ಬೆಂಗಳೂರು: ಯೋಜನೆಗಳ ಜಾರಿ ಹಾಗೂ ಎಬಂಗಳೂರು ಅಭಿವೃದ್ಧಿ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಅಗತ್ಯ ಬಿದ್ದರೆ ಜನರಿಗಾಗಿ ಯುದ್ಧ ಮಾಡಲೂ ಸಿದ್ಧ ಎಂದಿದ್ದಾರೆ.
ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾಲ್ಕು ದಿನಗಳ ಕಾಲ 31 ಜಿಲ್ಲೆಗಳ ಸೋತ, ಗೆದ್ದ ಅಭ್ಯರ್ಥಿಗಳ ಜೊತೆ ಸಭೆ ಇಟ್ಟುಕೊಂಡಿದ್ದೇವೆ. ಮುಂದಿನ ಚುನಾವಣೆ ಅಜೆಂಡಾ ಇಟ್ಟುಕೊಂಡು ಸಭೆ ಮಾಡುತ್ತಿದ್ದೇವೆ. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ನೀರಾವರಿ ಮಂತ್ರಿ ಮೇಕೆದಾಟು ಯೋಜನೆ ಬಗ್ಗೆ ವೀರಾವೇಶದಿಂದ ಮಾತನಾಡಿದ್ದಾರೆ. ಅದಕ್ಕೆ ಒಳ್ಳೆಯ ಪ್ರಚಾರವು ಸಿಕ್ಕಿದೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ನೀರಾವರಿ ಯೋಜನೆಗಳನ್ನ ಸಂಪೂರ್ಣಗೊಳಿಸುವ ಕೆಲಸ ಮಾಡಿದ್ರೆ ಅದಕ್ಕೆ ನಮ್ಮ ಸಹಮತ ಇದೆ. ಆದ್ರೆ ಅದು ಹೇಳಿಕೆ ಮಾತ್ರ ಸೀಮಿತ ಆದ್ರೆ ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ದುರ್ಬಳಕೆ ಮಾಡುವ ವೇದಿಕೆ ಶುರು ಮಾಡಿದ್ದೆ ನೀವು. ಗ್ಯಾರಂಟಿಗಳಿಗೆ ಸಹಿ ಹಾಕಿದ್ದು ನೀವು, 200 ಯುನಿಟ್ ಕೊಡುತ್ತೇವೆ ಎಂದು ಹೇಳಿದ್ದು ನೀವು. 200 ಯುನಿಟ್ ಕೊಡುವ ಸಮಸ್ಯೆ ಈಗ ಅರಿವಾಯ್ತಾ..? ಈ ಹಿಂದೆ ಇಂಧನ ಸಚಿವರಾಗಿದ್ದ ನಿಮ್ಮ ಅಧ್ಯಕ್ಷರಿಗೆ ಗೊತ್ತಿರಲಿಲ್ಲವಾ ಕರೆಂಟ್ ದುರ್ಬಳಿಕೆ ಆಗುತ್ತೆ ಅಂತ ಸಿದ್ದರಾಮಯ್ಯನವರೇ?
ಚುನಾವಣೆ ಸಂದರ್ಭದಲ್ಲಿ ಯಾಕೆ ನಿರ್ಬಂಧ ಹಾಕ್ತಿರಾ ಅಂತ ಹೇಳಿರಲಿಲ್ಲ? ಮನೆ ಮಾಲೀಕರೆ ಎರಡು ಮೂರು ಮೀಟರ್ ಹೊಂದಿರುತ್ತಾರೆ. ಬಾಡಿಗೆದಾರರ ಪರಿಸ್ಥಿತಿ ಏನು? ಸ್ನೇಹಕ್ಕೂ ಸಿದ್ಧ ಸಮರಕ್ಕೂ ಸಿದ್ಧ ಅಂತ ಈಗ ಬೆಂಗಳೂರು ಅಭಿವೃದ್ಧಿ ಸಚಿವರು ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು. ಸ್ನೇಹಕ್ಕೂ ಸಿದ್ದ, ಯುದ್ದಕ್ಕೂ ಸಿದ್ದ ಎಂದಿದ್ದಾರೆ. ನಾವು ಇಲ್ಲಿ ಕೂತಿರೋದು ಸ್ನೇಹ ಮಾಡೋಕಲ್ಲ. ಅಗತ್ಯ ಬಿದ್ದರೆ ಜನರಿಗಾಗಿ ಯುದ್ದ ಮಾಡಲೂ ಸಿದ್ಧ ಎಂದರು.
ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಧರಣಿ ಮಾಡ್ತಾ ಇದಾರೆ, ಯಾವ ಕಾರಣಕ್ಕಾಗಿ ಧರಣಿ ಮಾಡ್ತಾ ಇದ್ದೀರ? ನಿಮ್ಮ ಕಾಲದಲ್ಲೇ ದರ ಹೆಚ್ಚಳಕ್ಕೆ ಅರ್ಜಿ ಹಾಕಿದ್ದು. ಎರಡು ರಾಷ್ಟ್ರೀಯ ಪಕ್ಷಗಳ ಈ ನಡವಳಿಕೆ ಗಮನಿಸಿ ಅಂತಲೇ ರಾಜ್ಯದ ಜನಕ್ಕೆ ನಾನು ಮನವಿ ಮಾಡೋದು.
ಎಲ್ಲದಕ್ಕೂ ದೆಹಲಿಗೆ ಅರ್ಜಿ ಹಿಡಿದುಕೊಂಡು ದೆಹಲಿಗೆ ಹೋಗಬೇಕಿದೆ. ಐದು ಗ್ಯಾರಂಟಿಗಳ ಬಗ್ಗೆ ನಾನು ಈಗಲೇ ಚರ್ಚೆ ಮಾಡಲ್ಲ. ನಾನು ಕಾಯುತ್ತೇನೆ. ಗ್ಯಾರಂಟಿ ಕೊಟ್ಟಿದ್ದು ತಪ್ಪಲ್ಲ. ಆದರೆ ಈಡೇರಿಸಬೇಕು. ಜುಲೈ 7ನೇ ತಾರೀಖು ಬಜೆಟ್ ಮಾಡುತ್ತಿದ್ದಾರೆ. ಗ್ಯಾರಂಟಿ ವಿಚಾರವಾಗಿ ಏನೂ ತೀರ್ಮಾನ ಮಾಡುತ್ತಾರೆ ಎಂದು ಕಾದು ನೋಡೋಣ.
ಜನ ಸಾಮಾನ್ಯರು ತೆರಿಗೆ ಕಟ್ಟುತ್ತಾರೆ, ಉಚಿತ ಕೊಡುವುದು ಧರ್ಮಕ್ಕೆ ಕೊಡಲ್ಲ, ಜನರ ಬದುಕು ಕಟ್ಟಲು ಕೊಡುತ್ತಾರೆ. ಯಾರು ಕೂಡ ಇಲ್ಲಿ ತಮ್ಮ ಮನೆಯಿಂದ ತಂದು ಕೊಡಲ್ಲ. ಒಂದು ಭರವಸೆ ಇಡೀರಿಸದಿದ್ರೆ ಒಂದು ದಿನವು ಸರ್ಕಾರ ಮುಂದುವರೆಸಲ್ಲ ಅಂತ ಹೇಳಿದ್ದು ನೀವು. ಅದರ ಬಗ್ಗೆ ಬಿಜೆಪಿ ರೀತಿ ಅತುರದಲ್ಲಿ ಮಾತನಾಡಲ್ಲ, ಮುಂದೆ ಮಾತನಾಡುತ್ತೇನೆ. 14ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ, ಈಗ ಸದ್ಯದ ಆರ್ಥಿಕ ತಜ್ಞರು ಅವರೇ. ಅವರು ಯೋಚನೆ ಮಾಡದೆ ಗ್ಯಾರಂಟಿ ಕೊಡಲ್ಲ ತಾನೇ? ಎಂದು ಸಿಎಂ ಸಿದ್ದರಾಮಯ್ಯ ಕುರಿತು ವ್ಯಂಗ್ಯ ಮಾಡಿದರು.
ಇದನ್ನೂ ಓದಿ: ಕಳೆದ ಲೋಕಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದು ನಾವೇ: ಶಾಸಕ ನರೇಂದ್ರಸ್ವಾಮಿ