ ದಮ್ಮು, ತಾಕತ್ತು ಇವರಿಗೆ ಇದೆಯೇ? ಎಂದರು.

ಈ ಸರ್ಕಾರ ಇನ್ನೂ ಹನಿಮೂನ್ ಪೀರಿಯಡ್‌ನಲ್ಲಿ ಇದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್‌ ನವರು. ಸರ್ಕಾರಕ್ಕೆ ಐದು ಆರು ತಿಂಗಳಾದರೂ ಸಮಯ ಕೊಡಬೇಡವೇ ಎಂದು ಕೆಲವರು ಕೇಳುತ್ತಿದ್ದಾರೆ. ಹನಿಮೂನ್ ಪೀರಿಯಡ್‌ನಲ್ಲಿದ್ದರೆ ಹೀಗೆಲ್ಲಾ ಮಾಡುತ್ತಾರೆಯೇ? ಹನಿಮೂನ್ ಪಿರಿಯಡ್‌ನಲ್ಲೇ ಹೀಗಾದರೆ ಮುಂದಿರುವ ಪೀರಿಯಡ್‌ಗಳ ಕಥೆ ಏನು? ಎಂದರು.

ನನ್ನ ಆರೋಪಕ್ಕೆ ದಾಖಲೆ ಕೇಳ್ತಿದ್ದಾರೆ ಕಾಂಗ್ರೆಸ್ ನಾಯಕರು. ಅವರ ಕನಸು ನಾನು ಈಡೇರಿಸುತ್ತೇನೆ. ನಾನು ದಾಖಲೆ ಕೊಟ್ಟರೆ ಯಾವ ಮಂತ್ರಿಯ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆ ಮಂತ್ರಿಯನ್ನು ವಜಾ ಮಾಡ್ತಿರಾ? ಆ ಮಂತ್ರಿಯನ್ನು ವಜಾ ಮಾಡುವ ತಾಕತ್ ಇವರಿಗೆ ಇದೆಯಾ? ನಾನು ನನ್ನ ಬಳಿ ಇರುವ ದಾಖಲೆಯನ್ನು ಸದನದಲ್ಲಿಯೇ ಇಡುತ್ತೇನೆ. ನಾನು ದಾಖಲೆ ಕೊಟ್ಟರೆ ಈ ಸರ್ಕಾರ ಎಲ್ಲಿರುತ್ತೊ ಗೊತ್ತಿಲ್ಲ. ಸುಮ್ಮನೆ ಸ್ವಲ್ಪ ದಿನ ಈ ಸರ್ಕಾರ ನೆಮ್ಮದಿಯಾಗಿರಲಿ ಎಂದು ಬಿಟ್ಟಿದೀನಿ. ಸರ್ಕಾರ ತಿದ್ದಿಕೊಂಡರೆ ಒಳ್ಳೆಯದು ಎಂದು ಬಿಟ್ಟಿದೀನಿ ಅಷ್ಟೇ ಎಂದರು.

ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಕೊನೆಪಕ್ಷ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿಲ್ಲ. ಮಂತ್ರಿಯೊಬ್ಬರು ನಾನು ದಾಖಲೆ ಸಮೇತ ಆರೋಪ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಅದು ಯಾವ ದಾಖಲೆ ಕೊಟ್ಟಿದ್ದಾರೆ, ಯಾವ ತನಿಖೆ ನಡೆದಿದೆ ನಡೆದಿದೆ ಎನ್ನುವುದರ ಬಗ್ಗೆ ಮಾಹಿತಿ ಕೊಡಲಿ. ಚುನಾವಣೆ ಸಮಯದಲ್ಲಿ ಇವರು ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೆ ಜಾಹಿರಾತು ಕೊಟ್ಟರು. ಆದರೆ, ಒಂದು ದಾಖಲೆಯನ್ನಾದರೂ ಬಿಡುಗಡೆ ಮಾಡಿದಾರಾ? ಸುಳ್ಳು ದಾಖಲೆ ಹೇಳಿ ಅಧಿಕಾರಕ್ಕೆ ಬಂದಿದೀರಾ? ಎಂದು ಅವರು ಪ್ರಶ್ನಿಸಿದರು.

ನನ್ನ ಅವಧಿಯಲ್ಲಿ ನಡೆದ ವರ್ಗಾವಣೆಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿ. ಐದು ವರ್ಷ ಕಾಂಗ್ರೆಸ್ ಪಕ್ಷದ ಪೂರ್ಣ ಸರ್ಕಾರ ಇತ್ತಲ್ಲ, ಆ ಸರ್ಕಾರದ ಅವಧಿಯಲ್ಲಿ ನಡೆದ ವರ್ಗಾವಣೆಗಳ ಕುರಿತು ತನಿಖೆ ನಡೆಸಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇದನ್ನೂ ಓದಿ: BS Yediyurappa : ಸರ್ಕಾರದ ವಿರುದ್ಧ ಹೋರಾಟ; ಎಚ್‌.ಡಿ ಕುಮಾರಸ್ವಾಮಿ ನಡೆಯನ್ನು ಕೊಂಡಾಡಿದ ಬಿಎಸ್‌ವೈ

ಕಾಂಗ್ರೆಸ್‌ನವರು ಹಗಲು ದರೋಡೆಗೆ ಇಳಿದಿದ್ದಾರೆ. ವರ್ಗಾವಣೆ ದಂಧೆಗೆ ಹಣ ನಿಗದಿ ಮಾಡಿದ್ದಾರೆ ಅಂತ ಗೊತ್ತು. ಪ್ರತಿ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ಸಮಯ ಬಂದಾಗ ದಾಖಲೆ ಕೊಟ್ಟೆ ಕೊಡುತ್ತೇನೆ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ ಎಂದರು.

ನಾನು ಕೊಡುವ ದಾಖಲೆ ನೋಡಿದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಅಂತ ಮೊದಲು ಅವರು ಹೇಳಲಿ. ಈ ಬಗ್ಗೆ ಪ್ರಶ್ನೆ ಎತ್ತಿದವರು ಉತ್ತರ ಕೊಡಲಿ ಎಂದ ಕುಮಾರಸ್ವಾಮಿ, ಕೆಲವರು ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ. ಈಗಾಗಲೇ ಡಿ.ಕೆ. ಶಿವಕುಮಾರ್ ಅವರು ಟವೆಲ್ ಹಾಕಿದ್ದಾರೆ ಎಂದು ಅವರು ಟಾಂಗ್ ನೀಡಿದರು.

Exit mobile version